More

    ಅಭಿವೃದ್ಧಿಗೆ ಒಮ್ಮೆ ಅವಕಾಶ ಕೊಡಿ

    ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲ ನಗರ ಮತ್ತು ಗ್ರಾಮಗಳ ಅಭಿವೃದ್ಧಿಗೆ ತಾವು ಆದ್ಯತೆ ನೀಡಲಿದ್ದು, ಒಂದು ಬಾರಿ ನನಗೆ ಅವಕಾಶ ಕೊಡಿ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದರು.
     ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಿತ್ತೂರು, ಕುರುಡಿ, ಹೆಮ್ಮನಬೇತೂರು, ಚಿಕ್ಕವ್ವನಾಗ್ತಿಹಳ್ಳಿ, ದ್ಯಾಮವ್ವನಹಳ್ಳಿ, ಗಾಂಧಿನಗರ, ಹುಲಿಕಟ್ಟೆ, ಕೆರೆಯಾಗಳಹಳ್ಳಿ, ಗಿರಿಯಾಪುರ, ಗೊಲ್ಲರಹಳ್ಳಿ, ಅಣಜಿ ಗ್ರಾಮಗಳಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
     ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಈಗಾಗಲೇ ದಾವಣಗೆರೆ ನಗರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದು, ರಾಜ್ಯ ಮತ್ತು ದೇಶದಲ್ಲೇ ಮಾದರಿ ನಗರವಾಗಿದೆ. ಇದೇ ರೀತಿ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
     ಈ ಭಾಗದಲ್ಲಿ 22 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಹರಿಸಲು ಸ್ಥಳೀಯ ಮುಖಂಡರ ಸಹಕಾರ ಮತ್ತು ಸಿರಿಗೆರೆ ಶ್ರೀಗಳ ಸಲಹೆಯಿಂದ ಮಲ್ಲಿಕಾರ್ಜುನ್ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇಂದಿನ ಬೇಸಿಗೆಯಲ್ಲೂ ಕೆರೆಗಳಲ್ಲಿ ನೀರು ಇರುವುದರಿಂದ ಅಂತರ್ಜಲ ಹೆಚ್ಚಾಗಿ ಕೊಳವೆಬಾವಿಗಳಿಂದ ರೈತರಿಗೆ ನೀರು ಸಿಗುತ್ತಿದೆ. ಇಂತಹ ಕಾರ್ಯ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ತಲುಪಬೇಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದರು.
     ದೇಶದಲ್ಲಿ ಬದಲಾವಣೆ ಅಲೆ ಆರಂಭವಾಗಿದ್ದು, ಕಳೆದ 10 ವರ್ಷಗಳಲ್ಲಿ ರೈತರಿಗೆ ನೆರವಾಗುವ ಯಾವುದೇ ಕೆಲಸಗಳನ್ನು ಕೇಂದ್ರ ಸರ್ಕಾರ, ದಾವಣಗೆರೆ ಸಂಸದರು ಮಾಡಲಿಲ್ಲ. ಆದರೆ, ಹಿಂದಿನ ಮನಮೋಹನ್ ಸಿಂಗ್ ಸರ್ಕಾರ ರೈತರ ಸಾಲ ಮನ್ನಾ ಮಾಡಿತ್ತು ಎಂದು ಹೇಳಿದರು.
     ನಮ್ಮ ಸರ್ಕಾರ ಎಲ್ಲ ಸಮುದಾಯಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಬದಲಾವಣೆಯ ಅಲೆ ಇದ್ದು, ಜನರಲ್ಲಿ ನಮ್ಮ ಮೇಲಿದ್ದ ವಿಶ್ವಾಸ ಹೆಚ್ಚಾಗಿದೆ. ಎಲ್ಲರಿಗೂ ನ್ಯಾಯ ಸಿಗುವಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
     ಜನರ ಆಶೋತ್ತರಗಳನ್ನು ನಿರಾಸೆಗೊಳಿಸದೆ ಶ್ರದ್ಧೆಯಿಂದ ಪ್ರತಿನಿಧಿಸುತ್ತೇನೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪರ ನಿಂತಿದೆ. ಈ ಬಾರಿಯ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದೇ ಆದರೆ, ಎಲ್ಲ ವರ್ಗಗಳ ಹಿತಾಸಕ್ತಿಗಳ ಪರವಾಗಿ ಪ್ರಬಲವಾಗಿ ನಿಲ್ಲುತ್ತೇನೆಂದು ಹೇಳಿದರು.
     ಶಾಸಕ ಕೆ.ಎಸ್.ಬಸವಂತಪ್ಪ, ಬ್ಲಾಕ್ ಅಧ್ಯಕ್ಷ ಹನುಮಂತಪ್ಪ, ಬಿ.ಜಿ. ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಣ್ಣ, ಮುದೇಗೌಡ್ರ ಗಿರೀಶ್, ಬೇತೂರು ಕರಿಬಸಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts