More

    ರೈಲಿನ ಸೀಟಿನ ಕೆಳಗೆ ಇಣುಕಿ ನೋಡಿದ ಮೆಕ್ಯಾನಿಕ್: ಆ ಚೀಲದಲ್ಲಿ ಇದ್ದದ್ದಾದರೂ ಏನು?

    ಬೆಂಗಳೂರು: ಸಂತೋಷ್ ಕುಮಾರ್ ಎಂಬುವವರು ರೈಲುಗಾಡಿಗಳ ಎ.ಸಿ. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಮಂಗಳವಾರ ರೈಲಿನ ಪ್ರಯಾಣಿಕರ ಸೀಟಿನ ಕೆಳಗೆ ಅವರಿಗೆ ಕಾಣಿಸಿದ ಚೀಲವೊಂದು ಅವರಿಗೆ ಜೀವನದುದ್ದಕ್ಕೂ ಮರೆಯಲಾಗದ ಅನುಭವ ತಂದುಕೊಟ್ಟಿದೆ.

    ಕೆಜಿಎಫ್‌ನಲ್ಲಿ ನೆಲೆಸಿರುವ ಸಂತೋಷ್, ಕರ್ತವ್ಯಕ್ಕೆ ರೈಲಿನಲ್ಲಿ ಓಡಾಡುತ್ತಿರುತ್ತಾರೆ. ಡಿ. 6ರಂದು ರಾತ್ರಿ ಪಾಳಿಯ ಕರ್ತವ್ಯಕ್ಕೆ ಬರಲು ಕೆಜಿಎಫ್‌ನ ಕೋರಮಂಡಲ ರೈಲು ನಿಲ್ದಾಣದಿಂದ ರಾತ್ರಿ 8.40ರ ಸುಮಾರಿಗೆ ಬಂಗಾರಪೇಟೆ-ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಸಂತೋಷ್ ಕುಳಿತ್ತಿದ್ದ ಸೀಟಿನ ಕೆಳಗೆ ದೊಡ್ಡ ಪ್ಲಾಸ್ಟಿಕ್ ಲಗೇಜ್ ಚೀಲ ಇರುವುದು ಕಂಡು ಬಂದಿದೆ. ಯಾರದೋ ಲಗೇಜ್ ಇರಬೇಕೆಂದು ಸಂತೋಷ್ ಸುಮ್ಮನಾಗಿದ್ದಾರೆ.

    ರಾತ್ರಿ 11 ಗಂಟೆಗೆ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನ ಮೂರನೇ ಪ್ಲಾಟ್‌ಫಾರ್ಮ್‌ಗೆ ರೈಲು ಬಂದಿದೆ. ಈ ವೇಳೆ ಸೀಟಿನ ಕೆಳಗೆ ಇದ್ದ ಚೀಲವನ್ನು ಯಾರೂ ತೆಗೆದುಕೊಳ್ಳಲು ಬರಲಿಲ್ಲ. ಇದರಿಂದ ಅನುಮಾನಗೊಂಡ ಸಂತೋಷ್, ರೈಲು ಗಾರ್ಡ್‌ಗೆ ವಿಚಾರ ತಿಳಿಸಿದ್ದಾರೆ. ಬಳಿಕ ಗಾರ್ಡ್, ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದ ಬಳಿಕ ಆರ್‌ಪಿಎಫ್ ಸಿಬ್ಬಂದಿ ಆ ಪ್ಲಾಸ್ಟಿಕ್ ಚೀಲವನ್ನು ಕೆಳಗೆ ಇಳಿಸಿ ಪರಿಶೀಲನೆ ಮಾಡಿದಾಗ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ.

    ರೈಲಿನ ಪ್ರಯಾಣಿಕರ ಸೀಟಿನ ಕೆಳಗೆ ಇರಿಸಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಬಂಗಾರಪೇಟೆ-ಸರ್ .ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ಬೈಯಪ್ಪನಹಳ್ಳಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಸುಮಾರು ೩೦-೩೫ ವರ್ಷದ ಮೃತ ಮಹಿಳೆಯ ಹೆಸರು, ವಿಳಾಸ ಸೇರಿ ಯಾವುದೇ ಗುರುತು ಪತ್ತೆಯಾಗಿಲ್ಲ. ಮಹಿಳೆಯ ಮೃತದೇಹದ ಕತ್ತಿನ ಭಾಗದಲ್ಲಿ ಗಾಯಗಳಾಗಿರುವುದು ಕಂಡು ಬಂದಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಬೆಂಗಳೂರು ದಂಡು ವೃತ್ತದ ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಪ್ರಭಾಕರ ಅವರು ತನಿಖೆ ನಡೆಸುತ್ತಿದ್ದಾರೆ. ತನಿಖೆಗೆ ಸಹಾಯಕರಾಗಿ ಪೊಲೀಸರ ಎರಡು ವಿಶೇಷ ತಂಡ ರಚಿಸಲಾಗಿದೆ. ಬಂಗಾರಪೇಟೆ ರೈಲ್ವೆ ಪೊಲೀಸ್ ಠಾಣೆ ಪಿಎಸ್‌ಐ ಬಿ.ಪಿ.ರಮೇಶ್ ನೇತೃತ್ವದ ಒಂದು ತಂಡ ಕೆಜಿಎಫ್, ಕೆಜಿಎಫ್‌ಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಗಡಿ ಗ್ರಾಮಗಳಾದ ವಿ.ಕೋಟ, ಕ್ಯಾಸಂಬಳ್ಳ, ಕುಪ್ಪುಂ ಸೇರಿ ಸುಮುತ್ತಲಿನ ಸ್ಥಳಗಳಲ್ಲಿ ಪತ್ತೆ ಕಾರ್ಯದಲ್ಲಿ ತೊಡಗಿದೆ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಪಿಎಸ್‌ಐ ಜಗದೀಶ್ ನೇತೃತ್ವದ ತಂಡ ಮಾಲೂರು, ಕೋಲಾರ ಸೇರಿ ಸ್ಥಳೀಯ ಸ್ಥಳಗಳಲ್ಲಿ ಪತ್ತೆ ಕಾರ್ಯದಲ್ಲಿ ನಿರತವಾಗಿದೆ. ಮೃತ ಮಹಿಳೆಯ ಗುರುತು ಪತ್ತೆಗಾಗಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು, ಗಡಿ ರಾಜ್ಯದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಪತ್ತೆ ಕಾರ್ಯ ಚುರುಕುಗೊಂಡಿದ್ದು, ಶೀಘ್ರದಲ್ಲೇ ಮೃತಳ ಗುರುತು ಹಾಗೂ ಕೊಲೆ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts