More

    ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ

    ದಾವಣಗೆರೆ : ಮಳೆ ಆರಂಭವಾಗಿರುವುದರಿಂದ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಮುಂತಾದ ಕೃಷಿ ಪರಿಕರಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
     ಗುರುವಾರ ವಿಡಿಯೋ ಸಂವಾದ ನಡೆಸಿದ ಅವರು ಮುಂಗಾರು ಹಂಗಾಮಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು. ಬೀಜ, ಗೊಬ್ಬರ, ಕೀಟನಾಶಕ ಮಾರಾಟಗಾರರ, ವಿತರಕರ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಬೇಕು. ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆಗೆ ತಕ್ಕಂತೆ ದಾಸ್ತಾನು ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
     ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ, ಮಳೆಯಿಂದ ಪ್ರಾಣ ಹಾನಿಯಾಗಿದ್ದರೆ ಅಥವಾ ಮನೆಗಳು ಜಖಂಗೊಂಡಿದ್ದರೆ ಸಂಬಂಧಪಟ್ಟವರಿಗೆ ಪರಿಹಾರ ನೀಡಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ಮಾಡಬಾರದು ಎಂದು ಹೇಳಿದರು.
     ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಎಲ್ಲ ರೀತಿಯಲ್ಲಿ ಸನ್ನದ್ಧವಾಗಿರಬೇಕು. ಎಲ್ಲೆಲ್ಲಿ ಸಮಸ್ಯೆ ಎದುರಾಗಬಹುದು ಎಂಬುದನ್ನು ಮೊದಲೇ ತಿಳಿದುಕೊಂಡು ಅಗತ್ಯ ಮುಂಜಾಗ್ರತೆ ವಹಿಸಬೇಕು ಎಂದು ಸೂಚನೆ ನೀಡಿದರು.
     ಬರ, ಪ್ರವಾಹ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ಸ್ಥಾಪಿಸಬೇಕು. ಜನರಿಂದ ಬರುವ ಕರೆಗಳಿಗೆ ಸ್ಪಂದಿಸಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ಒಟ್ಟಾರೆ ರೈತಪರವಾಗಿ, ಜನಸಾಮಾನ್ಯರ ಪರವಾಗಿ ಕೆಲಸ ಮಾಡುವಂತೆ ತಿಳಿಸಿದರು.
     ಕುಡಿಯುವ ನೀರು ಹಾಗೂ ಮೇವಿನ ಲಭ್ಯತೆಯನ್ನು ಪರಿಶೀಲಿಸಿ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರು ಕಲುಷಿತವಾಗದಂತೆ ನೋಡಿಕೊಂಡು ಆಗಿಂದಾಗ್ಗೆ ಪರೀಕ್ಷೆ ನಡೆಸಬೇಕು. ಫಲಾನುಭವಿಗಳಿಗೆ ಇನ್‌ಪುಟ್ ಸಬ್ಸಿಡಿ ಸಮರ್ಪಕವಾಗಿ ತಲುಪುವಂತೆ ವ್ಯವಸ್ಥೆ ಮಾಡಬೇಕು. ಇದರಲ್ಲಿ ತಾಂತ್ರಿಕ ತೊಂದರೆಗಳಿದ್ದರೆ ಪರಿಹರಿಸಬೇಕು ಎಂದು ಹೇಳಿದರು.
     ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರು ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಕೃಷಿ ಚಟುವಟಿಕೆಗಳ ಸಿದ್ಧತೆ ಕೈಗೊಂಡ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts