More

    ಜನರಿಗೆ ಬೇಕು ರಕ್ತದಾನದ ಪ್ರೇರಣೆ

    ದಾವಣಗೆರೆ: ರಕ್ತವನ್ನು ಪರ್ಯಾಯವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಜನರೇ ರಕ್ತದಾನ ಮಾಡುವುದು ಅನಿವಾರ್ಯ ಎಂದು ಎಸ್ಪಿ ಹನುಮಂತರಾಯ ಹೇಳಿದರು.

    ನಗರದ ಎಸ್‌ಎಸ್ ಬಡಾವಣೆಯ ಲಿಟಲ್ ಚಾಂಪ್ಸ್ ಶಾಲಾವರಣದಲ್ಲಿ ಭಾನುವಾರ, ಲೈಫ್‌ಲೈನ್ ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹ ಸಂಸ್ಥೆ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪ್ರಕೃತಿಯಲ್ಲಿ ಸಿಗುವ ನೀರು, ಶುದ್ಧ ಗಾಳಿ, ಬೆಳಕನ್ನು ಮರು ಸೃಷ್ಟಿಸಲು ಸಾಧ್ಯವಿಲ್ಲ. ರಕ್ತವೂ ಕೂಡ ಹಾಗೆ. ಎಲ್ಲರಲ್ಲೂ ರಕ್ತದಾನ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಇಲಾಖೆ ಸಿಬ್ಬಂದಿ ಈ ವಿಚಾರದಲ್ಲಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದರು.

    ಲಾಕ್‌ಡೌನ್ ಸಂದರ್ಭದಲ್ಲಿ ಜನರು ಹೊರ ಬಾರದಿದ್ದರಿಂದ ಜಿಲ್ಲೆಯಲ್ಲಿ ಅಪಘಾತ, ಸಾವು-ನೋವಿನ ಸಂಖ್ಯೆ ಕಡಿಮೆ ಇತ್ತು. ಸಿಬ್ಬಂದಿ ಕೂಡ ನಿರಾಳರಾಗಿದ್ದರು. ಕರೊನಾ ಹಿನ್ನೆಲೆಯಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿರುವುದರಿಂದ ಜನರೂ ಜಾಗೃತರಾಗಿದ್ದಾರೆಂದು ಹೇಳಿದರು.

    ನಾವಿಂದು ರಕ್ತದ ಜೊತೆಗೆ ನೀರನ್ನು ಉಳಿಸುವ ಕೆಲಸ ಮಾಡಬೇಕಿದೆ. ಈ ಮೂಲಕ ಮಾನವರ ಜತೆಗೆ ಪಶು, ಪ್ರಾಣಿ-ಪಕ್ಷಿಗಳನ್ನು ರಕ್ಷಿಸಬೇಕಿದೆ.
    ಹಾವೇರಿ ಜಿಲ್ಲೆ ಅಕ್ಕಿ ಆಲೂರಿನ ಪೊಲೀಸ್ ಕಾನ್ಸ್‌ಟೇಬಲ್ ಕರಿಬಸಪ್ಪ ಗೊಂದಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಎಂಬ ಸಂಸ್ಥೆ ರಚಿಸಿಕೊಂಡು ರಕ್ತದಾನ, ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಜೀವ ಹೋಗುವ ವೇಳೆ ಅಂಗಾಂಗ ದಾನ, ಜೀವ ಹೋದ ನಂತರ ದೇಹದಾನ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ ಎಂದರು.

    ಸಂಸ್ಥೆ ಅಧ್ಯಕ್ಷ ಡಾ.ಎ.ಎಂ.ಶಿವಕುಮಾರ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್.ಆರಾಧ್ಯ, ಡಾ.ದೇವೇಂದ್ರಪ್ಪ, ಬಾಪೂಜಿ ರಕ್ತ ಭಂಡಾರದ ಅಧಿಕಾರಿ ಡಾ.ಕೆ.ಜಗದೀಶ್ವರಿ, ಎಸ್ಸೆಸ್ ಆಸ್ಪತ್ರೆ ರಕ್ತಭಂಡಾರದ ಅಧಿಕಾರಿ ಡಾ.ಜಿ.ಯು.ಕವಿತಾ, ಲೈಫ್‌ಲೈನ್ ಕಾರ್ಯದರ್ಶಿ ಅನಿಲ್ ಬಾರೆಂಗಳ್, ಪದಾಧಿಕಾರಿಗಳಾದ ಸಂತೋಷ್ ಕುಮಾರ್ ಗಾಯಕವಾಡ್, ಪೃಥ್ವಿ ಬಾದಾಮಿ, ಇನಾಯತ್‌ವುಲ್ಲಾ, ಮಾಧವ ಪದಕಿ, ಗೋಪಾಲಕೃಷ್ಣ, ಮಾಧವಿ ಗೋಪಾಲಕೃಷ್ಣ, ಶೇಷಾಚಲ ಇತರೆ ಪದಾಧಿಕಾರಿಗಳಿದ್ದರು. ಲಾಕ್‌ಡೌನ್ ಸಂದರ್ಭದಲ್ಲಿ ರಕ್ತದಾನ ಮಾಡಿದ 60 ದಾನಿಗಳಿಗೆ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts