More

    ಅಂತ್ಯಕ್ರಿಯೆ ನಡೆದ ಐದೇ ದಿನದಲ್ಲಿ ಜೀವಂತವಾಗಿ ಮನೆಗೆ ಮರಳಿದ ಸತ್ತ ವ್ಯಕ್ತಿ! ಪೊಲೀಸರ ನಿದ್ದೆಗೆಡಿಸಿದ ಪ್ರಕರಣವಿದು…

    ಪಟ್ಟಣಂತಿಟ್ಟ: ಮೃತಪಟ್ಟಿದ್ದಾನೆಂದು ಭಾವಿಸಿ ಕುಟುಂಬದ ಸದಸ್ಯರೆಲ್ಲರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದ ವ್ಯಕ್ತಿಯೊಬ್ಬ ನಿನ್ನೆ ಸಂಜೆ ಮರಳಿ ಮನೆಗೆ ಬಂದಿರುವ ಅಚ್ಚರಿಯ ಘಟನೆ ಕೇರಳದಲ್ಲಿ ನಡೆದಿದೆ. ಇದೀಗ ಈ ಪ್ರಸಂಗ ಪೊಲೀಸರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

    ಮರಳಿ ಬಂದಿರುವ ವ್ಯಕ್ತಿಯನ್ನು 70 ವರ್ಷದ ರಮಣ್​​ ಬಾಬು ಎಂದು ಗುರುತಿಸಲಾಗಿದೆ. ಈ ಘಟನೆ ಕೇರಳದ ಮಂಜತೋಡು ಆದಿವಾಸಿ ಕಾಲನಿಯ ರಮಣ್​ ಕುಟುಂಬಕ್ಕೆ ಅತೀವ ಸಂತೋಷ ತಂದಿದೆ. ಆದರೆ, ಇಡೀ ಕುಟುಂಬ ಸೇರಿ ಅಂತ್ಯಕ್ರಿಯೆ ನೆರವೇರಿಸಿದ ಮೃತದೇಹ ಯಾರದ್ದು ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದ್ದು, ಅದನ್ನು ಪತ್ತೆ ಹಚ್ಚುವ ಕೆಲಸ ಪೊಲೀಸರ ಮೇಲೆ ಬಿದ್ದಿದೆ.

    ನೀಲಕ್ಕಲ್​ ಮತ್ತು ಇಲವುಂಗಲ್​ ನಡುವೆ ಇರುವ ಅನಂಥರ ಎಂಬಲ್ಲಿ ಡಿಸೆಂಬರ್​ 30ರಂದು ಬೆಳಗ್ಗೆ ಮೃತದೇಹವೊಂದು ಪತ್ತೆಯಾಗಿತ್ತು. ಕಿವಿಯಿಂದ ರಕ್ತ ಬರುತ್ತಿದ್ದರಿಂದ ಕಾಡಾನೆ ದಾಳಿ ಮಾಡಿರಬಹುದು ಎಂದು ಮೊದಲಿಗೆ ಭಾವಿಸಲಾಗಿತ್ತು. ಅಲ್ಲದೆ, ನಿಲಕ್ಕಲ್ ಪೊಲೀಸರು ತನಿಖೆ ನಡೆಸಿದಾಗ ಅಚ್ಚನಕೋವಿಲ್ ದೇವಸ್ಥಾನಕ್ಕೆ ಹಬ್ಬಕ್ಕೆಂದು ತೆರಳಿದ್ದ ರಮಣ್​​ ಬಾಬು ಮನೆಗೆ ವಾಪಸ್ ಬಂದಿಲ್ಲ ಎಂದು ತಿಳಿದುಬಂದಿತ್ತು. ಪತ್ನಿ ಮತ್ತು ಮಕ್ಕಳು ಮೃತದೇಹವನ್ನು ಸಹ ಗುರುತಿಸಿದ್ದರು. ಬಳಿಕ ಮರಣೋತ್ತರ ಪರೀಕ್ಷೆಗೆಂದು ಮೃತದೇಹವನ್ನು ಕಳುಹಿಸಿದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬುದು ಖಚಿತವಾಯಿತು. ಇದಾದ ನಂತರ ಕಾಲನಿ ಸಮೀಪದ ಅರಣ್ಯ ಪ್ರದೇಶದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

    ಆದರೆ, ಶನಿವಾರ ಬೆಳಗ್ಗೆ 9.45ರ ಸುಮಾರಿಗೆ ರಮಣ್​ ಅವರು ಕೊನ್ನಿ-ಕೊಕತೋಡು ಅರಣ್ಯ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಅರಣ್ಯ ಸಿಬ್ಬಂದಿಯಾಗಿರುವ ಅವರ ಸಂಬಂಧಿಯೊಬ್ಬರು ನೋಡಿದ್ದಾರೆ. ಬಳಿಕ ಫೋಟೋ ತೆಗೆದು ರಮಣ್​ ಮಕ್ಕಳಿಗೆ ಕಳುಹಿಸಿದ್ದಾರೆ. ಆತ ರಮಣ್​​ ಬಾಬು ಎಂದು ಖಚಿತವಾದ ಕೂಡಲೇ ಆತನನ್ನು ನೀಲಕ್ಕಲ್​ ಪೊಲೀಸ್​ ಠಾಣೆಗೆ ಕರೆತರಲಾಯಿತು.

    ಕಾಡಿನಲ್ಲಿ ಬಿದ್ದಿದ್ದ ಮೃತದೇಹವು ಸಹ ತನ್ನ ತಂದೆಯಂತೆಯೇ ಇದ್ದಿದ್ದರಿಂದ ಯಾರಿಗೂ ಸಂಶಯ ಬರಲೇ ಇಲ್ಲ ಎಂದು ಅವರ ಮಗ ಅಝಕನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಾನಸಿಕವಾಗಿ ಕುಗ್ಗಿದ್ದ ರಮಣ್​ ಬಾಬು ತನ್ನ ಹಿರಿಯ ಮಗ ಬೋಸ್ ಜೊತೆ ವಾಸಿಸುತ್ತಿದ್ದು, ಏಳು ಮಕ್ಕಳಿದ್ದಾರೆ. ಇಡೀ ಕುಟುಂಬ ರಮಣ್​ ನೋಡಿ ಸಂತಸಗೊಂಡಿದೆ. ಆದರೆ, ಪೊಲೀಸರಿಗೆ ಈ ಪ್ರಕರಣ ಹೊಸ ತಲೆನೋವಾಗಿದೆ. ಏಕೆಂದರೆ, ಅಂತ್ಯಕ್ರಿಯೆ ನಡೆದ ಮೃತದೇಹ ಯಾರದ್ದು ಎಂಬುದನ್ನು ಪತ್ತೆಹಚ್ಚಬೇಕಿದೆ. ಈ ಹಿನ್ನೆಲೆ ತನಿಖೆ ಸಹ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಸಹಪಾಠಿಗೆ ‘ನಿಶ್ಚಿತಾರ್ಥ’ ಉಡುಗೊರೆ ನೀಡಿದ ನರ್ಸರಿ ಬಾಲಕ: ಈತ ಕೊಟ್ಟ ಚಿನ್ನದ ಮೊತ್ತ ಹೌಹಾರಿಸುವಂತಿದೆ…

    ಚಿರತೆ ಚರ್ಮ, ಉಗುರು ವಶ! 7 ಮಂದಿ ಬಂಧನ

    ರಾಮಮಂದಿರ ಉದ್ಘಾಟನೆ: ಅಯೋಧ್ಯೆಯಲ್ಲಿ ಕಾಣಸಿಗಲಿವೆ ರಾಮಾಯಣ ಕಾಲದ ಮರಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts