More

    ಶ್ರಮಜೀವಿಗಳ ಬೇಡಿಕೆ ಈಡೇರಿಸಿದ ಸರ್ಕಾರ

    ದಾವಣಗೆರೆ : ನೇರ ಪಾವತಿ ಪೌರ ಕಾರ್ಮಿಕರ ಸೇವೆ ಕಾಯಂ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದರಿಂದ ಅನೇಕ ವರ್ಷಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಮಾಜಿ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.
    ಮಹಾನಗರ ಪಾಲಿಕೆ ವತಿಯಿಂದ ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಇದರೊಂದಿಗೆ ಹಲವು ವರ್ಷಗಳ ಹೋರಾಟ ಫಲ ನೀಡಿದಂತಾಗಿದೆ. ಪೌರ ಕಾರ್ಮಿಕರ ಇನ್ನುಳಿದ ಬೇಡಿಕೆಗಳನ್ನೂ ಸರ್ಕಾರ ಹಂತ ಹಂತವಾಗಿ ಈಡೇರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಎಲ್ಲ ಪೌರ ಕಾರ್ಮಿಕರ ಕೆಲಸವೂ ಒಂದೇ ಆಗಿದೆ. ಬೆಳಗ್ಗೆ 5 ಗಂಟೆಯಿಂದಲೇ ನಗರದ ಸ್ವಚ್ಛತಾ ಕಾರ್ಯ ಆರಂಭಿಸುವ ಅವರು ನೈರ್ಮಲ್ಯ ನಿರ್ವಹಣೆ ಮಾಡುತ್ತಾರೆ. ಆ ಮೂಲಕ ಊರಿನ ಆರೋಗ್ಯ ಕಾಪಾಡುತ್ತಾರೆ ಎಂದು ತಿಳಿಸಿದರು.
    ಈ ವರ್ಷ ಪೌರ ಕಾರ್ಮಿಕರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ವರ್ಷವಿಡೀ ಕೆಲಸದ ಒತ್ತಡ ಅನುಭವಿಸುವ ಈ ಶ್ರಮ ಜೀವಿಗಳಿಗೆ ಕ್ರೀಡೆಗಳು ಉಲ್ಲಾಸವನ್ನು ಮೂಡಿಸುತ್ತವೆ ಎಂದರು.
    ಪೌರ ಕಾರ್ಮಿಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಇತ್ತೀಚಿನ ದಿನಗಳಲ್ಲಿ ಪೌರಕಾರ್ಮಿಕರ ಮಕ್ಕಳು ಇಂಜಿನಿಯರ್, ವೈದ್ಯರಾಗಿದ್ದಾರೆ, ಐ.ಎ.ಎಸ್ ನಂಥ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಅಂಥವರ ಸಂಖ್ಯೆ ಹೆಚ್ಚಾಗಬೇಕು ಎಂದು ಆಶಿಸಿದರು.
    ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್ ಮಾತನಾಡಿ, ಪೌರ ಕಾರ್ಮಿಕರು ಊರಿನ ಮಾನ, ಮರ್ಯಾದೆ ಕಾಪಾಡುತ್ತಾರೆ, ಅವರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
    ಪಾಲಿಕೆಯ ಮತ್ತೊಬ್ಬ ಸದಸ್ಯ ಎಲ್.ಡಿ. ಗೋಣೆಪ್ಪ ಮಾತನಾಡಿ, ಪೌರ ಕಾರ್ಮಿಕರ ಸೇವೆ ಕಾಯಂ ಆದೇಶ ಇನ್ನೊಂದು ವಾರದೊಳಗೆ ಬರಬಹುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts