More

    ಮೋದಿ ಆಡಳಿತದಲ್ಲಿ ದೇಶ ಅಧಃಪತನ

    ಮಂಗಳೂರು: ಆರ್ಥಿಕ ಕುಸಿತ, ಬಡತನ, ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಗಿ ಸಾಮಾಜಿಕ ನ್ಯಾಯ ಒದಗಿಸಲು ವಿಫಲರಾಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರಿಗೆ ಸಂವಿಧಾನದ ಬದ್ಧತೆ ಇದ್ದರೆ ತಕ್ಷಣ ಸರ್ವ ಪಕ್ಷಗಳ ಸಭೆ ಕರೆಯಬೇಕು ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

    ದೇಶದ ರಾಜಕಾರಣ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ. ವಿಶ್ವದ 127 ದೇಶಗಳಲ್ಲಿ ನಡೆಸಲಾದ ಬಡತನ ಸಮೀಕ್ಷೆಯಲ್ಲಿ ಭಾರತ 103ನೇ ಸ್ಥಾನದಲ್ಲಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅನ್ನಭಾಗ್ಯ ಯೋಜನೆ ಜಾರಿ ಮಾಡದಿರುತ್ತಿದ್ದರೆ ದೇಶ 110ನೇ ಸ್ಥಾನದಲ್ಲಿರುತ್ತಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪಾಕಿಸ್ತಾನದ ಜತೆ ಕಾಂಗ್ರೆಸ್ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಆ ದೇಶದ ಜತೆ ಸಖ್ಯ ಬೆಳೆಸಿದ್ದೇ ಬಿಜೆಪಿ ಹಾಗೂ ಮೋದಿ ಎಂದ ಅವರು, ಮೋದಿ ಅಧಿಕಾರಕ್ಕೆ ಬರುವಾಗ 2014ರಲ್ಲಿ 53.11 ಲಕ್ಷ ಕೋಟಿ ರೂ. ಇದ್ದ ದೇಶದ ಸಾಲ 2019 ಸೆಪ್ಟೆಂಬರ್‌ಗೆ 91.01 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶವನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಪರಿಶಿಷ್ಟ ಜಾತಿ-ಪಂಗಡದ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮರುಪರಿಶೀಲನಾ ಅರ್ಜಿ ಹಾಕಬೇಕು ಎಂದು ಒತ್ತಾಯಿಸಿದರು.
    ಶಾಸಕ ಯು.ಟಿ. ಖಾದರ್, ಮುಖಂಡರುಗಳಾದ ಟಿ.ಕೆ.ಸುಧೀರ್, ಸದಾಶಿವ ಉಳ್ಳಾಲ್, ಎನ್.ಎಸ್.ಕರೀಂ, ಸಂತೋಷ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

    ಲೂಟಿ ಮಾಡಿದವರೀಗ ಅರಣ್ಯ ಸಚಿವರು: ಅರಣ್ಯ ಸಚಿವರಾಗಿ ಆಯ್ಕೆಯಾಗಿರುವ ಆನಂದ ಸಿಂಗ್ ವಿರುದ್ಧ ಗಣಿಗಾರಿಕೆಗೆ ಸಂಬಂಧಿಸಿದ 15 ಕ್ರಿಮಿನಲ್ ಪ್ರಕರಣಗಳಿವೆ. ಅರಣ್ಯ ಲೂಟಿ ಮಾಡಿದವರಿಗೇ ಸಿಎಂ ಯಡಿಯೂರಪ್ಪ ಅರಣ್ಯ ಖಾತೆ ನೀಡಿದ್ದಾರೆ. ತಕ್ಷಣ ಅವರಿಂದ ಖಾತೆ ಹಿಂಪಡೆಯಬೇಕು ಇಲ್ಲವೇ ಜನತೆಗೆ ಸೂಕ್ತ ಉತ್ತರ ನೀಡಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts