More

    ಸೆ.15ರಂದು ನಗರದಲ್ಲಿ ಸಂವಿಧಾನ ಓದು: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

    ಮಂಡ್ಯ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15ರಂದು ಬೆಳಗ್ಗೆ 10 ಗಂಟೆಗೆ ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಜಿಲ್ಲಾ ಮಟ್ಟದ ಸಂವಿಧಾನ ಓದು ಕಾರ್ಯಕ್ರಮ ಆಯೋಜಿಸಲಾಗಿದೆ. ಸುಮಾರು 5 ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ಸಂವಿಧಾನ ಪೀಠಿಕೆ ಓದಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಮಟ್ಟದ ಅಧಿಕಾರಿಗಳು ಸಂವಿಧಾನ ಓದು ಕಾರ್ಯಕ್ರಮಕ್ಕೆ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲಾ, ತಾಲೂಕು ಹಾಗೂ ಗ್ರಾಮಮಟ್ಟದಲ್ಲಿರುವ ಕಚೇರಿ ಹಾಗೂ ವಿದ್ಯಾಸಂಸ್ಥೆಗಳು ತಮ್ಮ ಕಚೇರಿಯಲ್ಲಿ ಸಾಮೂಹಿಕವಾಗಿ ಸಂವಿಧಾನ ಪೀಠಿಕೆ ಓದಬೇಕು ಎಂದು ನಿರ್ದೇಶನ ನೀಡಿದರು.
    ಸಂವಿಧಾನದ ಪೀಠಿಕೆಯನ್ನು ಓದುವುದರೊಂದಿಗೆ ಎಲ್ಲರೂ ಆ ಪೀಠಿಕೆಗೆ ಬದ್ಧರಾಗಿರಬೇಕು. ಸಂವಿಧಾನಿಕ ತತ್ವಗಳನ್ನು ತಮ್ಮ ಜೀವನ ಮತ್ತು ಕರ್ತವ್ಯಗಳಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆ ಕೈಗೊಳ್ಳಬೇಕು. ಅಂದು ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ವಿದ್ಯಾರ್ಥಿ ನಿಲಯಗಳಲ್ಲಿ ಸಂವಿಧಾನ ಪೀಠಿಕೆ ಓದಬೇಕು. ಈ ಮೂಲಕ ಸಂವಿಧಾನ ಪೀಠಿಕೆಯ ಮಹತ್ವ ಹಾಗೂ ಸಂವಿಧಾನದ ಮೌಲ್ಯ ಮತ್ತು ತತ್ವಗಳನ್ನು ಜನರಿಗೆ ತಿಳಿಸಬೇಕು. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಇಒ ಸೇರಿ ತಾಲೂಕು ಕ್ರೀಡಾಂಗಣಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಬೇಕು ಎಂದರು.
    ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ ಇಲಾಖೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಸಂವಿಧಾನ ಪೀಠಿಕೆ ಓದುವಲ್ಲಿ ನೋಂದಣಿ ಮಾಡಿಸುವುದಕ್ಕೆ ಗುರಿ ನಿಗದಿಪಡಿಸಿದ್ದು, ಇದನ್ನು ಸೂಕ್ತವಾಗಿ ಪಾಲಿಸಿ ಎಂದು ಸೂಚನೆ ನೀಡಿದರು.
    ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿ 20 ಲಕ್ಷ ಜನಸಂಖ್ಯೆ ಇದ್ದು, ಈ ಪೈಕಿ 4 ಲಕ್ಷ ಜನ ನೋಂದಣಿ ಮಾಡುವ ಗುರಿ ನಿಗದಿಪಡಿಸಲಾಗಿದೆ. ಸಂವಿಧಾನ ಪೀಠಿಕೆ ಓದುವಲ್ಲಿ ದಾಖಲೆ ನಿರ್ಮಿಸುವ ಜಿಲ್ಲೆಗೆ ಮುಖ್ಯಮಂತ್ರಿ ಅವರು ಬಹುಮಾನ ಘೋಷಿಸಿದ್ದು, ಮಂಡ್ಯ ಜಿಲ್ಲೆ ಪ್ರಥಮ ಬಹುಮಾನ ಗಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿ ಎಂದು ಸೂಚಿಸಿದರು.
    ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್, ಡಿಡಿಪಿಐ ಶಿವರಾಮೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶ್ರೀನಿವಾಸ್ ಸೇರಿದಂತೆ ಎಲ್ಲ ತಹಸೀಲ್ದಾರ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts