More

    ಛಲ ಬಿಡದೆ ನಿರಂತರವಾಗಿ ಪ್ರಯತ್ನಿಸಿದರೆ ಯಶಸ್ಸು ಸಾಧ್ಯ

    ಬೆಳಗಾವಿ: ವಯಸ್ಸಾದಂತೆ ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಅಂಗವಿಕಲತೆ ಎದುರಾಗುತ್ತದೆ. ಯಾವುದೇ ಸಂದರ್ಭದಲ್ಲಿಯೂ ಕೀಳರಿಮೆ ಬಿಟ್ಟು, ಛಲ ಹಾಗೂ ಸ್ವಾಭಿಮಾನದಿಂದ ಪ್ರಯತ್ನಿಸಬೇಕು. ಅಂದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಪ್ರಾದೇಶಿಕ ಉಪ ಆಯುಕ್ತೆ ನಜ್ಮಾ ಫಿರಜಾದೆ ಹೇಳಿದರು.

    ನಗರದಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬೆಳಗಾವಿ ಜಿಲ್ಲಾ ವಿಕಲಚೇತನರ ಕ್ರೀಡಾ ಸಂಘದ ಮೂರನೇ ವಾರ್ಷಿಕೋತ್ಸವ, ಕ್ರೀಡಾ ಸಲಕರಣೆ ವಿತರಣೆ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವೈಕಲ್ಯದ ಬಗ್ಗೆ ಕೊರಗದೆ, ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    ಮನಸ್ಸಿನಲ್ಲಿ ಸಾಧಿಸುವ ಛಲ ಇಲ್ಲದಿರುವಾಗ ಸಾವಿರ ದೇವರನ್ನು ಪೂಜಿಸಿದರೆ ಏನು ಫಲ?. ಎಲ್ಲ ಸ್ಪರ್ಧಾಳುಗಳು ಅಂಗವಿಕಲತೆ ಮೆಟ್ಟಿ ನಿಂತಿರುವುದು ಶ್ಲಾಘನೀಯ. ಯಾವುದೇ ಕೊರತೆಗಳಿದ್ದರೂ ಇಲಾಖೆಯನ್ನು ಸಂಪರ್ಕಿಸಿ ಅಗತ್ಯ ನೆರವು ನೀಡುವುದಾಗಿ ಹೇಳಿದ ಅವರು, ತುರ್ತಾಗಿ ವೈಯಕ್ತಿಕ 10 ಸಾವಿರ ರೂ.ನೆರವು ನೀಡುವುದಾಗಿ ಹೇಳಿದರು.

    ಜಿಪಂ ಸಿಇಒ ಹರ್ಷಲ್ ಭೋಯರ್ ಮಾತನಾಡಿ, ಅಂಗವಿಕಲ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಕಾನೂನು ಚೌಕಟ್ಟಿನಲ್ಲಿ ಅಗತ್ಯ ಸಹಕಾರ ನೀಡಲಾಗುವುದು. ಸಂಘದ ಪದಾಧಿಕಾರಿಗಳು ಮನವಿ ಮಾಡಿರುವಂತೆ ಜಾಗ ಕಲ್ಪಿಸಿಕೊಡಲು ಶ್ರಮವಹಿಸುವುದಾಗಿ ಹೇಳಿದರು.

    ಇದೇ ಸಂದರ್ಭದಲ್ಲಿ ಅಂಗವಿಕಲ ಕ್ರೀಡಾಪಟುಗಳ ತರಬೇತುದಾರ ವಿ.ಎಸ್.ಪಾಟೀಲ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಜಿನೇಶ್ವರ ಪಡನಾಡ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುಖ್ತಾರ್ ಪಠಾಣ, ಸುರೇಶ ಯಾದವ್, ಮಾನವ ಬಂಧುತ್ವ ವೇದಿಕೆಯ ಪ್ರಕಾಶ ಬೊಮ್ಮನ್ನವರ, ಸುರಜ ದಾವಣೇಕರ, ಮನಿಶಾ ಹೊಂಗಲ, ಬಸಪ್ಪ ಸುನದೋಳಿ, ಈರಣ್ಣ ಹೊಂಡಪಗೋಳ, ಲಕ್ಷ್ಮೀ ರಾಯನ್ನವರ, ಲಿಲಿತಾ ಗೌಸ್, ಮಹೇಶ ಹೊಸುರ ಸೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts