More

    ಬಡವರೇ ಡಿಸಿಸಿ ಬ್ಯಾಂಕಿನ ಶಕ್ತಿ: ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯ, 1.80 ಕೋಟಿ ರೂ. ಸಾಲ ವಿತರಣೆ

    ವೇಮಗಲ್: ಬಡವರು ಮೋಸಗಾರರಲ್ಲ, ಅದರಲ್ಲೂ ಮಹಿಳೆಯರಿಗೆ ಸಾಲ ನೀಡಿದರೆ ಯಾರದೇ ಹಂಗಿಲ್ಲದೆ ಸ್ವಾವಲಂಬಿ ಬದುಕು ರೂಪಿಸಿಕೊಂಡು ಪ್ರಾಮಾಣಿಕವಾಗಿ ಮರುಪಾವತಿಸಿ ಬ್ಯಾಂಕಿಗೆ ಶಕ್ತಿಯಾಗಿ ನಿಲ್ಲುತ್ತಾರೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.

    ಕೋಲಾರ ತಾಲೂಕಿನ ವೇಮಗಲ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಡಿಸಿಸಿ ಬ್ಯಾಂಕಿನಿಂದ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಶುಕ್ರವಾರ 1.80 ಕೋಟಿ ರೂ. ಸಾಲ ವಿತರಿಸಿ ಮಾತನಾಡಿ, ಪ್ರತಿ ಕುಟುಂಬಕ್ಕೂ ಹೆಣ್ಣು ಮಕ್ಕಳು ಆಸರೆಯಾಗಿ ನಿಂತಿದ್ದಾರೆ. ಹಾಲಿ ನೀಡುತ್ತಿರುವ 50,000 ರೂ. ಸಾಲವನ್ನು 1 ಲಕ್ಷಕ್ಕೇರಿಸುವ ಆಶಯ ಡಿಸಿಸಿ ಬ್ಯಾಂಕಿನದ್ದು ಎಂದರು.

    ಡಿಸಿಸಿ ಬ್ಯಾಂಕ್‌ನಿಂದ 7.73 ಲಕ್ಷ ಮಹಿಳೆಯರಿಗೆ ಸಾಲ ನೀಡಲಾಗಿದೆ. ಡಿಜಿಟಲೀಕರಣ ವಹಿವಾಟು ನಡೆಸಲಾಗುತ್ತಿದೆ. ಸಾಲಕ್ಕೆ ಡಿಸಿಸಿ ಬ್ಯಾಂಕ್, ಸೊಸೈಟಿಗೆ ಬರುವುದು. ವಹಿವಾಟಿಗೆ ವಾಣಿಜ್ಯ ಬ್ಯಾಂಕಿಗೆ ಹೋಗುವ ಕೆಟ್ಟ ಚಾಳಿ ಬಿಡಬೇಕು ಎಂದರು.
    ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಸಮಾಜದಲ್ಲಿ ಶೇ.50ರಷ್ಟಿರುವ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲು ಅಂಬೇಡ್ಕರ್ ಕಾನೂನು ಜಾರಿಗೆ ತಂದಿದ್ದಾರೆ. ಇದರಡಿ ಕಲ್ಪಿಸಲಾಗುತ್ತಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ನಾಯಕತ್ವ ಬೆಳೆಸಿಕೊಳ್ಳಬೇಕು ಎಂದರು.

    ಗ್ರಾಮೀಣ ಜನರ ಬದುಕು ಉತ್ತಮಗೊಳ್ಳಬೇಕು, ದುರ್ಬಲ, ಶೋಷಿತ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದು ಎಲ್ಲರ ಉದ್ದೇಶ. ಇದಕ್ಕೆ ಪೂರಕವಾಗಿ ಡಿಸಿಸಿ ಬ್ಯಾಂಕ್‌ನಿಂದ ಮಹಿಳೆಯರಿಗೆ ಸಾಲ ವಿತರಿಸುವ ಮೂಲಕ ಹಣಕಾಸು ವ್ಯವಹಾರದ ಜ್ಞಾನ ಮೂಡಿಸಲಾಗಿದೆ. ಇದನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.

    ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಡಿಸಿಸಿ ಬ್ಯಾಂಕ್‌ನಿಂದ ಎರಡೂ ಜಿಲ್ಲೆಯಲ್ಲಿ 900 ಕೋಟಿ ರೂ. ಸಾಲ ನೀಡಿದ್ದು, 7 ಲಕ್ಷ ಮಂದಿ ಮಹಿಳೆಯರು ಬ್ಯಾಂಕ್ ಖಾತೆ ಮಾಡಿಸಿ ಡಿಜಿಟಲ್ ಮೂಲಕ ವ್ಯವಹಾರ ನೀಡೆಸುತ್ತಿದ್ದಾರೆ. ಹಿಂದೆ ಸಮರ್ಪಕವಾಗಿ ವಹಿವಾಟು ನಡೆಸಲು ಆಗದೆ ಹಲವು ಸೊಸೈಟಿಗಳು ಮುಚ್ಚುವ ಸ್ಥಿತಿಗೆ ಹೋಗಿದ್ದವು. ಆದರೆ ವೇಮಗಲ್ ಸಂಘ ಸಕ್ರಿಯವಾಗಿ ನಡೆದುಕೊಂಡು ಬಂದಿದೆ ಎಂದರು.

    ಜಿಲ್ಲೆಯಲ್ಲಿ ಖಾಸಗಿ ಬಡ್ಡಿ ಲೇವಾದೇವಿದಾರರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಅಂತ್ಯ ಹಾಡಲು ಬ್ಯಾಂಕ್ ಮುನ್ನಡೆಯತ್ತ ಸಾಗಿದೆ. ನಬಾರ್ಡ್ 5 ಲಕ್ಷತನಕ ಆದಾಯ ಚಟುವಟಿಕೆ ನಡೆಸಲು ಸಾಲ ನೀಡುತ್ತಿದೆ. ಇದರ ಪ್ರಯೋಜನ ಪಡೆಯಲು ಮಹಿಳಾ ಸಂಘಗಳು ಮುಂದಾಗಬೇಕು ಎಂದರು.

    ಸಂಘದ ಅಧ್ಯಕ್ಷ ನಾಗೇಶ್‌ಗೌಡ, ನಿರ್ದೇಶಕರಾದ ಬೈರೆಡ್ಡಿ, ವ್ಯಾಪಣ್ಣ, ಶೈಲ, ವೀರಭದ್ರ, ವೀರೇಗೌಡ, ವೆಂಕಟರಾಮ್, ಪ್ರವೀಣ್, ರತ್ನಮ್ಮ, ಮಂಜುನಾಥ್, ನಾಗನಾಳ ಗ್ರಾ.ಪಂ ಸದಸ್ಯ ವಿ.ಮಂಜು, ಗುತ್ತಿಗೆದಾರ ಮಂಜುನಾಥ್ ಪಾಲ್ಗೊಂಡಿದ್ದರು.

    ಬಡವರ ಬಗ್ಗೆ ಭಾಷಣ ಬೇಡ, ನಿಜಕ್ಕೂ ಅವರ ಬಗ್ಗೆ ಕಾಳಜಿ ಇದ್ದರೆ ಅಂತಹವರು ಡಿಸಿಸಿ ಬ್ಯಾಂಕಿನಲ್ಲಿ ಉಳಿತಾಯದ ಹಣ ಠೇವಣಿ ಇಟ್ಟರೆ ಮತ್ತಷ್ಟು ಬಡವರಿಗೆ ನೆರವಾಗಲು ಡಿಸಿಸಿ ಬ್ಯಾಂಕ್ ಸಿದ್ಧವಿದೆ. ನಮಗೆ ಯಾವುದೇ ಸ್ವಾರ್ಥ, ರಾಜಕೀಯ ಕಾರಣಗಳಿಲ್ಲ, ಬಡ್ಡಿ ಮಾಫಿಯಾದಿಂದ ಮಹಿಳೆಯರನ್ನು ರಕ್ಷಿಸುವುದೇ ನಮ್ಮ ಮೂಲ ಉದ್ದೇಶ.
    ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts