More

    ಮತ ಕೇಂದ್ರದ ಬಳಿ ಜನವೋ ಜನ

    ದಾವಣಗೆರೆ: ಹಳ್ಳಿಫೈಟ್‌ನ ವಿಶೇಷತೆಯೇ ಅದು. ಪಂಚಾಯಿತಿ ಚುನಾವಣೆ ಗೆಲ್ಲುವುದೆಂದರೆ ಪ್ರತಿಷ್ಠೆಯ ವಿಷಯ. ಹಾಗಾಗಿ ಫಲಿತಾಂಶದ ಮೇಲೆ ಎಲ್ಲರ ಕಣ್ಣು. ಸೋಲು-ಗೆಲುವಿನ ಲೆಕ್ಕಾಚಾರ, ರಾಜಕೀಯದ ಚರ್ಚೆಗಳು, ಯಾರಿಗೆ ಅಧಿಕಾರ ಸಿಗುತ್ತದೆ ಎಂಬ ಕುತೂಹಲ.

    ಇದೆಲ್ಲವೂ ನೋಡಲು ಸಿಕ್ಕಿದ್ದು ನಗರದ ಮೋತಿವೀರಪ್ಪ ಕಾಲೇಜು ಆವರಣದ ಸುತ್ತಮುತ್ತ. ಮತಗಳ ಎಣಿಕೆ ಹಿನ್ನೆಲೆಯಲ್ಲಿ ಅಲ್ಲಿ ಜನಸ್ತೋಮವೇ ಸೇರಿತ್ತು. ಗುಂಡಿ ವೃತ್ತ, ಚಿಗಟೇರಿ ಜಿಲ್ಲಾಸ್ಪತ್ರೆ ರಸ್ತೆಗಳು ಜನರಿಂದ ತುಂಬಿಹೋಗಿದ್ದವು. ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನಗಳ ದೊಡ್ಡ ಸಾಲು.

    ಪಕ್ಕದ ವಿಶ್ವೇಶ್ವರಯ್ಯ ಪಾರ್ಕ್ ರಾಜಕೀಯ ಹರಟೆಗೆ ವೇದಿಕೆಯಾಗಿತ್ತು. ಹಳ್ಳಿ ಹಳ್ಳಿಯಿಂದ ಬಂದವರು ಉದ್ಯಾನವನದಲ್ಲಿ ಕುಳಿತು ವಿಶ್ರಾಂತಿ ಪಡೆಯುವುದು, ಫಲಿತಾಂಶದ ಕುರಿತು ವಿಶ್ಲೇಷಣೆ ಮಾಡುವುದು ಕಂಡುಬಂದಿತು.

    ಮಂಡಕ್ಕಿ, ಬೆಣ್ಣೆದೋಸೆ, ಚಹಾದ ಅಂಗಡಿಗಳಲ್ಲಿ ಬಿಡುವಿಲ್ಲದ ವ್ಯಾಪಾರ. ಐಸ್‌ಕ್ರೀಂ, ಕುಡಿಯುವ ನೀರಿನ ಬಾಟಲಿಗಳಿಗೆ ಬೇಡಿಕೆಯಿತ್ತು. ಬೆಳಗ್ಗೆ 7 ಗಂಟೆಯಿಂದಲೇ ಜನರು ಮತ ಎಣಿಕೆ ಕೇಂದ್ರದ ಬಳಿ ಸೇರತೊಡಗಿದರು. ಪೊಲೀಸರು ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಅಭ್ಯರ್ಥಿಗಳು ಮತ್ತು ಏಜೆಂಟರನ್ನು ಮಾತ್ರ ಗುರುತಿನ ಚೀಟಿ ನೋಡಿ ಹಂತ ಹಂತವಾಗಿ ಒಳಗೆ ಬಿಟ್ಟರು.

    ಮತಪೆಟ್ಟಿಗೆಗಳನ್ನು ಇಡಲಾಗಿದ್ದ ಭದ್ರತಾ ಕೊಠಡಿಯ ಬಾಗಿಲನ್ನು ಬೆಳಗ್ಗೆ 8 ಗಂಟೆಗೆ ತೆರೆಯಲಾಯಿತು. ಸಿಬ್ಬಂದಿ ಮತಪೆಟ್ಟಿಗೆಗಳೊಂದಿಗೆ ಎಣಿಕೆ ಕೊಠಡಿಗಳಿಗೆ ನಡೆದರು. ಎಣಿಕೆ ಕೇಂದ್ರದ ಒಳಗೆ ಬಂದವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು, ಅಲ್ಲಿ ಪರಸ್ಪರ ಅಂತರ ಮಾಯವಾಗಿತ್ತು.

    ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಸೀಲ್ದಾರ್ ಗಿರೀಶ್ ಮತ ಎಣಿಕೆ ಕೇಂದ್ರದಲ್ಲಿದ್ದು, ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು. ಪುರುಷ ಅಭ್ಯರ್ಥಿಗಳಲ್ಲಿ ಕುರ್ಕಿ ಗ್ರಾ.ಪಂ.ನ ಹನುಮನಹಳ್ಳಿ ಕ್ಷೇತ್ರದ ಬಿ.ಒ.ರಾಜು ಮತ್ತು ಮಹಿಳೆಯರ ಪೈಕಿ ಹೊನ್ನೂರು ಗ್ರಾ.ಪಂ.ನ ಮಲ್ಲಶೆಟ್ಟಿಹಳ್ಳಿ ಕ್ಷೇತ್ರದ ಕೆ.ವನಜಾಕ್ಷಿ ಮೊದಲ ಗೆಲುವು ದಾಖಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts