More

    ದೀಪಾವಳಿ, ಪಟಾಕಿ ಸಂಭ್ರಮ: ಕಣ್ಣುಗಳ ಬಗ್ಗೆ ಏನೇನು ಎಚ್ಚರಿಕೆ ವಹಿಸಬೇಕು?

    ಬೆಂಗಳೂರು: ಇನ್ನೊಂದೆರಡು ದಿನಗಳು ಕಳೆದರೆ ಎಲ್ಲೆಡೆ ದೀಪಗಳ ಸಂಭ್ರಮ ಕಾಣಿಸುತ್ತದೆ, ಪಟಾಕಿಯ ಸದ್ದು ಕೇಳಿಸುತ್ತದೆ. ಪಟಾಕಿಗಳನ್ನು ಸಿಡಿಸಿ ಜನರು ತಮ್ಮ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳುವುದು ಸಹಜ. ಅದೇ ರೀತಿ ದೀಪಾವಳಿ ಸಂದರ್ಭದಲ್ಲಿ ಕಣ್ಣುಗಳಿಗೆ ಹಾನಿ ಆಗುವ ಜತೆಗೆ ಜನರು ಸುಟ್ಟಗಾಯಗಳಿಗೆ ಒಳಗಾಗುವ ಅಪಾಯ ಕೂಡ ಅಧಿಕ. ಈ ಹಿನ್ನೆಲೆಯಲ್ಲಿ ತಜ್ಞರು ಒಂದಷ್ಟು ಮುನ್ನೆಚ್ಚರಿಕೆಗಳನ್ನು ಸೂಚಿಸುತ್ತಾರೆ.

    ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳಿಂದ ಕಣ್ಣಿಗೆ ಗಾಯಗಳಾಗುವ ಪ್ರಕರಣ ಹೆಚ್ಚಾಗಿರುತ್ತದೆ. ದೀಪಾವಳಿಯಲ್ಲಿ ಕೈ ಮತ್ತು ಬೆರಳುಗಳ ನಂತರ ಕಣ್ಣುಗಳಿಗೇ ಅಪಾಯ ಜಾಸ್ತಿ. ಹೀಗಾಗಿ ಪಟಾಕಿಗಳ ಸಂತಸದಲ್ಲಿ ಕಣ್ಣಿನ ಸುರಕ್ಷತೆ ಬಗ್ಗೆಯೂ ಹೆಚ್ಚಿನ ಗಮನ ಇರಬೇಕು ಎಂದು ಡಾ.ಅಗರ್​​ವಾಲ್ಸ್​ ಕಣ್ಣಿನ ಆಸ್ಪತ್ರೆಯ ಕ್ಲಿನಿಕಲ್ ಸೇವೆಗಳ ಮುಖ್ಯಸ್ಥೆ ಡಾ.ಬಿಂದಿಯಾ ಹಪಾನಿ ತಿಳಿಸಿದ್ದಾರೆ.

    ಇದನ್ನೂ ಓದಿ: ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…

    ಪಟಾಕಿಗಳನ್ನು ಸಿಡಿಸುವವರು ಮಾತ್ರವಲ್ಲದೆ ನೋಡುಗರಿಗೂ ಅಪಾಯವಿದ್ದು, ಅವರಲ್ಲಿ ಶೇ. 50ಕ್ಕೂ ಹೆಚ್ಚು ಜನರು ಸಂಭಾವ್ಯ ಕಣ್ಣಿನ ಗಾಯಗಳನ್ನು ಎದುರಿಸುತ್ತಾರೆ ಎಂದಿರುವ ಅವರು ಒಂದಷ್ಟು ಮುನ್ನೆಚ್ಚರಿಕೆ ಹಾಗೂ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.

    ಪಟಾಕಿಗಳಿಂದ ಕಣ್ಣುಗಳಿಗೆ ಆಗುವ ಗಾಯಗಳಿಂದ ಇಲ್ಲವೇ ಪಟಾಕಿ ಕಿಡಿಯ ಸ್ಪರ್ಶದಿಂದ ಕುರುಡುತನ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಪಟಾಕಿಗಳಲ್ಲಿ ಗನ್ ಪೌಡರ್‌ನಲ್ಲಿ ಇರುವಂಥ ರಾಸಾಯನಿಕಗಳು ಇರುತ್ತವೆ. ಹೀಗಾಗಿ ಪಟಾಕಿ ಸಿಡಿಸುವ ಅಥವಾ ಸಿಡಿಸುವಂಥ ಜಾಗದಲ್ಲಿ ಹೋಗುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ.

    ಇದನ್ನೂ ಓದಿ: ಸಂಸತ್ತಿನ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿ: ಎಂದಿನಿಂದ, ಎಷ್ಟು ದಿನ? ಇಲ್ಲಿದೆ ವಿವರ..

    ಅದರಲ್ಲೂ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ಪಟಾಕಿಗಳನ್ನು ಸಿಡಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಏಕೆಂದರೆ ದೀರ್ಘಕಾಲದವರೆಗೆ ಶಾಖಕ್ಕೆ ಒಡ್ಡಿಕೊಳ್ಳುವುದು ಕಿರಿಕಿರಿಗೆ ಕಾರಣವಾಗಬಹುದು ಎಂದು ಡಾ. ಬಿಂದಿಯಾ ತಿಳಿಸಿದ್ದಾರೆ.

    ಪಟಾಕಿಯ ಕಿಡಿ-ಕಣ ಕಣ್ಣಿಗೆ ತಾಕಿದರೆ…

    • ನಿಮ್ಮ ಕಣ್ಣುಗಳನ್ನು ಉಜ್ಜಬೇಡಿ ಅಥವಾ ಗೀರಬೇಡಿ.
    • ನಿಮ್ಮ ಕಣ್ಣುಗಳು ಮತ್ತು ಮುಖವನ್ನು ಚೆನ್ನಾಗಿ ತೊಳೆಯಿರಿ.
    • ನೀವು ಕಣ್ಣಿನಲ್ಲಿ ಕಿರಿಕಿರಿ ಅನುಭವಿಸುತ್ತಿದ್ದರೆ ಅಥವಾ ಕಣ್ಣೊಳಗೆ ಏನಾದರೂ ಕಣ ಬಿದ್ದಿದ್ದರೆ ಕಂಗಳನ್ನು ಚೆನ್ನಾಗಿ ನೀರಿನಿಂದ ತೊಳೆಯಿರಿ.
    • ಒಂದು ಕಣ ಸಿಕ್ಕಿಹಾಕಿಕೊಂಡರೆ ಅಥವಾ ದೊಡ್ಡದಾಗಿದ್ದರೆ ಅದನ್ನು ತೆಗೆದುಹಾಕಲು ಪ್ರಯತ್ನಿಸಬೇಡಿ. ತಕ್ಷಣ ವೈದ್ಯಕೀಯ ನೆರವು ಪಡೆಯಿರಿ.
    • ರಾಸಾಯನಿಕಗಳಿಗೆ ಕಣ್ಣನ್ನು ಒಡ್ಡಿಕೊಂಡರೆ ಕಂಗಳಿಗೆ 30 ನಿಮಿಷಗಳ ಕಾಲ ನೀರು ಹಾಕಿ ಮತ್ತು ಕಣ್ಣಿನ ವೈದ್ಯರನ್ನು ಸಂಪರ್ಕಿಸಿ.
    • ಕಣ್ಣಿಗೆ ಒತ್ತಡ ಹಾಕಬೇಡಿ.
    • ವೈದ್ಯರ ಸೂಚನೆಯಿಲ್ಲದೆ ಅಂಗಡಿಯಲ್ಲಿ ಸಿಗುವ ಔಷಧ ಬಳಸುವುದನ್ನು ತಪ್ಪಿಸಿ. 

    ಈ ಮುನ್ನೆಚ್ಚರಿಕೆಗಳಿರಲಿ..

    • ಯಾವಾಗಲೂ ತೆರೆದ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸಿ, ಕನ್ನಡಕಗಳನ್ನು ಧರಿಸಿ ಮತ್ತು ಶುದ್ಧ ನೀರಿನಿಂದ ಕೈ ತೊಳೆಯಿರಿ.
    • ಮಕ್ಕಳು ಪಟಾಕಿ ಹಚ್ಚುವಾಗ ನಿಮ್ಮ ನಿಗಾ ಇರಲಿ.
    • ಪಟಾಕಿ ಹಚ್ಚುವ ಸ್ಥಳದಲ್ಲಿ ಒಂದು ಬಕೆಟ್ ನೀರು ಮತ್ತು ಮರಳು ಇರುವಂತೆ ನೋಡಿಕೊಳ್ಳಿ.
    • ಪಟಾಕಿಗಳನ್ನು ಮಕ್ಕಳ ಕೈಗೆ ಸಿಗದಂತೆ ಸುರಕ್ಷಿತವಾಗಿಡಿ.
    • ಪಟಾಕಿಗಳನ್ನು ನಿಮ್ಮ ಮುಖ, ಕೂದಲು ಮತ್ತು ಬಟ್ಟೆಯಿಂದ ದೂರವಿಡಿ.
    • ಪಟಾಕಿ ಸಿಡಿಸುವಾಗ ಸಿಂಥೆಟಿಕ್ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ.
    • ಪಟಾಕಿಗಳನ್ನು ಸಿಡಿಸುವಾಗ ಅಥವಾ ಪಟಾಕಿ ಸಿಡಿಸುವುದನ್ನು ವೀಕ್ಷಿಸುವಾಗ ಸುರಕ್ಷಿತ ಅಂತರ ಕಾಪಾಡಿಕೊಳ್ಳಿ.
    • ಪಟಾಕಿಗಳನ್ನು ಸಿಡಿಸುವ ಮೊದಲು ಕಾಂಟ್ಯಾಕ್ಟ್ ಲೆನ್ಸ್​ಗಳನ್ನು ತೆಗೆದುಹಾಕಿ ಮತ್ತು ಅದರ ಬದಲು ಕನ್ನಡಕಗಳನ್ನು ಬಳಸಿ.
    • ಬಳಸಿದ ಪಟಾಕಿಗಳನ್ನು ಒಂದು ಬಕೆಟ್ ನೀರಿನಲ್ಲಿ ನೆನೆಸಿ ಸರಿಯಾಗಿ ವಿಲೇವಾರಿ ಮಾಡಿ.
    • ಕಾಲುಗಳಿಗೆ ಪಾದರಕ್ಷೆ ಧರಿಸಿಯೇ ಪಟಾಕಿಗಳನ್ನು ಸಿಡಿಸಿ.

     

    ರಾಷ್ಟ್ರೀಯ ಹೆದ್ದಾರಿಯಲ್ಲೇ ಸ್ಟೂಲ್ ಇಟ್ಟು ಕುಳಿತು ಬಸ್​ಗೆ ತಡೆ; ಸಿನಿಮೀಯ ರೀತಿಯಲ್ಲಿ ಸ್ಥಳೀಯ ಪ್ರಯಾಣಿಕರಿಗೆ ನೆರವಾದ ಉದ್ಯಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts