More

    ದಾಸ ಶ್ರೇಷ್ಠರಿಗಿಂತಲೂ ಸರ್ವಶ್ರೇಷ್ಠ ಕವಿ ಸರ್ವಜ್ಞ

    ಹಿರೇಕೆರೂರ: ತಾಲೂಕಿನ ಹೆಮ್ಮೆಯ ಪುತ್ರ, ಜಗತ್ತಿಗೆ ಮಾರ್ಗದರ್ಶಕನಾಗಿ ಹೊರಹೊಮ್ಮಿದ ವರಕವಿ ಸರ್ವಜ್ಞ, ದಾಸ ಶ್ರೇಷ್ಠರಿಗಿಂತಲೂ ಸರ್ವಶ್ರೇಷ್ಠ ಕವಿಯಾಗಿದ್ದಾರೆ ಎಂದು ಸರ್ವಜ್ಞ ಪ್ರಾಧಿಕಾರ ಸಮಿತಿ ಸದಸ್ಯ ಹ.ಮು. ತಳವಾರ ಹೇಳಿದರು.

    ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ಡಾ.ಎಪಿಜೆ ಅಬ್ದುಲ್ ಕಲಾಂ ವಿಜ್ಞಾನ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ವರಕವಿ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ವಜ್ಞ ಒಟ್ಟು 2100 ತ್ರಿಪದಿಗಳನ್ನು ರಚಿಸಿದ್ದಾರೆ. ತತ್ವ, ಜ್ಞಾನ ಬೆಳಕು, ಜನ ಜಾಗೃತಿ ಮೂಡಿಸುವುದು, ಲೋಕ ನೀತಿ, ಜೀವನ ಸರಸ ವಿರಸ ಹೀಗೆ ಅನೇಕ ವಿಷಯಗಳು ಅವರ ತ್ರಿಪದಿಗಳಲ್ಲಿ ಇರುತ್ತವೆ ಎಂದರು.

    ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ, ಪ್ರಾಧಿಕಾರದ ಸದಸ್ಯ ಎಸ್.ಎಸ್. ಪಾಟೀಲ ಮಾತನಾಡಿ, ಉಪನಿಷತ್​ಗಳು ಮತ್ತು ಪುರಾಣಗಳು ಹೇಳದ ಮೌಲ್ವಿಕ ಮಾತುಗಳನ್ನು ವಚನಗಳ ಮೂಲಕ ಹೇಳಿರುವ ಸರ್ವಜ್ಞ, ಜನಪರ ಮತ್ತು ಸಮಾಜಮುಖಿ ಕವಿ. ಸಾಮಾಜಿಕ ಅಸಮಾನತೆ ಹಾಗೂ ಜಾತಿ ವ್ಯವಸ್ಥೆ ಕುರಿತು ಸರ್ವಜ್ಞರಂತೆ ವಚನಗಳಲ್ಲಿ ಸರಳವಾಗಿ ಹೇಳಿರುವ ಮತ್ತೊಬ್ಬ ಕವಿಯನ್ನು ಕಾಣಲು ಸಾಧ್ಯವಿಲ್ಲ. ಹೀಗಾಗಿ ಪಂಪ, ರನ್ನ, ಪೊನ್ನರಂತಹ ದಾಸಶ್ರೇಷ್ಠರಿಗಿಂತಲೂ ಸರ್ವಶ್ರೇಷ್ಠರಾಗಿದ್ದಾರೆ ಎಂದರು.

    ಸಾನ್ನಿಧ್ಯ ವಹಿಸಿದ್ದ ತಿಪ್ಪಾಯಿಕೊಪ್ಪದ ಗುರು ಮೂಕಪ್ಪ ಶಿವಯೋಗಿಗಳ ಮಠದ ಉತ್ತರಾಧಿಕಾರಿ ಮಹಾಂತ ದೇವರು ಮಾತನಾಡಿ, ಜಂಗಮ ಕವಿ ಸರ್ವಜ್ಞ ಜನಸಾಮಾನ್ಯರೊಂದಿಗೆ ಬೆರೆತು ಅವರ ಸರಳವಾದ ಭಾಷೆ, ನುಡಿಗಟ್ಟುಗಳಲ್ಲಿಯೇ ತ್ರಿಪದಿಗಳನ್ನು ರಚಿಸುವುದರ ಮೂಲಕ ‘ಜನತೆಯ ಕವಿ’ಯೆನಿಸಿ ಕೊಂಡಿದ್ದಾನೆ. ಈ ಮೂಲಕ ಸಾಹಿತ್ಯವೆಂದರೆ ಜನಜೀವನದ ಪ್ರತಿಬಿಂಬ ಎನ್ನುವುದನ್ನು ಅಕ್ಷರಶಃ ತೋರಿಸಿದ್ದಾನೆ ಎಂದರು.

    ಸಿಇಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಮಾತನಾಡಿದರು. ಪ್ರೊ.ಮೋಹನಕುಮಾರ ಕೆ.ಪಿ. ಉಪನ್ಯಾಸ ನೀಡಿದರು.

    ಆನಂದ ದೇವರು, ಶಿವಪ್ರಸಾದ ದೇವರು, ಸರ್ವಜ್ಞ ಪ್ರಾಧಿಕಾರ ಸಮಿತಿ ಸದಸ್ಯ ಎಂ.ಎಚ್. ಹರವಿಶೆಟ್ಟರ, ಮದ್ವೀರಶೈವ ಸಮಾಜದ ಅಧ್ಯಕ್ಷ ವಿ.ಡಿ. ಹಂಪಾಳಿ, ಪಪಂ ಸದಸ್ಯ ಕಂಠಾಧರ ಅಂಗಡಿ, ಎಸ್. ವೀರಭದ್ರಯ್ಯ, ಡಾ.ಎಸ್.ಬಿ. ಚನ್ನಗೌಡರ, ಹಿರಿಯ ಸಾಹಿತಿ ನಿಂಗಪ್ಪ ಚಳಗೇರಿ, ರವಿಶಂಕರ ಬಾಳಿಕಾಯಿ, ಶಂಕ್ರಪ್ಪ ಗೌಡರ, ನಾಗರಾಜಪ್ಪ ಎಂ.ಎಸ್ ಹಾಗೂ ವಿದ್ಯಾರ್ಥಿಗಳು ಇದ್ದರು.

    ಉಪನ್ಯಾಸಕರಾದ ಪ್ರವೀಣ ಕುರವತ್ತೇರ, ಎಂ.ಎಸ್.ನಾಗರಾಜಪ್ಪ, ಪ್ರಾಚಾರ್ಯ ಎಸ್.ಬಿ.ಚನ್ನಗೌಡ್ರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts