More

    ಭದ್ರಾ ನಾಲೆಗಳಿಗೆ 100 ದಿನ ನೀರು ಹರಿಸಲು ಪಟ್ಟು

    ಭದ್ರಾ ನಾಲೆಗಳಿಗೆ 100 ದಿನ ನೀರು ಹರಿಸಲು ಪಟ್ಟು
      ಜಿಲ್ಲೆಯ ಅಚ್ಚುಕಟ್ಟು ಭಾಗದ ರೈತರ ಸಭೆ  ನಿರ್ಧಾರದಿಂದ ಹಿಂದೆ ಸರಿಯದಂತೆ ಒತ್ತಾಯ
     ವಿಜಯವಾಣಿ ಸುದ್ದಿಜಾಲ ದಾವಣಗೆರೆ
     ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸುತ್ತಿರುವ ನೀರನ್ನು ಮೊದಲು ನಿಗದಿಯಾದಂತೆ 100 ದಿನಗಳ ಅವಧಿಗೆ ಹರಿಸಬೇಕು. ಇದರಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಜಿಲ್ಲೆಯ ಅಚ್ಚುಕಟ್ಟು ಭಾಗದ ರೈತರು ಪಟ್ಟು ಹಿಡಿದಿದ್ದಾರೆ.
     ನಗರದ ಬೀರಲೀಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಸಭೆ ನಡೆಸಿದ ರೈತರು, ಯಾವುದೇ ಕಾರಣಕ್ಕೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬಾರದು ಎಂದು ಆಗ್ರಹಿಸಿದರು.
     ನಾಲೆಗೆ ನೀರು ಹರಿಸುವುದನ್ನು ಈಗ ನಿಲ್ಲಿಸಿ ಬೇಸಿಗೆ ಬೆಳೆಗೆ ಕೊಡಬೇಕು ಎಂದು ಅಚ್ಚುಕಟ್ಟಿನ ಮೇಲ್ಭಾಗದ ಕೆಲವು ರೈತರು ಆಗ್ರಹಿಸುತ್ತಿದ್ದಾರೆ. ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅವರ ನಿಲುವೂ ಅದೇ ಆಗಿದೆ. ಈ ಹಿನ್ನೆಲೆಯಲ್ಲಿ ಅವರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿಯಾಗಿದ್ದಾರೆ ಎನ್ನುವ ವಿಚಾರ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದಿತು.
     ಈ ಬೆಳವಣಿಗೆ ಗೊಂದಲಕ್ಕೆ ಕಾರಣವಾಗಿದೆ. ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಈ ಮೊದಲು ನಿಗದಿಯಾದಂತೆ 100 ದಿನಗಳ ಕಾಲ ನೀರು ಹರಿಸಬೇಕು ಎಂದು ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಯಿತು.
     ದಾವಣಗೆರೆ ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್ ಮಾತನಾಡಿ, ಈ ವಿಚಾರವಾಗಿ ರೈತರಿಗೆ ಯಾವುದೇ ಆತಂಕ ಬೇಡ. ಮೊದಲು ತೆಗೆದುಕೊಂಡಿರುವ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ. ಸಚಿವ ಮಲ್ಲಿಕಾರ್ಜುನ್ ಅವರ ನಿಲುವೂ ಅದೇ ಆಗಿದೆ. ಅಧೀಕ್ಷಕ ಇಂಜಿನಿಯರ್ ಅವರೂ ಅದೇ ಮಾತನ್ನು ಹೇಳಿದ್ದಾರೆ. ಈಗ ನೀರು ನಿಲ್ಲಿಸುವ, ಹೆಜ್ಜೆಯನ್ನು ಹಿಂದಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
     ನಾಲೆಗಳ ದುರಸ್ತಿ, ಗೇಟ್ ರಿಪೇರಿ, ಹೂಳು ತೆಗೆಯುವುದು ಇನ್ನಿತರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಚ್ಚುಕಟ್ಟಿನ ಉಪ ವಿಭಾಗಗಳಿಗೆ ತಲಾ 2 ಕೋಟಿ ರೂ. ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ, ಅದಕ್ಕೆ ಸಕಾರಾತ್ಮಕ ಸ್ಪಂದನೆಯೂ ಸಿಕ್ಕಿದೆ ಎಂದು ಮಾಹಿತಿ ನೀಡಿದರು.
     ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ ಶಾಮನೂರು ಮಾತನಾಡಿ, ಅಚ್ಚುಕಟ್ಟಿನಲ್ಲಿ ಶೇ. 65 ರಿಂದ 70ರಷ್ಟು ಪ್ರದೇಶ ದಾವಣಗೆರೆ ಜಿಲ್ಲೆಯಲ್ಲೇ ಇರುವುದರಿಂದ ಮುಂಬರುವ ದಿನಗಳಲ್ಲಿ ಕಾಡಾ ಸಮಿತಿಯ ಸಭೆಗಳನ್ನು ದಾವಣಗೆರೆಯಲ್ಲೇ ನಡೆಸಬೇಕು ಎಂದು ಒತ್ತಾಯಿಸಿದರು.
     ಈಗಾಗಲೇ ಶೇ. 30-40 ರಷ್ಟು ರೈತರು ಭತ್ತದ ನಾಟಿ ಮಾಡಿದ್ದಾರೆ. ಈ ಹಂತದಲ್ಲಿ ನೀರು ನಿಲ್ಲಿಸಿದರೆ ಸಮಸ್ಯೆಯಾಗುತ್ತದೆ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳಿದ್ದು ಕಬ್ಬು ಬೆಳೆಗೂ ನೀರಿನ ಅಗತ್ಯವಿದೆ. ಸರ್ಕಾರ ನಮ್ಮ ಜತೆಗೆ ನಿಲ್ಲಬೇಕು. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನೀರಾವರಿ ಸಚಿವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
     ಜಲಾಶಯದಲ್ಲಿ ಪ್ರಸ್ತುತ 36 ಟಿಎಂಸಿ ನೀರಿದೆ, ಸದ್ಯದ ಬೆಳೆಗೆ 28 ಟಿಎಂಸಿ ಸಾಕು. ಅಷ್ಟಾಗಿಯೂ ಇನ್ನೂ 8 ಟಿಎಂಸಿ ನೀರು ಉಳಿಯುತ್ತದೆ. ಆದರೂ ರೈತರಲ್ಲಿ ಒಡಕು ಮೂಡಿಸುವ ಕೆಲಸ ಆಗುತ್ತಿದೆ. ಇದೆಲ್ಲದರ ಹಿಂದೆ ಅಡಕೆ ಬೆಳೆಗಾರರ ಪರವಾದ ಲಾಬಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
     ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಶಾನುಭೋಗ ನಾಗರಾಜರಾವ್ ಮಾತನಾಡಿ, ಈ ವಿಚಾರವಾಗಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರ ಹಿಂದೆ ಕುತಂತ್ರ ನಡೆದಿದೆ. ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ನೀಡಿರುವ ಹೇಳಿಕೆ ಖಂಡನೀಯ ಎಂದು ಹೇಳಿದರು.
     ರೈತ ಮುಖಂಡ ಗೋಪನಾಳು ಕರಿಬಸಪ್ಪ ಮಾತನಾಡಿದರು. ಎ. ಮಂಜುನಾಥ್, ಕುಬೇರಪ್ಪ, ಚನ್ನಬಸವಣ್ಣ, ಶಿವಾಜಿ ಪಾಟೀಲ್, ಮಹೇಶ್ ಕುಂದುವಾಡ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts