More

    ಕಾಂಗ್ರೆಸ್‌ನಿಂದ ಶಿಕ್ಷಣ ಕ್ಷೇತ್ರ ಕಲುಷಿತ ವಿಜಯೇಂದ್ರ ಟೀಕೆ  ದಾವಣಗೆರೆಯಲ್ಲಿ ಮತದಾರರ ಸಮಾವೇಶ

    ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ. ಅದರ ಪಾವಿತ್ರ್ಯತೆ ಹಾಳು ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.
    ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಡಿಎ ಅಭ್ಯರ್ಥಿ ಡಾ.ವೈ.ಎ. ನಾರಾಯಣಸ್ವಾಮಿ ಪರ ಶಿರಮಗೊಂಡನಹಳ್ಳಿಯ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮತದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
    ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತರಲು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದರು. ಇದನ್ನು ತಡೆದು ಎಸ್.ಇ.ಪಿ. ಜಾರಿಗೆ ಮುಂದಾದ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹದಗೆಡಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ, ಗ್ರೇಸ್ ಮಾರ್ಕ್ಸ್ ಕಾರಣದಿಂದ ಸಮಸ್ಯೆಗಳನ್ನು ಹೆಚ್ಚಿಸಲಾಗಿದೆ ಎಂದ ವಿಜಯೇಂದ್ರ, ಕನ್ನಡವನ್ನು ಸರಿಯಾಗಿ ಬರೆಯಲು ಓದಲು ಬಾರದ ಮಧು ಬಂಗಾರಪ್ಪ ಅವರಿಗೆ ಶಿಕ್ಷಣ ಸಚಿವ ಸ್ಥಾನ ನೀಡಲಾಗಿದೆ. ರಾಜ್ಯ ಸರ್ಕಾರಕ್ಕಿರುವ ಶಿಕ್ಷಣದ ಬಗೆಗಿನ ಗಂಭೀರತೆಗೆ ಇದು ಸಾಕ್ಷಿಯಾಗಿದೆ ಎಂದು ವ್ಯಂಗ್ಯವಾಡಿದರು.
    ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ 17600 ಕೋಟಿ ರೂ. ಮೀಸಲಿಡುವ ಜತೆಗೆ ಹೊಸ ಶಾಲಾ ಕಟ್ಟಡ, ಪಪೂ ಕಾಲೇಜುಗಳ ನಿರ್ಮಾಣ ಹಾಗೂ ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡಲಾಗಿತ್ತು ಎಂದು ಹೇಳಿದರು.
    ಆಗ್ನೇಯ ಶಿಕ್ಷಕರ ಕ್ಷೇತ್ರ, ಪದವೀಧರದ ಕ್ಷೇತ್ರಗಳು ಹಣಬಲ ಇದ್ದವರ ಸ್ವತ್ತು ಆಗಬಾರದು. ಸಜ್ಜನ ವ್ಯಕ್ತಿ ಗೆದ್ದು ಬರಬೇಕು. ಈ ದಿಸೆಯಲ್ಲಿ ವೈ.ಎ.ನಾರಾಯಣಸ್ವಾಮಿ ಅವರನ್ನು ಶಿಕ್ಷಕ ಮತದಾರರು ಬೆಂಬಲಿಸಿ ಪುನರಾಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
    ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಗ್ಯಾರಂಟಿ ಯೋಜನೆ ಬಿಟ್ಟರೆ ಕಾಂಗ್ರೆಸ್ ಸರ್ಕಾರದ ಸಾಧನೆ ಏನಿಲ್ಲ. ಸ್ಟಾೃಂಪ್ ಡ್ಯೂಟಿ, ಅಬಕಾರಿ ಸುಂಕ, ವಿದ್ಯುತ್ ದರ ಏರಿಸಿ ಜನರ ಹಣವನ್ನೇ ಪಿಕ್‌ಪಾಕೆಟ್ ಮಾಡುತ್ತಿದೆ. ಅಭಿವೃದ್ಧಿ ಕಾರ್ಯಗಳು ಹಳ್ಳ ಹಿಡಿದಿವೆ ಎಂದು ಟೀಕಿಸಿದರು.
     ಕನ್ನಡ ಓದಲಿಕ್ಕೆ ಬಾರದ ಶಿಕ್ಷಣ ಸಚಿವರಿಗೆ ಎನ್‌ಇಪಿ ಹೇಗೆ ಅರ್ಥವಾದೀತು? ಅವರಿಂದ ಶಿಕ್ಷಣಕ್ಕೆ ನ್ಯಾಯ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಸಿ.ಟಿ. ರವಿ, ರಾಜ್ಯ ಸರ್ಕಾರ ಹಠಕ್ಕೆ ಬಿದ್ದು 5, 8 ಹಾಗೂ 9ನೇ ತರಗತಿಯ ಪಬ್ಲಿಕ್ ಪರೀಕ್ಷೆ ನಡೆಸಿತಾದರೂ ಫಲಿತಾಂಶ ಪ್ರಕಟವಾಗದೆ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪಣೆ ಮಾಡಿರುವುದು ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಿದೆ ಎಂದು ಕಟಕಿಯಾಡಿದರು.
    ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ವೈ.ಎ. ನಾರಾಯಣಸ್ವಾಮಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ದಿನಕ್ಕೊಂದು ಆದೇಶ ಹೊರಡಿಸಲಾಗುತ್ತಿದೆ. ಇದರಿಂದ ತುಘಲಕ್ ದರ್ಬಾರ್ ನಡೆಯುತ್ತಿದೆ. ಅವೈಜ್ಞಾನಿಕ ನಿರ್ಧಾರಗಳಿಂದ ಶಿಕ್ಷಕರ ಮೇಲೆ ದಬ್ಬಾಳಿಕೆ ಹಾಗೂ ಮಕ್ಕಳ ಮೇಲೆ ಭಯೋತ್ಪಾದನೆ ನಡೆಯುತ್ತಿದೆ ಎಂದು ಆರೋಪಿಸಿದರು.
    ಮಕ್ಕಳು ನಕಲು ಮಾಡಿದರೆ ಶಿಕ್ಷಕರನ್ನು ಅಮಾನತುಗೊಳಿಸುವ ಕ್ರಮ ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕಿದಂತಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ ಕುಸಿಯುವಂತೆ ಮಾಡಿ ಶಿಕ್ಷಕರನ್ನು ವಜಾಗೊಳಿಸುವ ಹುನ್ನಾರ ನಡೆದಿದೆ. ಅನುದಾನಿತ ಶಾಲೆಗಳ ಸಂಖ್ಯೆ ಇಳಿಕೆ, ಪಿ.ಯು. ಕಾಲೇಜುಗಳನ್ನು ಮುಚ್ಚಬೇಕೆಂಬ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
    ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ ಮಂಗಳೂರಲ್ಲಿ ಒಂದೇ ಒಂದು ಮತ ಅಸಿಂಧುವಾದ ಉದಾಹರಣೆ ಇಲ್ಲ. ನಮ್ಮ ಭಾಗದಲ್ಲಿ ಇವು ಹೆಚ್ಚಿವೆ. ಇದನ್ನು ತಡೆಯಬೇಕು ಎಂದು ಆಶಿಸಿದರು. ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ ಶಿಕ್ಷಕರು ಮತ್ತು ಪದವೀಧರ  ಕ್ಷೇತ್ರಗಳು ಬುದ್ಧಿವಂತರ ಕಣವಾಗಿವೆ. ಇಲ್ಲಿ ಕುಲಗೆಟ್ಟ ಮತಗಳಿಗೆ ಅವಕಾಶ ನೀಡಬಾರದು ಎಂದರು.
    ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ರಾಜಕೀಯ ಸ್ಥಿತ್ಯಂತರಗಳ ನಡುವೆಯೂ ಈ ಹಿಂದೆ ಮೂರು ಬಾರಿ ವಿಜೇತರಾದ ನಾರಾಯಣ ಸ್ವಾಮಿ ಅವರು ಅದೃಷ್ಟವಂತರು ಎಂದರು.
    ಮಾಜಿ ಸಚಿವ ಬೈರತಿ ಬಸವರಾಜ್, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಪ್ರೊ.ಎನ್. ಲಿಂಗಣ್ಣ, ಎಚ್.ಪಿ.ರಾಜೇಶ್, ಎಂಎಲ್ಸಿಗಳಾದ ಚಿದಾನಂದಗೌಡ, ನವೀನ್, ಎಸ್.ವಿ. ಸಂಕನೂರ, ಮಾಜಿ ಎಂಎಲ್ಸಿಗಳಾದ ಅರುಣ್ ಶಹಪೂರ, ಡಾ.ಎ.ಎಚ್. ಶಿವಮೂರ್ತಿ ಸ್ವಾಮಿ,  ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಕಲ್ಲೇರುದ್ರೇಶ್, ಯಶವಂತರಾವ್ ಜಾಧವ್, ವೀರೇಶ್ ಹನಗವಾಡಿ, ಲೋಕಿಕೆರೆ ನಾಗರಾಜ್, ಮಾಡಾಳು ಮಲ್ಲಿಕಾರ್ಜುನ್, ತುಮ್‌ಕೋಸ್ ಶಿವಕುಮಾರ್, ಶಿವಲಿಂಗಪ್ಪ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts