More

    ಆರ್ಥಿಕ ಪುನಶ್ಚೇತನಕ್ಕೆ ಜಿಇಸಿಎಲ್ ಯೋಜನೆ ಪೂರಕ

    ದಾವಣಗೆರೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕುಸಿತ ಕಂಡ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಆರ್ಥಿಕ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಗ್ಯಾರಂಟೀಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್(ಜಿಇಸಿಎಲ್) ಯೋಜನೆಯನ್ನು ಜಾರಿಗೆ ತಂದಿದ್ದು ಜಿಲ್ಲೆಯ ಉದ್ಯಮಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

    ಜಿಲ್ಲಾಡಳಿತ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ, ಕೇಂದ್ರ ಸರ್ಕಾರದ ಗ್ಯಾರಂಟೀಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್(ಜಿಇಸಿಎಲ್) ಯೋಜನೆ ಕುರಿತು ಎಂಎಸ್‌ಎಂಇಗಳು ಮತ್ತು ಬ್ಯಾಂಕರ್‌ಗಳಿಗೆ ಜಾಗೃತಿ ಮೂಡಿಸಲು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಜಿಇಸಿಎಲ್ ಯೋಜನೆಗಾಗಿ 3 ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು ಅ. 31 ರೊಳಗೆ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.

    ಯೋಜನೆಗೆ ಸಂಬಂಧಿಸಿದಂತೆ ಎಂಎಸ್‌ಎಂಇಗಳಲ್ಲಿ ಯಾವುದೇ ಸಂದೇಹಗಳು ಇದ್ದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಇತರೆ ಬ್ಯಾಂಕುಗಳ ವ್ಯವಸ್ಥಾಪಕರನ್ನು ಕೇಳಬಹುದು. ಸಂಬಂಧಿಸಿದ ಬ್ಯಾಂಕುಗಳು ಸಹ ಎಂಎಸ್‌ಎಂಇಗಳಿಗೆ ಈ ನಿಟ್ಟಿನಲ್ಲಿ ಸಹಕರಿಸಬೇಕು. ಆದಷ್ಟು ಬೇಗ ಚೈತನ್ಯಭರಿತ ಅರ್ಥ ವ್ಯವಸ್ಥೆಯನ್ನು ನಾವು ಕಾಣುವಂತಾಗಬೇಕು ಎಂದು ಆಶಿಸಿದರು.

    ಕರೊನಾದಂತಹ ಸಂದಿಗ್ಧ ಮತ್ತು ಕಠಿಣ ಪರಿಸ್ಥಿತಿಯಲ್ಲೂ ಬ್ಯಾಂಕುಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿವೆ. ಯಾವುದೇ ಯೋಜನೆಗಳ ಪ್ರಯೋಜನ ಪಡೆಯಲು ಸಾರ್ವಜನಿಕರು ಬ್ಯಾಂಕುಗಳಿಗೆ ಬಂದಾಗ ಸೌಜನ್ಯ ಮತ್ತು ತಾಳ್ಮೆಯಿಂದ ವ್ಯವಹರಿಸಬೇಕೆಂದು ಮನವಿ ಮಾಡಿದರು.

    ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಶ್ರುತ್ ಡಿ.ಶಾಸ್ತ್ರಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 24.36 ಕೋಟಿ ರೂ. ಸಾಲ ವಿತರಣೆಯಾಗಿದೆ ಎಂದು ತಿಳಿಸಿದರು.
    ಎಸ್‌ಬಿಐ ಪ್ರಾದೇಶಿಕ ಪ್ರಬಂಧಕ ಚಲಪತಿರಾವ್ ಮಾತನಾಡಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ 886 ಅರ್ಹ ಸಾಲಗಾರರನ್ನು ಗುರುತಿಸಿದ್ದು, ಈಗಾಗಲೇ 25.06 ಕೋಟಿ ರೂ. ಮಂಜೂರಾತಿ ನೀಡಲಾಗಿದೆ ಎಂದರು.

    ಕೆನರಾ ಬ್ಯಾಂಕಿನ ವಿಭಾಗೀಯ ಪ್ರಬಂಧಕಿ ನಾಗರತ್ನಾ ಮಾತನಾಡಿ, ಬ್ಯಾಂಕ್‌ನ ನಮ್ಮ ವಿಭಾಗದಲ್ಲಿ ಪ್ರಸ್ತುತ 51 ಶಾಖೆಗಳಿದ್ದು 4500 ಅರ್ಹ ಖಾತೆದಾರರನ್ನು ಗುರುತಿಸಿದೆ. 1500 ಜನರಿಗೆ 15.5 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ ಎಂದು ಹೇಳಿದರು.
    ಜಿ.ಪಂ ಸಿಇಒ ಪದ್ಮಾ ಬಸವಂತಪ್ಪ, ಜಿಲ್ಲೆಯ ಕೈಗಾರಿಕೋದ್ಯಮಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts