More

    ಫುಟ್‌ಪಾತ್ ವ್ಯಾಪಾರಕ್ಕೆ ಬೇಕು ಶಾಶ್ವತ ವ್ಯವಸ್ಥೆ

    ದಾವಣಗೆರೆ: ನಗರದ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡಿಕೊಳ್ಳಲು ಶಾಶ್ವತ ವ್ಯವಸ್ಥೆ ರೂಪಿಸುವಂತೆ ಆಗ್ರಹಿಸಿ ಜಿಲ್ಲಾ ಫುಟ್‌ಪಾತ್ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

    ಮಹಾನಗರ ಪಾಲಿಕೆಯ ಮುಂದೆ ಸೇರಿದ ಪ್ರತಿಭಟನಾಕಾರರು, ಮೇಯರ್ ಬಿ.ಜಿ.ಅಜಯಕುಮಾರ್ ಮತ್ತು ಆಯುಕ್ತ ವಿಶ್ವನಾಥ ಮುದಜ್ಜಿ ಅವರಿಗೆ ಮನವಿ ಸಲ್ಲಿಸಿದರು.
    ನಗರದ ಫುಟ್‌ಪಾತ್‌ಗಳಲ್ಲಿ 40 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು 5 ಸಾವಿರಕ್ಕೂ ಹೆಚ್ಚು ಜನರು ಬದುಕು ಸಾಗಿಸುತ್ತಿದ್ದಾರೆ. ನಿರುದ್ಯೋಗಿಗಳು ಸಾಲ ಮಾಡಿ ಅಲ್ಪಸ್ವಲ್ಪ ಬಂಡವಾಳದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ಬಾಪೂಜಿ ಆಸ್ಪತ್ರೆ ಮುಂಭಾಗ, ಸಿ.ಜಿ. ಆಸ್ಪತ್ರೆ ಕಾಂಪೌಂಡ್‌ನಲ್ಲಿ ಬಿಸಿನೀರು, ಎಳೆನೀರು, ಗಂಜಿ, ತಿಂಡಿ, ಊಟ, ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಗಲಿರುಳು ವ್ಯಾಪಾರ ಮಾಡಿದರೂ ಎರಡು ಹೊತ್ತಿನ ಗಂಜಿಗೂ ಆಗುವುದಿಲ್ಲ. ಇದರ ಮಧ್ಯೆ ಮಹಾನಗರಪಾಲಿಕೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು ದುಡಿದು ತಿನ್ನುವ ಫುಟ್‌ಪಾತ್ ವ್ಯಾಪಾರಿಗಳ ಮೇಲೆ ಕಿರುಕುಳ, ಒಕ್ಕಲೆಬ್ಬಿಸುವುದನ್ನು ಮಾಡುತ್ತಿದ್ದಾರೆ.

    ಸಿ.ಜಿ. ಆಸ್ಪತ್ರೆ ಹಿಂಭಾಗದ ಕಾಂಪೌಂಡಿಗೆ, ಬಾಪೂಜಿ ಆಸ್ಪತ್ರೆ ಮುಂಭಾಗದ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ಕಟ್ಟಿಸಿಕೊಡಬೇಕು. ಸಿ.ಜಿ. ಆಸ್ಪತ್ರೆ ಹಿಂಭಾಗದ ಚರಂಡಿ ಕಾಮಗಾರಿ ಮುಗಿದಿದೆ. ಕಾಂಪೌಂಡ್ ಪೂರ್ಣವಾಗಿ ಬಿದ್ದಿದೆ. 8 ಅಡಿ ಕಾಂಪೌಂಡ್ ಹಿಂದಕ್ಕೆ ಕಟ್ಟಿಸಿ, ಮಳಿಗೆ ನಿರ್ಮಿಸಿ ಕೊಡಬೇಕು ಎಂದು ಆಯುಕ್ತರಿಗೆ ಆಗ್ರಹಿಸಿದರು.

    ಸಂಘದ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಆವರೆಗೆರೆ ವಾಸು, ಮುಖಂಡರಾದ ಎನ್.ಟಿ. ಬಸವರಾಜ್, ಎಸ್.ಕೆ. ರಹಮತ್ ಉಲ್ಲಾ, ಸಿದ್ದೇಶಿ, ಅಲ್ಲಾಬಕ್ಷಿ, ಶಾಂತಮ್ಮ, ವಾಜಿದ್ ಸಾಬ್, ಈರಮ್ಮ, ಸತ್ತಾರ್ ಸಾಬ್ ಎಚ್., ಗೌರಮ್ಮ, ಎ. ತಿಪ್ಪೇಶಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts