More

    ದತ್ತ ಜಯಂತಿಗೆ ತಾರಾ ಮೆರುಗು

    ಚಿಕ್ಕಮಗಳೂರು: ವಿಎಚ್​ಪಿ ಹಾಗೂ ಬಜರಂಗದಳದಿಂದ ಡಿ.27 ರಿಂದ 29 ರವರೆಗೆ ಶ್ರೀ ದತ್ತಮಾಲಾ ಅಭಿಯಾನ ಹಾಗೂ ಶ್ರೀ ದತ್ತಜಯಂತಿ ಉತ್ಸವ ಪ್ರಯುಕ್ತ ನಡೆಯುವ ಮಹಿಳಾ ಸಂಕೀರ್ತನಾ ಯಾತ್ರೆಗೆ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗುವುದು ಎಂದು ಬಜರಂಗದಳ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ತಿಳಿಸಿದರು.

    ಡಿ.27 ರಂದು ಅನಸೂಯಾ ದೇವಿ ಪೂಜೆ ಅಂಗವಾಗಿ ಮಹಿಳೆಯರು ಬೆಳಗ್ಗೆ 9.30ಕ್ಕೆ ನಗರದ ಬೋಳರಾಮೇಶ್ವರ ದೇವಾಲಯದಿಂದ ಶ್ರೀ ಕಾಮಧೇನು ಗಣಪತಿ ದೇವಾಲಯದವರೆಗೂ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡು ನಂತರ ಭಕ್ತರು ದತ್ತಪೀಠಕ್ಕೆ ತೆರಳಲಿದ್ದಾರೆ. ಸಂಪ್ರದಾಯದಂತೆ ಬಳೆ, ಅರಿಶಿಣ, ಕುಂಕುಮ ನೀಡಲಾಗುತ್ತದೆ. ದತ್ತಹೋಮ, ಗಣಹೋಮ ನೆರವೇರಿಸಿ ದೇವಿ ಮತ್ತು ದತ್ತಪಾದುಕೆ ದರ್ಶನ ಮಾಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಮಹಿಳೆಯರ ಸಂಕೀರ್ತನಾ ಯಾತ್ರೆಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಕಡೂರು ವೇದಾಕೃಷ್ಣಮೂರ್ತಿ, ಹುಬ್ಬಳ್ಳಿ, ಶಿವಮೊಗ್ಗ ಜಿಲ್ಲೆಯ ಮಹಿಳಾ ಸಾಹಿತಿಗಳು, ಚಲನಚಿತ್ರ ತಾರೆಯರನ್ನು ಆಹ್ವಾನಿಸಲಾಗುವುದು ಎಂದರು.

    ವಿಎಚ್​ಪಿ ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಪೈ, ಜಿಲ್ಲಾ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಿಲ್ಲಾ ಉಪಾಧ್ಯಕ್ಷ ಪ್ರೇಮ್​ರಣ್, ನಗರ ಸಂಚಾಲಕ ಕೃಷ್ಣ, ಬಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್ ಇದ್ದರು.

    ಶೋಭಾಯಾತ್ರೆ ಬದಲಿಗೆ ಸಂಕೀರ್ತನಾ ಯಾತ್ರೆ: ಪ್ರತಿ ವರ್ಷದಂತೆ ನಡೆಯುತ್ತಿದ್ದ ಶೋಭಾಯಾತ್ರೆ ಬದಲು ಡಿ.28 ರಂದು ಸಂಕೀರ್ತನಾ ಯಾತ್ರೆ ನಡೆಸಲಾಗುವುದು. ಮಧ್ಯಾಹ್ನ 2 ಗಂಟೆಗೆ ಅಲಂಕೃತ ವಾಹನದಲ್ಲಿ ಶ್ರೀಗುರು ದತ್ತಾತ್ರೇಯರ ಉತ್ಸವಮೂರ್ತಿಯನ್ನು ಶ್ರೀ ಕಾಮಧೇನು ಗಣಪತಿ ದೇವಾಲಯದಿಂದ ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ, ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವರೆಗೂ ಮೆರವಣಿಗೆ ಮಾಡಿ ಕಾರ್ಯಕರ್ತರೆಲ್ಲರೂ ಒಗ್ಗೂಡಿ ಮಹಾ ಆರತಿ ನೆರವೇರಿಸಲಾಗುತ್ತದೆ. ಮೆರವಣಿಗೆಯಲ್ಲಿ 500ಕ್ಕೂ ಹೆಚ್ಚು ಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ರಘು ಸಕಲೇಶಪುರ ತಿಳಿಸಿದರು.

    ಡಿ.29 ರಂದು ದತ್ತ ಪೀಠದಲ್ಲಿ ರಾಜ್ಯ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ದತ್ತಪೀಠ ಹಿಂದುಗಳಿಗೆ ಒಪ್ಪಿಸುವವರೆಗೂ ಪಾದುಕೆ ದರ್ಶನ ಮಾಡುತ್ತೇನೆಂದು ಅಂದುಕೊಂಡಿರುವ ಕಾರ್ಯಕರ್ತರು ಸೇರಿದಂತೆ 4 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ದತ್ತಮಾಲಾಧಾರಿಗಳು ಹೊನ್ನಮ್ಮಹಳ್ಳದಲ್ಲಿ ಸ್ನಾನಮಾಡಿ ಭಜನೆಯೊಂದಿಗೆ ನಡಿಗೆಯಲ್ಲಿ ಪೀಠಕ್ಕೆ ತೆರಳಿ ಹೋಮ ಹವನಗಳಲ್ಲಿ ಪಾಲ್ಗೊಳ್ಳಲಿದ್ದು ಈ ಬಾರಿ ’ಕರೊನಾ ಮುಕ್ತಿಗಾಗಿ ಧನ್ವಂತರಿ ಹೋಮ’ ನಡೆಸಲು ನಿಶ್ಚಯಿಸಲಾಗಿದೆ ಎಂದರು.

    ನ್ಯಾಯಾಲಯವೇ ಪರಿಹರಿಸಬೇಕು: ಅಯೋಧ್ಯೆ ಶ್ರೀರಾಮ ಮಂದಿರದ ತೀರ್ಪಿನಂತೆಯೇ ದತ್ತಪೀಠದ ತೀರ್ಪ ನ್ಯಾಯಾಲಯದಿಂದಲೇ ಬಂದು ಚರ್ಚೆಗೆ ಅವಕಾಶವಿಲ್ಲದಂತೆ ಸಮಸ್ಯೆ ಬಗೆಹರಿಯಬೇಕೆಂಬ ದೃಷ್ಟಿಯಿಂದ ಯೋಚಿಸಲಾಗುತ್ತಿದೆ. ನಮ್ಮ ಪೂರ್ವಜರು ದತ್ತಪೀಠಕ್ಕೆ ಆಗಮಿಸಿ ಅಲ್ಲಿನ ವಾಸ್ತವಸ್ಥಿತಿ ಅರಿತು ಹೊಸ ಸಮಿತಿ ವರದಿ ನೀಡಬೇಕು. ಯಾವುದೆ ಸರ್ಕಾರ ಇದ್ದರೂ ಹೋರಾಟ ಮಾಡುವ ಪರಿಸ್ಥಿತಿಯಿದೆ. ಹಾಗಾಗಿ ಇಸ್ಲಾಮಿನ ಕುರುಹುಗಳಿಲ್ಲದೆ ಸರ್ಕಾರಿ ದಾಖಲೆಯಲ್ಲಿಯೆ ಇನಾಂ ದತ್ತಾತ್ರೇಪೀಠ ಎಂಬುದಾಗಿದ್ದು ದಾಖಲೆಗಳು ಮತ್ತು ಧಾರ್ವಿುಕ ಭಾವನೆಗಳು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವೇ ಸತ್ಯಾಸತ್ಯತೆ ಆಧರಿಸಿ ತೀರ್ಪ ನೀಡಿ ಅದನ್ನು ಎಲ್ಲರೂ ಸ್ವಾಗತಿಸುವಂತಾಗಬೇಕು ಎಂಬುದು ಉದ್ದೇಶ ಎಂದು ರಘು ಸಕಲೇಶಪುರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts