More

    ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಗೆಲುವಿನ ಸಿಕ್ಸರ್!

    ನವಜೋತ್ ಸಿಂಗ್ ಸಿಧು. ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ಹೆಸರು. ಇತ್ತೀಚೆಗೆ ಅವರದೊಂದು ವಿಡಿಯೋ ವೈರಲ್ ಆಗಿತ್ತು. ಸಾಧಾರಣ ಕ್ರಿಕೆಟ್ ಆಟಗಾರನಾಗಿದ್ದ ಸಿಧು ಎಂಬ ಹುಡುಗ ಸಿಕ್ಸರ್ ಸಿಧು ಆಗಿ, ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಭಾಗವಾದ ಅದ್ಭುತ ಕಥೆಯನ್ನು ಅವರು ಅದರಲ್ಲಿ ಹೇಳಿಕೊಂಡಿದ್ದರು. ಎಂಥವರಲ್ಲೂ ಸ್ಪೂರ್ತಿ ಉಕ್ಕಿಸುವ ಆ ಕಥೆ ಹೀಗಿದೆ.

    1981ರ ಸಾಲಿನಲ್ಲಿ ಮೊದಲ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು ಸಿಧು. ಎರಡು ಪಂದ್ಯವಾಡಿದ್ದ ಅವರನ್ನು ತಂಡದಿಂದ ಕಿತ್ತೊಗೆಯಲಾಗಿತ್ತು. ಸಂಭಾವ್ಯ ಆಟಗಾರರಲ್ಲೂ ಆಯ್ಕೆಯಾಗಿರುವ ಸಾಧ್ಯತೆಗಳು ಇರಲಿಲ್ಲ. ಆ ದಿನ ಸಿಧು ಸ್ನಾನ ಮುಗಿಸಿ ಬರುತ್ತಿದ್ದರಷ್ಟೇ. ಪೇಪರ್ ಓದುತ್ತಿದ್ದ ತಂದೆಯ ಕಣ್ಣುತುಂಬ ನೀರು. ತಂದೆ ಅಳುತ್ತಿದ್ದುದನ್ನು ಮೊದಲ ಬಾರಿ ನೋಡಿದ್ದರು ಸಿಧು. ತಂದೆಯೇನು ಸಾಮಾನ್ಯ ವ್ಯಕ್ತಿಯೇ? ರಾಜ್ಯದ ಹಾಲಿ ಅಡ್ವೋಕೇಟ್ ಜನರಲ್ ಅವರು! ಎರಡು ಸಲ ಸಂಸತ್ ಸದಸ್ಯರಾಗಿದ್ದವರು, ನಾಲ್ಕು ಸಲ ಶಾಸಕರಾಗಿದ್ದವರು ಚಿಕ್ಕ ಹುಡುಗನಂತೆ ಅಳುತ್ತ ಯಾರಿಗೂ ಗೊತ್ತಾಗಬಾರದೆಂದು ದಿನಪತ್ರಿಕೆಯ ಹಿಂದೆ ಮುಖ ಮರೆಸಿಕೊಂಡಿದ್ದರು! ಸಿಧುಗೆ ಆಘಾತ! ಸುಮ್ಮನೆ ಬೇರೆ ಕೋಣೆಗೆ ಹೋಗಿ ಕುಳಿತು ಸಂಕಟ, ಪಶ್ಚಾತ್ತಾಪದಿಂದ ಬೇಯತೊಡಗಿದರು. ಅದುವರೆಗೆ ಕ್ರಿಕೆಟ್ ಪ್ರಾಕ್ಟೀಸ್ ಮಾಡಲು ತಂದೆ ಬೆಳಗ್ಗೆ ಐದು ಗಂಟೆಗೆ ಎಬ್ಬಿಸಿದರೆ ಸಿಧು ಮತ್ತೊಂದು ಕೋಣೆಗೆ ಹೋಗಿ ಮಲಗಿ ಬಿಡುತ್ತಿದ್ದರು. ಅಪ್ಪನಿಗೆ ಹೇಳಬಾರದೆಂದು ಮನೆಯ ಆಳುಗಳಿಗೆ ವಾರಕ್ಕೆ ಇಪ್ಪತ್ತು ರೂಪಾಯಿ ಲಂಚ. ಆಮೇಲೆ ಎದ್ದು ಟಿ ಶರ್ಟಿಗೆ ನೀರು ಚಿಮುಕಿಸಿಕೊಂಡು ಅಪ್ಪನ ಮುಂದೆ ಬರುವುದು. ಪ್ರತೀದಿನ ಇದೇ ಸುಳ್ಳು! ಆದರೆ ಸಿಧು ಪ್ರತಿದಿನವೂ ಮೋಸಗೊಳಿಸಿಕೊಂಡಿದ್ದು ತಂದೆಯನ್ನಲ್ಲ! ತನ್ನನ್ನೇ ಆಗಿತ್ತು!

    ಪರಿಶ್ರಮವಿಲ್ಲದೇ, ಅಭ್ಯಾಸವಿಲ್ಲದೇ ಭಾರತ ತಂಡದಲ್ಲಿ ಜಾಗ ಸಿಗಲು ಅದೇನು ಸಿಧು ಅವರ ಮನೆಯ ಕುರ್ಚಿಯಾಗಿರಲಿಲ್ಲವಲ್ಲ! ಅಡ್ವೋಕೇಟ್ ಜನರಲ್ ಆಗಿದ್ದ ತಂದೆ ಕೋರ್ಟಿಗೆ ಹೋದ ಮೇಲೆ ತಂದೆಯ ಕೋಣೆಗೆ ಬಂದರು ಸಿಧು. ದಿಂಬಿನಡಿಯಲ್ಲಿ ತಂದೆಯ ಕಣ್ಣೀರಿಗೆ ಕಾರಣವಾದ ಪತ್ರಿಕೆಯಿತ್ತು. ಪತ್ರಿಕೆ ಇಂಡಿಯನ್ ಎಕ್ಸ್​ಪ್ರೆಸ್! ಮುಖಪುಟದಲ್ಲೇ ರಾಜನ್ ಬಾಲಾ ಅವರ ಒಂದು ಪುಟ್ಟ ಲೇಖನವಿತ್ತು. ಲೇಖನದ ತಲೆಬರಹ ಹೀಗಿತ್ತು, ‘ನವಜೋತ್ ಸಿಧು; ದ ಸ್ಟ್ರೋಕ್​ಲೆಸ್ ವಂಡರ್’. ಅಂದರೆ ಬೌಂಡರಿ, ಸಿಕ್ಸ್​ನಂತಹ ಸ್ಟ್ರೋಕ್ ಹೊಡೆಯದೇ ಆಡುವವ ಎಂಬ ಬೇಡದ ಬಿರುದು! ಒಂದೊಂದೇ ರನ್ ಗಳಿಸಿ ಆಡುವ ಆಟಗಾರರ ಸಾಲಿಗೆ ತನ್ನನ್ನೂ ಸೇರಿಸಿದ್ದು ಸಿಧುಗೆ ಸಂಕಟವನ್ನು ಉಂಟುಮಾಡಿತು. ಆದರೆ ನಲವತ್ತು ಸಾಲುಗಳ ಆ ಲೇಖನ ಅವರ ಬದುಕನ್ನೇ ಬದಲಾಯಿಸಿತು! ಅವಮಾನದಿಂದ ನೊಂದು ಹೋಗಿದ್ದರು ಸಿಧು. ಕುದಿಯುತ್ತಿದ್ದರು ಕೂಡ. ಹೆಮ್ಮೆ ಅಹಂಕಾರ ಅಳಿದು ಕಣ್ಣೀರು ಹರಿದು ಹೋಗುತ್ತಲೇ ಇತ್ತು. ಹದಿನೇಳರ ಹುಡುಗ ನವಜೋತ್ ಬೊಗಸೆಯಲ್ಲಿ ನೀರು ತುಂಬಿಕೊಂಡು ಈ ಪ್ರತಿಜ್ಞೆ ಮಾಡಿದ- ‘ಸರದಾರ್ ಭಗವಾನ್ ಸಿಂಗ್ ಸಿಧು ಅವರ ಮಗ ನಾನಾಗಿದ್ದಲ್ಲಿ ಭಾರತಕ್ಕಾಗಿ ಆಡಿಯೇ ಆಡುತ್ತೇನೆ.’ ಆದರೆ ಪ್ರತಿಜ್ಞೆ ಮಾಡಿದ ಕೂಡಲೇ, ಗುರಿಗಳನ್ನು ಬರೆದಿಟ್ಟ ಕೂಡಲೇ ಸಾಧನೆ ಆಗಿಬಿಡುವುದಿಲ್ಲ. ಗುರಿ ಮೊದಲ ಹೆಜ್ಜೆ. ಅದಕ್ಕಾಗಿ ಹಗಲು-ರಾತ್ರಿ ಪ್ರಯತ್ನಿಸುವುದು ಮುಂದಿನ ಹೆಜ್ಜೆ. ನಮ್ಮಲ್ಲಿ ಬಹುತೇಕರು ಗುರಿಗಳನ್ನೇನೋ ಆವೇಶದಿಂದ ಬರೆದಿಡುತ್ತೇವೆ, ಆದರೆ ಅವನ್ನು ಕಾರ್ಯರೂಪಕ್ಕೆ ತರಲು ಅಲ್ಪಸ್ವಲ್ಪ ಪ್ರಯತ್ನ ಮಾಡಿ ಬಿಟ್ಟು ಬಿಡುತ್ತೇವೆ. ನಾವು ಬರೆದಿಟ್ಟ ಡೈರಿಯ ಪುಟಗಳು ವರ್ಷಗಳ ನಂತರ ನಮ್ಮನ್ನು ನೋಡಿ ವಿಷಾದದ ನಗುಬೀರುತ್ತಿರುತ್ತವೆ.

    ಆದರೆ ಸಿಧು ಬದುಕಿನಲ್ಲಿ ಏನಾಗಬೇಕು, ಅದು ಸಾಧ್ಯವಾಗಬೇಕಾದರೆ ಏನು ಮಾಡಬೇಕು ಎಂದು ನಿರ್ಧರಿಸಿಯಾಗಿತ್ತು. ಲೇಖನವನ್ನು ನೀಟಾಗಿ ಕತ್ತರಿಸಿ ತನ್ನ ಕಪಾಟಿಗೆ ಅಂಟಿಸಿಕೊಂಡ. ತನ್ನ ಬೆಲೆಬಾಳುವ ಬಣ್ಣದ ಬಟ್ಟೆಗಳು, ಜೀನ್ಸ್ ಎಲ್ಲವನ್ನೂ ಒಂದನ್ನೂ ಇಟ್ಟುಕೊಳ್ಳದೆ ಮನೆಯ ಕೆಲಸಗಾರರಿಗೆ ಹಂಚಿಬಿಟ್ಟ! ಬಿಳಿಯ ಬಟ್ಟೆಗಳು ಮತ್ತು ಟ್ರಾಕ್ ಸೂಟ್ ಮಾತ್ರ ಇಟ್ಟುಕೊಂಡ. ಹದಿನೇಳರ ವಯಸ್ಸಿನಲ್ಲಿ ಸಾಮಾನ್ಯವಾದ ಸ್ನೇಹಿತರ ಜತೆಗಿನ ತಿರುಗಾಟ, ಬೈಕ್ ಸವಾರಿ ಎಲ್ಲದಕ್ಕೂ ಪೂರ್ಣವಿರಾಮ ಇಟ್ಟ.

    ಅಲಾಮ್ರ್ ಇಲ್ಲದೇ ಬೆಳಗ್ಗೆ ಮೂರೂವರೆಗೆ ಎದ್ದುಬಿಡುತ್ತಿದ್ದ ಸಿಧು! ಅಪ್ಪ ಎಬ್ಬಿಸಿದರೂ ನೌಕರರಿಗೆ ಲಂಚ ಕೊಟ್ಟು ಮತ್ತೆ ಬೇರೆ ಕೋಣೆಗೆ ಹೋಗಿ ಮಲಗುತ್ತಿದ್ದ ಹುಡುಗನೆಲ್ಲಿ? ಬದಲಾದ ಹೊಸ ಹುಡುಗನೆಲ್ಲಿ? ಬದುಕಿನಲ್ಲಿ ತಾನು ಸಾಧಿಸಿದ್ದೆಲ್ಲವೂ ಪ್ರತಿಕೂಲ ಪರಿಸ್ಥಿತಿಯಿಂದಲೇ ಎನ್ನುತ್ತಾರೆ ಸಿಧು. ಇಚ್ಛಾಶಕ್ತಿಯ ಸಾಮರ್ಥ್ಯದ ಅರಿವಾದ ಮೇಲೆ ಸಿಧು ಮುನ್ನಡೆಯುತ್ತಲೇ ಹೋದರು. ತನ್ನನ್ನು ಪರಿಶ್ರಮ ಪಡುವುದರಿಂದ ತಡೆಯಲು ಸಾಧ್ಯವಿರುವ ವ್ಯಕ್ತಿ ತಾನು ಮಾತ್ರ ಎಂಬ ಸಾರ್ವಕಾಲಿಕ ಸತ್ಯವನ್ನು ಅರ್ಥ ಮಾಡಿಕೊಂಡರು. ಇಡೀ ಪಿಚ್​ಗೆ ನೌಕರರೊಂದಿಗೆ ಸೇರಿ ನೀರುಣಿಸುತ್ತಿದ್ದರು. ಪಿಚ್ ಮೇಲೆ ರೋಲರ್ ಉರುಳಿಸುತ್ತಿದ್ದರು. ಓಡುವುದು, ಪ್ರಾಕ್ಟೀಸ್ ಮಾಡುವುದು ನಿರಂತರವಾಗಿ ಸಾಗಿತು. ಮಧ್ಯಾಹ್ನ ಊಟವಾದ ಮೇಲೆ ಒಂದು ಗಂಟೆ ನಿದ್ರೆ, ಅಷ್ಟೇ. ಉಳಿದೆಲ್ಲ ಸಮಯ ಅಂದರೆ ಬೆಳಗ್ಗೆ ನಾಲ್ಕರಿಂದ ರಾತ್ರಿ ಹನ್ನೆರಡರವರೆಗೆೆ ಮೈದಾನದಲ್ಲೇ ಬೆವರು ಹರಿಸಲು ಪ್ರಾರಂಭಿಸಿದರು ಸಿಧು.

    ‘ದ ಸ್ಟ್ರೋಕ್​ಲೆಸ್ ವಂಡರ್’ ಎಂಬ ಪತ್ರಿಕೆಯ ತಲೆಬರಹ ಮತ್ತು ತಂದೆಯ ಕಣ್ಣೀರು ಇವೆರಡೂ ಸಿಧುಗೆ ಮುನ್ನಡೆಯಲು ಪ್ರೇರಕಶಕ್ತಿಯಾದವು. ಹಾಗಾಗಿ ದಿನವೂ ಸಿಕ್ಸರ್ ಹೊಡೆಯುವ ಅಭ್ಯಾಸ ಪ್ರಾರಂಭಿಸಿದರು! ಹತ್ತೋ ಇಪ್ಪತ್ತೋ ಅಲ್ಲ, ಬರೋಬ್ಬರಿ 126 ಸಿಕ್ಸ್​ಗಳು! ಒಂದು ದಿನವೂ ಬಿಡದೇ! ಸಿಕ್ಸ್ ಬಾರಿಸುವ ರಭಸಕ್ಕೆ ಸಿಧು ಹಸ್ತಗಳಿಂದ ರಕ್ತ ಸೋರುತ್ತಿತ್ತು! ರಕ್ತವನ್ನು ಹೀರಿಕೊಳ್ಳುವ ವಸ್ತುವಿರುವ ಕೈಗವಸುಗಳನ್ನು ಹಾಕಿಕೊಂಡು ತರಬೇತಿ ಮುಂದುವರಿಸಿದರು. ಮೂರು ತಿಂಗಳಲ್ಲಿ ತನ್ನ ಕೈಗಳು ಕಬ್ಬಿಣವಾಗಿದ್ದವು ಎಂದು ಸಿಧು ಹೇಳುತ್ತಾರೆ. ಸತತ ನಾಲ್ಕು ವರ್ಷ ತರಬೇತಿ ಮುಂದುವರಿಸಿದರು. ಭಾನುವಾರ ಬಿಟ್ಟು ಬೇರೆ ಯಾವ ದಿನವೂ ವಿಶ್ರಾಂತಿ ಪಡೆಯದೆ ಬೆಳಗ್ಗೆ ನಾಲ್ಕರಿಂದ ಹನ್ನೆರಡರವರೆಗೆ ನಿರಂತರವಾಗಿ ಪ್ರಾಕ್ಟೀಸ್ ನಡೆಯಿತು. ಅಂದರೆ ಸುಮಾರು ಹದಿನೆಂಟರಿಂದ ಹತ್ತೊಂಬತ್ತು ಗಂಟೆಗಳ ಕಾಲ ಕ್ರಿಕೆಟನ್ನೇ ಉಸಿರಾಡುತ್ತಿದ್ದರು ಸಿಧು! ಅಬ್ಬಾ! ಎಂಥ ಕಮಿಟ್​ವೆುಂಟ್! ಸುತ್ತಮುತ್ತಲಿನ ಹದಿನೈದು-ಹದಿನಾರು ವಯಸ್ಸಿನ ಮಕ್ಕಳಿಗೆ ತನ್ನ ಪಾಕೆಟ್​ವುನಿ ಕೊಟ್ಟು ವೇಗವಾಗಿ ಬಾಲ್ ಹಾಕಲು ಹೇಳುತ್ತಿದ್ದರು. ಆ ಹುಡುಗರೋ ಮಾಲ್ಕಂ ಮಾರ್ಷೆಲ್​ಗಿಂತ ವೇಗವಾಗಿ ಚೆಂಡೆಸೆಯುತ್ತಿದ್ದರೆಂದು ನೆನಪಿಸಿಕೊಂಡು ಮುಗುಳ್ನಗುತ್ತಾರೆ ಸಿಧು. ಒಂದು ದಿನವೂ ಬಣ್ಣದ ಬಟ್ಟೆ ಧರಿಸಲಿಲ್ಲ, ಹೊರಗಡೆ ಹೋಗಲಿಲ್ಲ. ಅಸಲಿಗೆ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದೇ ಸಿಧುಗೆ ಗೊತ್ತಿರಲಿಲ್ಲ. ಎಲ್ಲವನ್ನೂ ಪರಿತ್ಯಜಿಸಿ ಕಾಡಿಗೆ ತಪಸ್ಸಿಗೆ ಹೋದ ಸಂನ್ಯಾಸಿಯಂತಾಗಿದ್ದ ನವಜೋತ್ ಎಂಬ ತರುಣ. ಅಂಗಳದಲ್ಲಿ ಹ್ಯಾಲೋಜೆನ್ ದೀಪಗಳನ್ನು ಹಾಕಿಸಿಕೊಂಡು ರಾತ್ರಿಯೂ ಪ್ರಾಕ್ಟೀಸ್! ರಾತ್ರಿಯ ಊಟ ಮೇಜಿನ ಮೇಲಿರುತ್ತಿತ್ತು. ಅಲ್ಲಿಯೇ ಎಷ್ಟೋ ಸಲ ನಿದ್ದೆ ಬಂದುಬಿಡುತ್ತಿತ್ತು. ಮೂರುವರೆಗೆ ಎಚ್ಚರಾಗಿ ಹೊರಗೆ ಹೊರಟಾಗುತ್ತಿತ್ತು! ಹೀಗೆ ಸಿಧು ಬೆವರು ಹರಿಸುತ್ತಿರುವಾಗಲೇ ಒಂದು ದಿನ ಬೆಳಗ್ಗೆ ತಂದೆ ನಿಧನರಾದರು. ಮಗ ಭಾರತದ ರಾಷ್ಟ್ರೀಯ ತಂಡದಲ್ಲಿ ಆಡಬೇಕು ಎಂದು ಬೆಟ್ಟದಷ್ಟು ಆಸೆಯನ್ನಿಟ್ಟುಕೊಂಡಿದ್ದ ಜೀವ ಅದು. ಅದಾದ ಎರಡು ವಾರಗಳ ನಂತರ ಆಪ್ತರೆಲ್ಲ ಹೇಳಿದರು, ‘ಏಳು, ಅಪ್ಪನ ಕನಸು ನನಸಾಗಬೇಕೆಂದರೆೆ ನೀನು ಈ ದೇಶಕ್ಕಾಗಿ ಆಡಲೇಬೇಕು!’ ಪ್ರಾಕ್ಟೀಸ್ ಮುಂದುವರಿಯಿತು.

    ಆಗ ಬಂದಿದ್ದೇ ಶೀಷ್ ಮಹಲ್ ಪಂದ್ಯಾವಳಿ! ಆ ಪಂದ್ಯಾವಳಿಯಲ್ಲಿ ಸಿಧು ಏಳು ಶತಕಗಳನ್ನು ಬಾರಿಸಿದರು! ವಿಶ್ವಕಪ್​ನ ತಂಡಕ್ಕೆ ಆಯ್ಕೆಯಾದರು. ನಂತರದ ರಿಲಯನ್ಸ್ ವಿಶ್ವಕಪ್​ನಲ್ಲಿ ನಡೆದದ್ದು ಇತಿಹಾಸ! ಸತತ ನಾಲ್ಕು ಪಂದ್ಯಗಳಲ್ಲಿ ಸಿಧು ಅರ್ಧಶತಕಗಳನ್ನು ಬಾರಿಸಿದರು. ಮೂವತ್ತಾರು ಸಿಕ್ಸರ್​ಗಳು ಕೂಡ! ಶಾರ್ಜಾಗೆ ಹೋಗುತ್ತಿರುವಾಗ ವಿಮಾನಯಾನದ ನಡುವೆ ರವಿಶಾಸ್ತ್ರಿ ‘ನೀನು ಓದಲೇಬೇಕಾದ ಲೇಖನ ಒಂದಿದೆ’ ಎಂದು ಪತ್ರಿಕೆಯೊಂದನ್ನು ಕೊಟ್ಟು ಹೋದರು. ಅದು ‘ಖಲೀಜ್ ಟೈಮ್್ಸ’, ಶಾರ್ಜಾದ ಮುಖ್ಯ ಪತ್ರಿಕೆ. ಅದರ ಮುಖಪುಟದಲ್ಲಿ ದೊಡ್ಡ ಲೇಖನವೊಂದಿತ್ತು, ಬರೆದವರು ರಾಜನ್ ಬಾಲಾ! ಲೇಖನದ ತಲೆಬರಹ ಹೀಗಿತ್ತು; ‘ನವಜೋತ್ ಸಿಂಗ್ ಸಿಧು, ಫ್ರಂ ಅ ಸ್ಟ್ರೋಕ್​ಲೆಸ್ ವಂಡರ್ ಟು ಪಾಮ್ ಗ್ರೂವ್ ಹಿಟ್ಟರ್, ಅ ವರ್ಲ್ಡ್ ರೆಕಾರ್ಡ್ ಹೋಲ್ಡರ್’!! ನಂತರ ಸಿಧು ಹಿಂದಿರುಗಿ ನೋಡಲಿಲ್ಲ. ಸಿಕ್ಸರ್ ಸಿಧು ಆಗಿ ಹೆಸರಾದರು. ಮೂರು ಸಲ ಸಂಸದರಾದರು, ಎರಡು ದಶಕಗಳ ಕಾಲ ಕಾಮೆಂಟರೇಟರ್ ಆಗಿ ಖ್ಯಾತಿ ಗಳಿಸಿದರು. ಇವೆಲ್ಲಕ್ಕೂ ಕಾರಣ ಅವರ ಛಲ ಮತ್ತು ಪ್ರಯತ್ನ. ದಿನಕ್ಕೆ ಒಂದು ಗಂಟೆಯೂ ಶ್ರಮ ಪಡದೇ ಬರಿದೇ ದೂರು ಹೇಳುವವರ ಕಿವಿ ಹಿಂಡಿ ಪಾಠ ಹೇಳುವಂತಿದೆ ಸಿಧು ಯಶೋಗಾಥೆಯ ಹಿಂದಿನ ಬೆವರಿನ ಕಥೆ.

    ‘ಈ ಸಲ ಕಪ್ ನಮ್ದೆ’ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts