More

    ಜೀವನದಲ್ಲಿ ಪುಣ್ಯ ಕಾರ್ಯಗಳೇ ರಕ್ಷಾ ಕವಚ

    ದಾವಣಗೆರೆ : ಜೀವನದಲ್ಲಿ ನಾವು ಮಾಡಿದ ಧಾರ್ಮಿಕ ಹಾಗೂ ಪುಣ್ಯ ಕಾರ್ಯಗಳೇ ನಮಗೆ ರಕ್ಷಾ ಕವಚವಾಗುತ್ತವೆ ಎಂದು ಕಣ್ವಕುಪ್ಪೆ ಗವಿಮಠದ ಶ್ರೀ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.
     ವಿಶ್ವ ಹಿಂದು ಪರಿಷತ್ ವತಿಯಿಂದ ನಗರದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯದಶಮಿ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
     ಬದುಕಿನಲ್ಲಿ ನಾವು ಪುಣ್ಯ ಕರ್ಮಗಳನ್ನು ಮಾಡಬೇಕು. ಆಪತ್ತಿನ ಕಾಲದಲ್ಲಿ ಅವುಗಳೇ ನಮ್ಮನ್ನು ಕಾಪಾಡುತ್ತವೆ. ಯೋಗ, ಧ್ಯಾನ, ಪ್ರಾಣಾಯಾಮ, ವ್ರತ, ಆಚರಣೆಗಳು ನಮ್ಮ ಇಂದ್ರಿಯಗಳನ್ನು ಸ್ವಸ್ಥವಾಗಿಡುತ್ತವೆ ಎಂದು ತಿಳಿಸಿದರು.
     ಪಂಚ ತತ್ವಗಳು, ಶರೀರದ ಅಂಗಾಂಗಗಳು, ಸೂರ್ಯ, ಚಂದ್ರರ ಬೆಳಕು, ನೀರು, ಗಾಳಿ ಎಲ್ಲವೂ ಭಗವಂತ ನಮಗೆ ನೀಡಿದ ಕೊಡುಗೆಗಳು. ದೇವರು ನಮಗೇನು ಕೊಟ್ಟಿದ್ದಾನೆ ಎನ್ನುವವರಿಗೆ ಈ ವಿಚಾರಗಳು ತಿಳಿದಿರಬೇಕು ಎಂದು ಹೇಳಿದರು.
     ಭಾರತ ತನ್ನ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಪರಂಪರೆ, ಅಧ್ಯಾತ್ಮದ ಕಾರಣಕ್ಕೆ ವಿಶ್ವ ಗುರುವಾಗಿತ್ತು. ದೇಶ, ಭಾಷೆ, ಪರಂಪರೆಯ ಬಗ್ಗೆ ನಮಗೆ ಗೌರವ ಇರಬೇಕು. ಶರನ್ನವರಾತ್ರಿ ದುಷ್ಟ ಶಕ್ತಿಯ ಸಂಹಾರ, ಶಿಷ್ಟರ ರಕ್ಷಣೆಯ ಸಂಕೇತವಾಗಿದೆ ಎಂದು ಹೇಳಿದರು.
     ಹಿಂದು ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಘನರಾಜ್ ಭಟ್ ಕೆದಿಲಾ ಮಾತನಾಡಿ, ಮಾತೃ ಸಂಸ್ಕೃತಿಯಿಂದ ದೂರವಾಗಿದ್ದು ದೇಶದಲ್ಲಿ ಅನೇಕ ವಿಕೃತಿಗಳಿಗೆ ಕಾರಣವಾಗಿದೆ. ಸಂಸ್ಕಾರ ನಾಶದಿಂದ ಭಾರತೀಯತೆಗೆ ಪೆಟ್ಟು ಬಿದ್ದಿದೆ ಎಂದು ಕಳವಳ ವ್ಯಕ್ತಪಡಿಸಿದರು.
     ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿ ನಮ್ಮೊಳಗಿನ ದೇವತ್ವವನ್ನು ತೋರಿಸಿಕೊಟ್ಟಿತು. ಇದನ್ನು ಗ್ರಹಿಸಿದ ಬ್ರಿಟಿಷರು ಮೆಕಾಲೆ ಶಿಕ್ಷಣ ಪದ್ಧತಿಯನ್ನು ಅಳವಡಿಸಿ ನಮ್ಮನ್ನು ಪ್ರಾಚೀನ ಸಂಸ್ಕೃತಿಯಿಂದ ವಿಮುಖಗೊಳಿಸಲು ಪ್ರಯತ್ನಿಸಿದರು ಎಂದು ತಿಳಿಸಿದರು.
     ಅಣು, ರೇಣು, ತೃಣ, ಕಾಷ್ಟಗಳಲ್ಲಿ ದೇವರನ್ನು ಕಾಣುವ ಸಂಸ್ಕಾರ ನಮ್ಮಲ್ಲಿದೆ. ಆದ್ದರಿಂದ ಪರಕೀಯರು ಎಷ್ಟೇ ದಾಳಿ ಮಾಡಿದರೂ ನಮ್ಮ ಸನಾತನ ಧರ್ಮ ಸಾಯಲಿಲ್ಲ ಎಂದು ಹೇಳಿದರು.
     ತಾಯಿಯಲ್ಲಿ ದೇವರನ್ನು, ದೇವರಲ್ಲಿ ತಾಯಿಯನ್ನು ಕಂಡ ಸಂಸ್ಕೃತಿ ನಮ್ಮದು. ವಿಜಯ ದಶಮಿಯ ಅಂಗವಾಗಿ ಶಕ್ತಿಯ ಆರಾಧನೆ ಮಾಡುತ್ತೇವೆ. ನವರಾತ್ರಿ ವ್ರತವನ್ನು ಶ್ರೀರಾಮಚಂದ್ರನೇ ಆಚರಿಸಿದ್ದ. ಅದಕ್ಕೆ ಅಷ್ಟೊಂದು ಮಹತ್ವವಿದೆ ಎಂದು ತಿಳಿಸಿದರು.
     ಎನ್. ರಾಜಶೇಖರ್ ಪ್ರಾಸ್ತಾವಿಕ ಮಾತನಾಡಿ, ವಿಶ್ವ ಹಿಂದು ಪರಿಷತ್ ವತಿಯಿಂದ ಪ್ರತಿ ವರ್ಷವೂ ವಿಜಯ ದಶಮಿಯನ್ನು ಆಚರಿಸುತ್ತ ಬಂದಿದ್ದೇವೆ. ನವರಾತ್ರಿ ಸಂದರ್ಭದಲ್ಲಿ ಮಹಿಳೆಯರು, ಯುವಕರು ಸಲ್ಲಿಸಿದ ಸೇವೆ ಶ್ಲಾಘನೀಯ ಎಂದರು. ವಿಶ್ವದ ಎಲ್ಲೆಡೆ ಭಯೋತ್ಪಾದನೆ ಹೆಚ್ಚಾಗುತ್ತಿದ್ದು ಮಾನವೀಯತೆ ಜಾಗೃತವಾಗಬೇಕಿದೆ ಎಂದು ಹೇಳಿದರು. ವಕೀಲ ಎಸ್. ಜಯಕುಮಾರ್ ಮಾತನಾಡಿದರು.
     ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅಂಬುಛೇದನ ನೆರವೇರಿಸಿದರು. ಮಹೋತ್ಸವದ ಸಂಚಾಲಕ ಕೆ.ಆರ್. ಮಲ್ಲಿಕಾರ್ಜುನ ಇದ್ದರು. ಸತೀಶ ಪೂಜಾರಿ ಸ್ವಾಗತಿಸಿದರು. ಜಯಣ್ಣ ನಿರೂಪಿಸಿದರು. ವಿನಾಯಕ ರಾನಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts