More

    ಭದ್ರಾ ರೈತರು ಹೋರಾಟಕ್ಕೆ ಸಜ್ಜು

    ದಾವಣಗೆರೆ : ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿವು ನಿಲ್ಲಿಸಿರುವುದನ್ನು ಖಂಡಿಸಿ ಜಿಲ್ಲೆಯ ರೈತರು ಹೋರಾಟಕ್ಕೆ ಸಜ್ಜುಗೊಂಡಿದ್ದು, ಸೆ.21ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಹಾಗೂ ಸೆ.22ರಂದು ಟ್ರಾೃಕ್ಟರ್‌ಗಳ ಮೆರವಣಿಗೆ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.
     ನಗರದ ಹದಡಿ ರಸ್ತೆಯ ನೀರಾವರಿ ಇಲಾಖೆ ಕಚೇರಿ ಬಳಿ ಬುಧವಾರ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಎಚ್.ಆರ್. ಲಿಂಗರಾಜ್ ಮಾತನಾಡಿ ರೈತ ಹೋರಾಟದ ರೂಪುರೇಷೆ ಪ್ರಕಟಿಸಿದರು.
     ಬೆಳಗ್ಗೆ 11 ಗಂಟೆಗೆ ನಗರದ ಕುಂದುವಾಡ ಸಮೀಪ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು ಹಾಗೂ ಸೆ.22 ರಂದು ಬೆಳಗ್ಗೆ 11 ಗಂಟೆಗೆ ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಿಂದ ಸುಮಾರು 300 ಟ್ರಾೃಕ್ಟರ್‌ಗಳ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.
     ಭದ್ರಾ ಡ್ಯಾಂನಿಂದ ಮುಂಗಾರು ಹಂಗಾಮಿಗೆ ಸತತ 100 ದಿನ ನೀರು ಹರಿಸುವ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ನಾಟಿ ಮಾಡಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸುವ ಮೂಲಕ ನಾಲೆಗೆ ನೀರು ಸ್ಥಗಿತಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿದರು.
     ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಕ್ರಮ ಪಂಪ್‌ಸೆಟ್‌ದಾರರ ಹಿತ ಮುಖ್ಯವೇ ಹೊರತು ರೈತರ ಹಿತ ಮುಖ್ಯವಲ್ಲ. ಸಭೆಯಲ್ಲಿದ್ದ ಜಿಲ್ಲಾ ಸಚಿವ ಮಲ್ಲಿಕಾರ್ಜುನ್ ಹಾಗೂ ಜಿಲ್ಲೆಯ ಎಲ್ಲ ಶಾಸಕರು ನೀರು ಕೊಡಿ ಇಲ್ಲವೇ ರಾಜೀನಾಮೆ ತೆಗೆದುಕೊಳ್ಳಿ ಎಂದು ರೈತರಪರ ಕೂಗು ಹಾಕಬೇಕಿತ್ತು. ಆದರೆ, ಜನಪ್ರತಿನಿಧಿಗಳು ಮತ ಪಡೆದು ರೈತರನ್ನು ಕಡೆಗಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
     ಭದ್ರಾ ಜಲಾಶಯ ನಿರ್ಮಾಣಗೊಂಡಿರುವುದು ಆಹಾರಧಾನ್ಯ ಬೆಳೆಯುವುದಕ್ಕಾಗಿ ತೋಟಗಾರಿಕೆಗೆ ಅಲ್ಲ. ಈಗಾಗಲೇ ಮಳೆ ವೈಫಲ್ಯದಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ನಗರದ ಜನತೆಗೂ ಕುಡಿಯಲು ಭದ್ರಾ ಜಲಾಶಯದ ನೀರೇ ಬೇಕು ಎಂಬುದನ್ನು ಮನಗಾಣಬೇಕು. ಆಹಾರ ಧಾನ್ಯ ಯಾವುದೇ ಫ್ಯಾಕ್ಟರಿಯಲ್ಲಿ ತಯಾರಾಗುವುದಿಲ್ಲ. ಸರ್ಕಾರ ರೈತರ ಪರ ಇದ್ದರೆ ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.
     ರೈತ ಮುಖಂಡ ಬಿ.ಎಂ. ಸತೀಶ್ ಕೊಳೇನಹಳ್ಳಿ ಮಾತನಾಡಿ, ಭದ್ರಾ ಜಲಾಶಯದಿಂದ ಮಂಗಳವಾರದಿಂದಲೇ ನೀರು ನಿಲ್ಲಿಸಲಾಗಿದ್ದು, ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಭೆಯನ್ನು ಮುಂದೂಡಲಾಗಿದೆ ಎಂದು ರೈತರ ಕಣ್ಣೀರೊರೆಸುವ ತಂತ್ರ ಅನುಸರಿಸುತ್ತಿದ್ದಾರೆ. ಜಿಲ್ಲಾ ಸಚಿವರು ಜಿಲ್ಲೆಯ ರೈತರನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.
     ನೂರು ದಿನ ನೀರು ಹರಿಸುವ ಭರವಸೆಯಿಂದ ಸುಮಾರು 1.50 ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಭತ್ತದ ನಾಟಿ ಮಾಡಿದ್ದು ಕೀಟನಾಶಕ ಹಾಗೂ ರಸಗೊಬ್ಬರ ಮೊದಲಾದವುಗಳಿಗೆ ಸಾಕಷ್ಟು ಹಣ ಖರ್ಚು ಮಾಡಿಕೊಂಡಿದ್ದಾರೆ. ಕಾಳುಕಟ್ಟುವ ಹಂತದಲ್ಲಿ ನೀರು ನಿಲ್ಲಿಸಿರುವುದು ಸರಿಯಲ್ಲ. ಸರ್ಕಾರ ಆಹಾರ ಉತ್ಪಾದನೆಗೆ ಭಂಗ ತರುವ ಕೆಲಸ ಮಾಡಬಾರದು. ಹಳ್ಳಿಹಳ್ಳಿಗಳಿಗೆ ತೆರಳಿ ರೈತರನ್ನು ಸಂಘಟಿಸುವ ಮೂಲಕ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
     ಮುಖಂಡ ಬೆಳವನೂರು ನಾಗೇಶ್ವರರಾವ್ ಮಾತನಾಡಿ, ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಅಕ್ರಮ ಪಂಪ್‌ಸೆಟ್‌ಗಳಿದ್ದು ನಿಜವಾದ ರೈತರಿಗೆ ನೀರು ಸಿಗುತ್ತಿಲ್ಲ. ನೂರು ದಿನ ನಿರಂತರ ನೀರು ಕೊಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
     ಮತ್ತಿ ಜಯಣ್ಣ, ಕುಂದುವಾಡ ಗಣೇಶಪ್ಪ, ಎಚ್.ಎನ್. ಗುರುನಾಥ್, ಶಾಮನೂರು ಕಲ್ಲೇಶಪ್ಪ, ಕಲಪನಹಳ್ಳಿ ಉಜ್ಜಪ್ಪ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts