More

    ಪಾಲಿಕೆಗಿನ್ನು 125 ಕೋಟಿ ರೂ. ಅನುದಾನ

    ದಾವಣಗೆರೆ: ಮಹಾತ್ಮ ಗಾಂಧಿ ಗ್ರಾಮ ವಿಕಾಸ ಯೋಜನೆಯಡಿ ನಗರಪಾಲಿಕೆಗೆ 125 ಕೋಟಿ ರೂ. ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮತಿಸಿದ್ದಾರೆ.

    ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ಮೇಯರ್ ಬಿ.ಜಿ.ಅಜಯ್‌ಕುಮಾರ್ ನೇತೃತ್ವದಲ್ಲಿ ಪಾಲಿಕೆಯ ಬಿಜೆಪಿ ಸದಸ್ಯರ ನಿಯೋಗ ಗುರುವಾರ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

    ಕೋವಿಡ್ ಕಾರಣದಿಂದಾಗಿ, 15 ತಿಂಗಳ ಹಿಂದೆ ಮಂಜೂರಾಗಿದ್ದ ಅನುದಾನ ಬಿಡುಗಡೆ ಆಗಿರಲಿಲ್ಲ. ಇನ್ನು ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಅವರು ನಿಯೋಗಕ್ಕೆ ತಿಳಿಸಿದರು.

    ನಗರದಲ್ಲಿ 45 ವಾರ್ಡ್‌ಗಳಿದ್ದು, ಪ್ರತಿ ವಾರ್ಡ್ ಅಭಿವೃದ್ಧಿಗಾಗಿ ತಲಾ 1 ಕೋಟಿ ರೂ.ನಂತೆ ವಿಶೇಷ ಅನುದಾನ ನೀಡುವಂತೆ ಮೇಯರ್ ಮನವಿ ಮಾಡಿದರು. ಮುಂದಿನ ದಿನದಲ್ಲಿ ಪರಿಶೀಲನೆ ನಡೆಸುವುದಾಗಿ ಸಿಎಂ ಪ್ರತಿಕ್ರಿಯಿಸಿದರು.

    ಪಾಲಿಕೆ ಕಾಮಗಾರಿಗಳಿಗೆ 1 ಲಕ್ಷ ರೂ. ಮಿತಿವರೆಗೆ ಮಾತ್ರವೆ ಮ್ಯಾನ್ಯುಯೆಲ್ ಟೆಂಡರ್ ಕರೆಯುವ ಅವಕಾಶವಿದೆ. ಇದನ್ನು 5 ಲಕ್ಷ ರೂ.ವರೆಗೆ ಏರಿಕೆ ಮಾಡುವಂತೆ ಪಾಲಿಕೆ ಸದಸ್ಯರು ಕೋರಿದರು. ಇದಕ್ಕೆ ಸಿಎಂ ಸಮ್ಮತಿಸಿದರು.

    ಮನೆ ಬಾಗಿಲಿಗೆ ಮಹಾನಗರಪಾಲಿಕೆ: ನವೆಂಬರ್ ತಿಂಗಳಲ್ಲಿ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ವಾರ್ಡ್‌ಗೆ ಒಂದು ದಿನದಂತೆ ಅಧಿಕಾರಿ-ಸಿಬ್ಬಂದಿ ಸ್ಥಳದಲ್ಲೇ ಸಾರ್ವಜನಿಕರ ಸೇವೆಗಳನ್ನು ನಿರ್ವಹಿಸುವರು.

    ಖಾತೆ ಎಕ್ಸಾರ್ಟ್, ಖಾತೆ ಬದಲಾವಣೆ, ಕಂದಾಯ ವಸೂಲಾತಿ, ವಾಣಿಜ್ಯ ಕಟ್ಟಡಗಳ ಪರವಾನಗಿ ನವೀಕರಣ, ನೋಂದಣಿ, ಜನನ- ಮರಣ ಪ್ರಮಾಣ ಪತ್ರ ಇತಾದಿಗಳನ್ನು ಸ್ಥಳದಲ್ಲೇ ನಾಗರಿಕರು ಪಡೆದುಕೊಳ್ಳಬಹುದು. ಈ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸುವಂತೆ ಸಿಎಂ ಅವರಲ್ಲಿ ಮೇಯರ್ ತಿಳಿಸಿದರು.

    ಎಲ್ಲಿಯೂ ತೆರಳದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಇದೆ. ಹೀಗಾಗಿ ನಿಯೋಜಿತ ಉತ್ತಮ ಕಾರ್ಯಕ್ರಮವನ್ನು ಜಿಲ್ಲಾ ಸಚಿವರು, ಸಂಸದರ ನೇತೃತ್ವದಲ್ಲಿ ನಿರ್ವಹಿಸಿ ಎಂದು ಯಡಿಯೂರಪ್ಪ ಸೂಚಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಉಪ ಮೇಯರ್ ಸೌಮ್ಯ ನರೇಂದ್ರಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪ್ರಸನ್ನಕುಮಾರ್, ಎಸ್.ಟಿ.ವೀರೇಶ್, ಗೌರಮ್ಮ, ಜಯಮ್ಮ ಗೋಪಿನಾಯ್ಕ, ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ಪಾಲಿಕೆ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts