More

    ದ.ಕ. ಕರೊನಾ ಸಂಖ್ಯೆ ಇಳಿಮುಖ, 70ರ ಅಜ್ಜಿಯೂ ಗುಣಮುಖರಾಗಿ ಮನೆಗೆ

    ಮಂಗಳೂರು: 10 ತಿಂಗಳ ಶಿಶು ಕೊವಿಡ್ ಮುಕ್ತವಾಗಿ ಮನೆಗೆ ಮರಳಿದ ಮರುದಿನವೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕರೊನಾ ಪಾಸಿಟಿವ್ ಆಗಿ ಚಿಕಿತ್ಸೆ ಪಡೆಯುತ್ತಿದ್ದ 70ರ ವೃದ್ಧೆ ಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

    ನಗರದ ಕೆಎಂಸಿ ಆಸ್ಪತ್ರೆಯಲ್ಲಿ 14 ದಿನಗಳ ಚಿಕಿತ್ಸೆ ಪಡೆದ ಕೇರಳದ ಕಾಸರಗೋಡು ಮೂಲದ ವೃದ್ಧೆ ಭಾನುವಾರ ಊರಿಗೆ ಮರಳಿದರು.
    ಮಾರ್ಚ್ 9ರಂದು ಸೌದಿ ಅರೇಬಿಯಾದಿಂದ ಪ್ರಯಾಣಿಸಿ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಈ ಮಹಿಳೆ ಆರೋಗ್ಯ ಸಮಸ್ಯೆಯೊಂದಿಗೆ ಮಾ.20ರಂದು ಮಂಗಳೂರಿನ ಕೆಎಂಸಿಗೆ ದಾಖಲಾಗಿದ್ದರು. ಮಧುಮೇಹದಿಂದ ಬಳಲುತ್ತಿದ್ದರಲ್ಲದೆ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಗಳಿದ್ದವು. ಕರೊನಾ ಲಕ್ಷಣ ಹಿನ್ನೆಲೆಯಲ್ಲಿ ರೋಗಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ ಅವರಿಗೆ ಕೊವಿಡ್-19 ಪಾಸಿಟಿವ್ ಇರುವುದಾಗಿ ಮಾ.24ರಂದು ಬಂದ ವರದಿ ತಿಳಿಸಿತ್ತು.

    ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಮೀಸಲಾದ ವಿಶೇಷ ಫ್ಲೂ ಚಿಕಿತ್ಸಾ ತಂಡದವರಿಂದ 14 ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು. ರೋಗಿಯ ಪುನರಾವರ್ತಿತ ಕೊವಿಡ್-19 ಪರೀಕ್ಷೆಯು ನೆಗೆಟಿವ್ ಆಗಿದ್ದರಿಂದ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅವರನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ. ರೋಗಿ ಹಾಗೂ ರೋಗಿಯ ಸಂಬಂಧಿಕರು ಆಸ್ಪತ್ರೆಯಲ್ಲಿ ತಂಗಿದ್ದಾಗ ನೀಡಿದ ವಿಶೇಷ ಆರೈಕೆ ಮತ್ತು ಚಿಕಿತ್ಸೆಗಾಗಿ ವೈದ್ಯರಿಗೆ, ದಾದಿಯರಿಗೆ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಗೆ ಧನ್ಯವಾದ ಸಲ್ಲಿಸಿರುವುದಾಗಿಯೂ ತಿಳಿಸಿದ್ದಾರೆ.

    5 ಮಂದಿ ಬಾಕಿ: ದ.ಕ. ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಆಗಿ ದಾಖಲಾಗಿರುವ 12 ಮಂದಿಯಲ್ಲಿ 7 ಮಂದಿ ಗುಣಮುಖರಾಗಿದ್ದಾರೆ. ಇನ್ನು 5 ಮಂದಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರ ಸ್ಥಿತಿಯಲ್ಲಿಲ್ಲ. ಶನಿವಾರವಷ್ಟೇ 10 ತಿಂಗಳ ಮಗು ಗುಣಮುಖವಾಗಿ ಕುಟುಂಬದವರೊಂದಿಗೆ ಮನೆಗೆ ತೆರಳಿತ್ತು. ಇದರೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿರುವ ಎಲ್ಲ ಎರಡು ಪಾಸಿಟಿವ್ ಕೇಸ್‌ಗಳೂ ಗುಣಮುಖವಾಗಿವೆ.

    ಹೊಸ ಪ್ರಕರಣವಿಲ್ಲ: ದ.ಕ. ಜಿಲ್ಲೆಯಲ್ಲಿ ಒಂದು ವಾರದಿಂದ ನಿರಂತರವಾಗಿ ಕರೊನಾ ನೆಗೆಟಿವ್ ವರದಿಗಳೇ ಬರುತ್ತಿವೆ. ಭಾನುವಾರವೂ ಸಿಕ್ಕಿರುವ ಎಲ್ಲ 28 ಲ್ಯಾಬ್ ವರದಿಗಳೂ ನೆಗೆಟಿವ್. ವೆನ್ಲಾಕ್ ಆಸ್ಪತ್ರೆಯ ವೈರಾಣು ಲ್ಯಾಬ್‌ಗೆ ಭಾನುವಾರ ಒಟ್ಟು 26 ಸ್ಯಾಂಪಲ್ ಕಳುಹಿಸಲಾಗಿದೆ. ಭಾನುವಾರ ಯಾವುದೇ ಸ್ಕ್ರೀನಿಂಗ್ ನಡೆದಿಲ್ಲ, ಇದುವರೆಗೆ ಒಟ್ಟು 38865 ಮಂದಿಯ ಸ್ಕ್ರೀನಿಂಗ್ ನಡೆಸಲಾಗಿದೆ. ಪ್ರಸ್ತುತ 2103 ಮಂದಿ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರೆ ಇಎಸ್‌ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆದವರ ಸಂಖ್ಯೆ 24. 3,940 ಮಂದಿ 28 ದಿನಗಳ ಕ್ವಾರಂಟೈನ್ ಪೂರೈಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts