More

    ಭಾರತಕ್ಕೆ ಶೀಘ್ರ ಶಕ್ತಿಶಾಲಿ ರಾಷ್ಟ್ರ ಪಟ್ಟ

    ದಾವಣಗೆರೆ : ಜಗತ್ತಿನ ಐದನೇ ಆರ್ಥಿಕ ಬಲಿಷ್ಠ ದೇಶವಾದ ಭಾರತ 2030ನೇ ಇಸವಿ ವೇಳೆಗೆ ಸೂಪರ್ ಪವರ್ ರಾಷ್ಟ್ರ ಆಗಲಿದೆ ಎಂದು ದಾವಣಗೆರೆ ವಿವಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಪ್ರಾಧ್ಯಾಪಕ ಪ್ರೊ.ಆರ್. ಶಶಿಧರ್ ಹೇಳಿದರು.
     ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭದ್ರಾ ವಾಣಿಜ್ಯ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ಬ್ರಿಟನ್‌ನನ್ನು ಹಿಂದಿಕ್ಕಿರುವ ಭಾರತದ ಆರ್ಥಿಕ ಪ್ರಗತಿ ಮತ್ತಷ್ಟು ಹೆಚ್ಚಲಿದ್ದು, ಶೇ.7ಕ್ಕೂ ಅಧಿಕ ಜಿಡಿಪಿ ಬೆಳವಣಿಗೆ ಸಾಧಿಸಲಿದೆ ಎಂಬುದಾಗಿ ಐಎಂಎಫ್ ವರದಿ ತಿಳಿಸಿದೆ. ಮುಂದಿನ 10-15 ವರ್ಷದಲ್ಲಿ ವಾಣಿಜ್ಯಶಾಸ್ತ್ರ, ಆಡಳಿತ ಶಾಸ್ತ್ರ ಕ್ಷೇತ್ರ ಸುವರ್ಣ ಯುಗವಾಗಲಿದೆ ಎಂದು ತಿಳಿಸಿದರು.
     ದೇಶದ ಬ್ಯಾಂಕಿಂಗ್ ಕ್ಷೇತ್ರ ತ್ವರಿತ ಬೆಳವಣಿಗೆ ಹೊಂದುತ್ತಿದ್ದು ವಿಪುಲ ಉದ್ಯೋಗ ಅವಕಾಶಗಳು ಒದಗಿಬರುತ್ತಿವೆ. ಬ್ಯಾಂಕ್‌ಗಳಿಗೆ ಕೌಶಲಯುತ ಉದ್ಯೋಗಿಗಳ ಅವಶ್ಯಕತೆಯಿದೆ. ಕೃತಕ ಬುದ್ಧಿಮತ್ತೆ ಕೆಲಸ ಕಸಿದುಕೊಳ್ಳುತ್ತಿರುವ ಈ ದಿನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ತಂತ್ರಜ್ಞಾನ-ಸಂವಹನ ಕೌಶಲ ಹಾಗೂ ಸಮಯ ನಿರ್ವಹಣೆ ಬೆಳೆಸಿಕೊಳ್ಳಬೇಕು ಎಂದರು.
     ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲುವಿನ ಯೋಜನೆ ರೂಪಿಸಿಕೊಳ್ಳಬೇಕು, ಯಾವುದೇ ಗುರಿ ಸಾಧನೆಗೆ ದೂರದೃಷ್ಟಿ ಹೊಂದಿರಬೇಕು. ವಿಜನ್ ಮತ್ತು ಮಿಷನ್ ಎರಡೂ ಇರಬೇಕು. ಮಾತೃಭಾಷೆ ಜತೆಗೆ ಅಗತ್ಯವಾದ ಇತರೆ ಭಾಷೆಗಳನ್ನೂ ಕಲಿಯಬೇಕು. ವಿದ್ಯಾರ್ಥಿ ಹಂತದಿಂದಲೇ ಅಗತ್ಯ ತಯಾರಿ ಮಾಡಿಕೊಳ್ಳಬೇಕು ಎಂದರು.
     ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್. ಮುರುಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು-ಶ್ರದ್ಧೆ ಹಾಗೂ ಪರಿಶ್ರಮದಿಂದ ವಿದ್ಯಾಭ್ಯಾಸ ಕೈಗೊಂಡು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.
     ಭದ್ರಾ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಿ. ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಟಿ. ಮುರುಗೇಶ್, ಭದ್ರಾ ಎಜುಕೇಷನ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ. ಸಂಕೇತ್ ಇದ್ದರು. ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts