More

    ನಾಗರಪಂಚಮಿ ಮಕ್ಕಳ ಪಂಚಮಿಯನ್ನಾಗಿ ಆಚರಿಸಿ

    ದಾವಣಗೆರೆ: ರಾಜ್ಯ ಸರ್ಕಾರ ನಾಗರಪಂಚಮಿ ಹಬ್ಬವನ್ನು ಮಕ್ಕಳ ಪಂಚಮಿಯನ್ನಾಗಿ ಶಾಲಾ ಕಾಲೇಜುಗಳಲ್ಲಿ ಆಚರಣೆ ಮಾಡಬೇಕು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
     ನಾಗರ ಪಂಚಮಿ ಪ್ರಯುಕ್ತ ನಗರದ ಕೊಂಡಜ್ಜಿ ರಸ್ತೆಯ ಬಿಜೆಎಂ ಸ್ಕೂಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು ಸಪ್ತಾಹ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿದರು.
     ವೈಚಾರಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಗರ ಪಂಚಮಿಯನ್ನು ಮಕ್ಕಳು ಹಾಲು ಕುಡಿಯುವ ಭಾವೈಕ್ಯದ ಹಬ್ಬವನ್ನಾಗಿ ಪರಿವರ್ತಿಸುವ ಮೂಲಕ ಹೊಸ ಸ್ವರೂಪ ನೀಡಬೇಕು ಎಂದು ಮನವಿ ಮಾಡಿದರು.
     21ನೇ ಶತಮಾನದಲ್ಲಿ ಆಹಾರಕ್ಕೆ ಬಹಳ ದೊಡ್ಡ ಕೊರತೆಯಿದೆ. ಆಹಾರದ ಅಭದ್ರತೆ ಕಾಡುತ್ತಿರುವುದರಿಂದ ಜನತೆ ಹಸಿವಿನಿಂದ ಸಾಯುತ್ತಿದ್ದಾರೆ. ಜೀವನದಲ್ಲಿ ಎಷ್ಟೇ ಹಣ ಗಳಿಸಿದರೂ ಅನ್ನ ಮುಖ್ಯ. ಹಸಿವಿನ ಮಹತ್ವ ಏನೆಂಬುದು ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲರಿಗೂ ಗೊತ್ತಾಗಿದೆ. ಪೌಷ್ಟಿಕ ಪದಾರ್ಥಗಳನ್ನು ದೇವರ ಹೆಸರಿನಲ್ಲಿ ವ್ಯರ್ಥ ಮಾಡದೆ ಹಸಿದವರಿಗೆ ನೀಡಬೇಕು ಎಂದು ತಿಳಿಸಿದರು.
     ಪ್ರಸ್ತುತ ದಿನಗಳಲ್ಲಿ ದೇವಸ್ಥಾನಗಳಿಗೆ ನೀಡುವ ಪ್ರಾಮುಖ್ಯ ಹಾಗೂ ದೇವರಿಗೆ ಕೊಡುವ ಪ್ರೀತಿಯನ್ನು ಮನುಷ್ಯರಿಗೆ ತೋರಿಸುತ್ತಿಲ್ಲ. ಇದು ಬದಲಾದಾಗ ಮಾತ್ರ ಅಸಮಾನತೆ ನಿವಾರಿಸಲು ಸಾಧ್ಯ ಎಂದರು.
     ಹನ್ನೆರಡನೇ ಶತಮಾನದ ಬಸವಣ್ಣನವರು ಸಕಲ ಜೀವಿಗಳಲ್ಲಿ ಭಗವಂತನನ್ನು ಕಾಣುವ ಪ್ರಯತ್ನ ಮಾಡಿದರು. ಹಸಿದವರಿಗೆ ಉಣಿಸುವ ಮೂಲಕ ಭಗವಂತನ ಸಾಕ್ಷಾತ್ಕಾರ ಪಡೆಯಬೇಕು ಹೇಳಿದರು.
     ದಾವಣಗೆರೆಯಲ್ಲಿ ಆರಂಭಿಸಿದ ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು ಕಾರ್ಯಕ್ರಮವನ್ನು ಪ್ರಸ್ತುತ ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಈಗಾಗಲೇ ಕಾರ್ಯಕ್ರಮ ನಡೆದಿದ್ದು ಬೆಳಗಾವಿ, ಬಾಗಲಕೋಟೆ, ಬೆಂಗಳೂರು ಮೊದಲಾದೆಡೆ ಹಮ್ಮಿಕೊಳ್ಳಲಾಗುವುದು ಎಂದರು.
     ಎಸ್.ಎಂ.ಎಲ್. ಮೋಟಾರ್ಸ್ ಮಾಲೀಕ ಎಚ್.ಎನ್. ತಿಪ್ಪೇಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನತೆ ಮೌಢ್ಯಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಾಯಿಲೆ ಬಂದರೆ ಆಸ್ಪತ್ರೆಗಳಿಗೆ ಹೋಗದೆ ದೇವಸ್ಥಾನ ಸುತ್ತಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಸಮಾಜದಲ್ಲಿನ ಕಂದಾಚಾರ ನಿವಾರಣೆಗೆ ಶ್ರೀಗಳು ವಿನೂತನ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
     ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್, ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ನಿವೃತ್ತ ಸರ್ಕಾರಿ ಅಭಿಯೋಜಕ ಎಸ್.ವಿ. ಪಾಟೀಲ್, ವೀಣಾ ಮಂಜುನಾಥ್ ಇದ್ದರು. ಶಾಲಾ ಕಾರ್ಯದರ್ಶಿ ಅಗಡಿ ಮಂಜುನಾಥ್ ಸ್ವಾಗತಿಸಿದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts