More

    ಅಂತರ ಮರೆತು ಲಾಕ್‌ಡೌನ್‌ಗೆ ಆಹ್ವಾನ !?

    ರಮೇಶ ಜಹಗೀರದಾರ್ ದಾವಣಗೆರೆ
    ಅಂಕೆಗೆ ಸಿಲುಕದೇ ಹೆಚ್ಚುತ್ತಿರುವ ಕರೊನಾ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಪ್ರಯಾಸ ಪಡುತ್ತಿದ್ದರೆ, ನಗರದ ಕೆಲವು ಭಾಗದ ಸಾರ್ವಜನಿಕರು ಪರಸ್ಪರ ಅಂತರ ಮರೆತು ಲಾಕ್‌ಡೌನನ್ನು ಆಹ್ವಾನಿಸುತ್ತಿದ್ದಾರೆಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

    ಸರ್ಕಾರ, ಸಂಘ ಸಂಸ್ಥೆಗಳು ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನಕ್ಕೆ ಬಂದಂತೆ ಕಾಣುತ್ತಿಲ್ಲ. ಇದರಿಂದಾಗಿ ಕೋವಿಡ್ ಸರಪಳಿ ತುಂಡರಿಸುವುದು ಕಷ್ಟವಾಗಿದೆ.

    ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ನಡೆಸಿ ಹೆಜ್ಜೆ ಹೆಜ್ಜೆಗೂ ಅರಿವು ಮೂಡಿಸುತ್ತಿದ್ದಾರೆ. ಮುಂಜಾಗ್ರತೆ ವಹಿಸುವಂತೆ ಮೊಬೈಲ್ ಫೋನ್ ಕಾಲರ್ ಟ್ಯೂನ್‌ಗಳು, ಟಿವಿ ಜಾಹೀರಾತುಗಳಲ್ಲಿ ನಿತ್ಯವೂ ಎಷ್ಟೇ ಸಂದೇಶಗಳನ್ನು ಪ್ರಸಾರ ಮಾಡಿದರೂ ಕೆಲವರು ತಮ್ಮ ಚಾಳಿಯನ್ನು ಬಿಟ್ಟಿಲ್ಲ.

    ನಗರವನ್ನು ಒಂದು ಸುತ್ತು ಹಾಕಿದರೆ ಪರಿಸ್ಥಿತಿಯ ತೀವ್ರತೆ ಅರಿವಾಗುತ್ತದೆ. ಅದರಲ್ಲೂ ಹಳೇ ದಾವಣಗೆರೆಯಲ್ಲಿ ದಿವ್ಯ ನಿರ್ಲಕ್ಷೃ ಎದ್ದು ಕಾಣುತ್ತಿದೆ. ಸೋಂಕು ಆತಂಕಕಾರಿಯಾಗಿ ವ್ಯಾಪಿಸುತ್ತಿದ್ದರೂ ಪರಸ್ಪರ ಅಂತರ, ಮಾಸ್ಕ್ ಧರಿಸುವುದು ಇತ್ಯಾದಿ ಕ್ರಮಗಳ ಪಾಲನೆ ಸರಿಯಾಗಿ ಆಗುತ್ತಿಲ್ಲ.

    ಮೊಬೈಲ್ ಫೋನ್ ಮಾರಾಟ ಹಾಗೂ ದುರಸ್ತಿ ಮಾಡುವ ಅಂಗಡಿಗಳಲ್ಲಿ ಗ್ರಾಹಕರು ಅಂತರ ಮರೆತು ನಿಂತಿರುತ್ತಾರೆ. ವ್ಯಾಪಾರಸ್ಥರೊಂದಿಗೆ ಹತ್ತಿರದಿಂದಲೇ ಮಾತನಾಡುವ ದೃಶ್ಯ ಸಾಮಾನ್ಯವಾಗಿದ್ದು ಅಪಾಯವನ್ನು ಆಹ್ವಾನಿಸುವಂತಿರುತ್ತದೆ.

    ಇದಕ್ಕೆ ಬ್ಯಾಂಕುಗಳೂ ಹೊರತಾಗಿಲ್ಲ. ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಗ್ರಾಹಕರು ಸೋಮವಾರ ಪರಸ್ಪರ ಅಂತರವೇ ಇಲ್ಲದಂತೆ ಸಾಲುಗಟ್ಟಿ ನಿಂತಿದ್ದರು.

    ಹೋಟೆಲ್‌ಗಳ ಒಳಗೂ ಇದಕ್ಕಿಂತ ಭಿನ್ನ ಚಿತ್ರಣವೇನೂ ಕಾಣುವುದಿಲ್ಲ. ಜನನಿಬಿಡ ಮಾರುಕಟ್ಟೆ ಪ್ರದೇಶದ ಅಂಗಡಿಗಳ ಮುಂದೆ ಗ್ರಾಹಕರು ಹೆಗಲಿಗೆ ಹೆಗಲು ಅಂಟಿಕೊಂಡಂತೆ ಅಷ್ಟೊಂದು ಹತ್ತಿರದಲ್ಲಿದ್ದು ವಸ್ತುಗಳನ್ನು ಖರೀದಿ ಮಾಡುವುದು ಕಂಡುಬಂತು. ಕಿರಾಣಿ ಅಂಗಡಿ, ತರಕಾರಿ ಮತ್ತು ಸಣ್ಣ ಬಟ್ಟೆ ಅಂಗಡಿಗಳಲ್ಲಿ ಜನರು ಅಂತರ ಮರೆತು ಸೇರಿದ್ದರು.

    ಅಷ್ಟೇ ಏಕೆ, ಪೊಲೀಸ್ ಠಾಣೆಗೆ ದೂರು ಕೊಡಲು ಬಂದವರೂ ಅಂತರ ಕಾಪಾಡಿಕೊಳ್ಳದಿರುವುದು ಅಚ್ಚರಿ ಮೂಡಿಸುತ್ತದೆ.

    ಮಾಸ್ಕ್ ಅನ್ನು ಕೆಲವರು ಕೇವಲ ಔಪಚಾರಿಕ ಎನ್ನುವಂತೆ ಧರಿಸುತ್ತಾರೆ. ಬಾಯಿ ಮತ್ತು ಮೂಗನ್ನು ಸಂಪೂರ್ಣವಾಗಿ ಮುಚ್ಚಿರುವುದಿಲ್ಲ. ಪಕ್ಕದಲ್ಲಿರುವವರು ಕೆಮ್ಮುವುದು, ಸೀನುವುದು ಮಾಡಿದರೂ ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷೃ ವಹಿಸಲಾಗುತ್ತಿದೆ.

    ಮತ್ತೆ ಕೆಲವರು ಬೀದಿಯಲ್ಲೇ ಉಗುಳುವುದನ್ನು ಇನ್ನೂ ನಿಲ್ಲಿಸಿಲ್ಲ. ಬೇರೆಯವರಿಗೆ ಅದರಿಂದ ಯಾವ ಪರಿಣಾಮವಾಗುತ್ತದೆ ಎಂದು ಯೋಚಿಸುವುದಿಲ್ಲ. ದ್ವಿಚಕ್ರ ವಾಹನ ಸವಾರರೂ ಹಿಂದೆ ಮುಂದೆ ನೋಡದೇ ಉಗುಳುತ್ತಾರೆ. ಅಕ್ಕಪಕ್ಕದವರು ಏನೆಂದುಕೊಳ್ಳುತ್ತಾರೆ ಎನ್ನುವ ಪರಿಜ್ಞಾನವೂ ಇಲ್ಲದಂತೆ ವರ್ತಿಸುತ್ತಾರೆ.

    ಸರ್ಕಾರ ಮತ್ತು ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ಮಾಸ್ಕ್ ಧರಿಸದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ದಂಡ ವಿಧಿಸುತ್ತಿದ್ದಾರೆ. ಆದರೂ ಸಾರ್ವಜನಿಕರು ಎಚ್ಚೆತ್ತುಕೊಂಡಿಲ್ಲ. ಪರಿಸ್ಥಿತಿ ಕೈಮೀರುವ ಹಂತ ತಲುಪಿದ್ದರೂ ಜನರು ಡೋಂಟ್ ಕೇರ್ ಮನಸ್ಥಿತಿಯಿಂದ ಹೊರ ಬಂದಂತೆ ಕಾಣುತ್ತಿಲ್ಲ.

    ಪರಸ್ಪರ ಅಂತರ ಕಾಪಾಡಲು ವಾರ್ಡ್‌ಮಟ್ಟದ ಸಮಿತಿಗಳನ್ನು ಕ್ರಿಯಾಶೀಲಗೊಳಿಸಿದ್ದೇವೆ. ಬೂತ್ ಮಟ್ಟದ ಸಮಿತಿಗಳೂ ಕ್ರಿಯಾಶೀಲವಾಗುವಂತೆ ನೋಡಿಕೊಳ್ಳುತ್ತೇವೆ. ಕಂಟೇನ್ಮೆಂಟ್ ವಲಯದಲ್ಲಿ ಪರಿಣಾಮಕಾರಿ ಸರ್ವೇಕ್ಷಣೆ ಮಾಡಿಸುತ್ತೇವೆ.
    > ಮಹಾಂತೇಶ ಬೀಳಗಿ ಜಿಲ್ಲಾಧಿಕಾರಿ

    ಪರಸ್ಪರ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಿಗಿಯಾದ ಕ್ರಮ ತೆಗೆದುಕೊಳ್ಳುತ್ತೇವೆ. ಹೋಟೆಲ್‌ನವರ ಸಭೆ ಕರೆದು ತಿಳಿವಳಿಕೆ ನೀಡುತ್ತೇವೆ. ಉಲ್ಲಂಘನೆಯಾದ ಕಡೆ ಫೋಟೋ ತೆಗೆದು ಪ್ರಕರಣ ದಾಖಲಿಸುತ್ತೇವೆ.
    >ಹನುಮಂತರಾಯ ಎಸ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts