More

    ಘನತ್ಯಾಜ್ಯ ವಿಲೇವಾರಿ ಘಟಕ ತೆರವಿಗೆ ಆಗ್ರಹ

    ದಾವಣಗೆರೆ: ಮಹಾನಗರ ಪಾಲಿಕೆಯಿಂದ ಸಮೀಪದ ಆವರಗೊಳ್ಳದಲ್ಲಿ ನಿರ್ಮಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕ ಕೂಡಲೇ ತೆರವುಗೊಳಿಸಬೇಕು ಎಂದು ಗ್ರಾಮದ ಮುಖಂಡ ಬಿ.ಎಂ. ಷಣ್ಮುಖಯ್ಯ ಒತ್ತಾಯಿಸಿದರು.
    ಕಳೆದ 20 ವರ್ಷಗಳ ಹಿಂದೆ ಪಾಲಿಕೆ ಆವರಗೊಳ್ಳದಲ್ಲಿ ಜಮೀನು ಖರೀದಿಸಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿದ್ದು, ಕಸದ ರಾಶಿ ವಿಲೇವಾರಿಯಾಗದೆ ಗುಡ್ಡದಂತೆ ಬಿದ್ದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೊನ್ನೆ ಬೆಂಕಿ ಬಿದ್ದ ಪರಿಣಾಮ ರೈತರ ಜಮೀನುಗಳ ತೆಂಗಿನ ಮರಗಳು ಸುಟ್ಟುಹೋಗಿವೆ. ಇನ್ನು ಬೆಂಕಿಯ ಬೂದಿಯು ಭತ್ತದ ಗದ್ದೆಗಳಿಗೆ ಹರಡಿ ಹೂವಾಡುವ ಬೆಳೆಯ ಮೇಲೆ ಬಿದ್ದ ಪರಿಣಾಮ ಕಾಳುಕಟ್ಟದ ಸ್ಥಿತಿ ನಿರ್ಮಾಣಗೊಂಡಿದೆ ಎಂದರು.
    ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದಿಂದ ನಾಯಿಗಳ ಹಾವಳಿ ಹೆಚ್ಚಾಗಿದ್ದು ರೈತರು ರಾತ್ರಿವೇಳೆ ಹೊಲಗಳಿಗೆ ಹೋಗದಂತಾಗಿದೆ. ನೊಣಗಳ ಹಾವಳಿಯಿಂದ ಸಾಂಕ್ರಾಮಿಕ ರೋಗಗಳು ತಲೆದೋರುವ ಜತೆಗೆ ಜನರು ಅಸ್ತಮಾ ಮೊದಲಾದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.
    ಪಾಲಿಕೆಯು ಗ್ರಾಮದಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕ ಕೂಡಲೇ ತೆರವುಗೊಳಿಸಬೇಕು ಹಾಗೂ ಬೆಂಕಿಯಿಂದ ತೆಂಗಿನಮರ ಹಾಗೂ ಬೆಳೆ ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಅವರು, ಚುನಾವಣೆ ನಂತರ ಗ್ರಾಮಸಭೆ ನಡೆಸಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
    ಗ್ರಾಮದ ಮುಖಂಡರಾದ ಡಿ. ಶಶಿಧರಯ್ಯ, ವೀರರಾಜೇಂದ್ರಸ್ವಾಮಿ, ರುದ್ರಮುನಿಯಪ್ಪ, ಪೂಜಾರ್ ಬಸವರಾಜಪ್ಪ, ಸೋಮಶೇಖರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts