More

    17.91 ಕೋಟಿ ರೂ. ಉಳಿತಾಯದ ಪಾಲಿಕೆ ಬಜೆಟ್

    ದಾವಣಗೆರೆ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ, ನೂತನ ಮೇಯರ್ ಆಯ್ಕೆಗೂ ಕೆಲವೇ ದಿನಗಳು ಬಾಕಿಯಿದೆ. ಈ ನಡುವೆ ಬಿಜೆಪಿ ಆಡಳಿತದ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ಮಂಡನೆಯಾದ, 2023-24 ನೇ ಸಾಲಿನ ಬಜೆಟ್‌ನಲ್ಲಿ ಯಾವುದೇ ವಿಶೇಷತೆ ಇಲ್ಲ.
     ಮೇಯರ್ ಆರ್. ಜಯಮ್ಮ ಅವರ ಅವಧಿಯಲ್ಲಿ ಮಂಡನೆಯಾದ ಎರಡನೇ ಬಜೆಟ್ ಇದಾಗಿದ್ದು, ಪಾಲಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೆರಿಗೆ, ಹಣಕಾಸು, ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್ 17.91 ಕೋಟಿ ರೂ.ಗಳ ಉಳಿತಾಯ ಮುಂಗಡಪತ್ರವನ್ನು ಮಂಡಿಸಿದರು.
     ತೆರಿಗೆ, ಶುಲ್ಕ, ಬಾಡಿಗೆ ಇನ್ನಿತರ ಮೂಲಗಳಿಂದ ಸಂಗ್ರಹವಾಗುವ ಹಣ, ಸರ್ಕಾರದ ವಿಶೇಷ ಅನುದಾನ, ಹಣಕಾಸು ಆಯೋಗದಿಂದ ಬರುವ ಹಣ ಇತ್ಯಾದಿ ಮೂಲಗಳಿಂದ 490.63 ಕೋಟಿ ರೂ. ಒಟ್ಟು ಸ್ವೀಕೃತಿ ನಿರೀಕ್ಷಿಸಲಾಗಿದೆ(ಆರಂಭಿಕ ಶಿಲ್ಕು 67.25 ಕೋಟಿ ರೂ.). 539.98 ಕೋಟಿ ರೂ. ಪಾವತಿಯನ್ನು ತೋರಿಸಲಾಗಿದೆ.
     ವಾಚನಾಲಯ, ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ, ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಉಬ್ಬುಗಳನ್ನು ತೆರವುಗೊಳಿಸುವುದು, ರಸ್ತೆ ಗುಂಡಿಗಳನ್ನು ಮುಚ್ಚುವುದು, ಶಿಥಿಲಾವಸ್ಥೆಯಲ್ಲಿರುವ, ಹಳೆಯ ಗರಡಿ ಮನೆಗಳ ನವೀಕರಣ ಮಾಡುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
     ರೈಲು ನಿಲ್ದಾಣ ಹಾಗೂ ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಸ್ಕೈವಾಕ್ ನಿರ್ಮಾಣದ ವಿಚಾರ ಈ ಬಾರಿಯೂ ಪುನರಾವರ್ತನೆಯಾಗಿದೆ. ನಗರದ ವಿವಿಧ ವೃತ್ತ, ಉದ್ಯಾನವನಗಳಲ್ಲಿ ಪುತ್ಥಳಿಗಳ ಸ್ವಚ್ಛತೆ ಹಾಗೂ ಸುಣ್ಣ ಬಣ್ಣ ಬಳಿಯಲು 10 ಲಕ್ಷ ರೂ. ಕಾಯ್ದಿರಿಸಲಾಗಿದೆ.
     ಪೌರಕಾರ್ಮಿಕರಿಗೆ ಸ್ವಚ್ಛತಾ ಕಾರ್ಯಗಳಿಗೆ ಪರಿಕರಗಳನ್ನು ಒದಗಿಸುವುದು, ಅವರಿಗೆ ವಿವಿಧ ವಾರ್ಡುಗಳಲ್ಲಿ ವಿಶ್ರಾಂತಿ ಗೃಹ ನಿರ್ಮಾಣ, ಪೌರ ಕಾರ್ಮಿಕರು ಕರ್ತವ್ಯಕ್ಕೆ ತೆರಳಲು ಸಾರಿಗೆ ಬಸ್ ವ್ಯವಸ್ಥೆ, ಘನತ್ಯಾಜ್ಯ ನಿರ್ವಹಣೆಗೆ ಜೆಟ್ಟಿಂಗ್, ಸಕ್ಕಿಂಗ್ ಯಂತ್ರಗಳ ಖರೀದಿ ಬಗ್ಗೆ ಮುಂಗಡಪತ್ರದಲ್ಲಿ ಹೇಳಲಾಗಿದೆ.
     ಸ್ಮಶಾನಗಳ ಅಭಿವೃದ್ಧಿಗೆ 1 ಕೋಟಿ ರೂ. ಅಂದಾಜು ಮಾಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ವೆಂಡಿಂಗ್ ರೆನ್ ನಿರ್ಮಾಣ, ನಾಗರಿಕರ, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉದ್ಯಾನವನಗಳ ನಿರ್ವಹಣೆ, ತಾರಸಿ ಉದ್ಯಾನವನ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts