More

    ನಾಡಿಗೆ ಡಾ. ರಾಜ್ ಕೊಡುಗೆ ಅಪಾರ

    ಬೆಳಗಾವಿ: ಕನ್ನಡ ನಾಡು-ನುಡಿಯ ರಕ್ಷಣೆಗೆ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ನಟಸಾರ್ವಭೌಮ ಡಾ. ರಾಜಕುಮಾರ ಅವರ ಕೊಡುಗೆ ಅಪಾರವಾಗಿದೆ. ಭಾಷೆ ಮತ್ತು ನಟನೆಯ ಮೂಲಕ ಅವರು ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ ಎಂದು ಸಾಹಿತಿ ಶಿರೀಷ್ ಜೋಶಿ ಅಭಿಪ್ರಾಯಪಟ್ಟರು.

    ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಶುಕ್ರವಾರ ವಾರ್ತಾಭವನದಲ್ಲಿ ಸರಳವಾಗಿ ಆಯೋಜಿಸಿದ್ದ 92ನೇ ಜಯಂತ್ಯುತ್ಸವದಲ್ಲಿ ಡಾ. ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

    ಡಾ. ರಾಜಕುಮಾರ ಅವರ ಭಾಗವಹಿಸುವಿಕೆಯಿಂದಲೇ ಗೋಕಾಕ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ರಂಗಭೂಮಿ ಹಿನ್ನೆಲೆಯಿಂದ ಬಂದ ಡಾ. ರಾಜ್ ಅವರು ಅತ್ಯುತ್ತಮ ಅಭಿನಯ, ಹಿನ್ನೆಲೆ ಗಾಯನ, ಸ್ಪಷ್ಟ ಕನ್ನಡ ಮಾತುಗಳು ಮತ್ತು ಕನ್ನಡಪರ ಕಾಳಜಿಯಿಂದ ನಟಸಾರ್ವಭೌಮರಾಗಿ, ಕರ್ನಾಟಕ ರತ್ನವಾಗಿ ಹೊರಹೊಮ್ಮಿದರು ಎಂದು ವಿವರಿಸಿದರು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಮಾತನಾಡಿ, ಸದಭಿರುಚಿಯ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಡಾ. ರಾಜ್, ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಸಾಧನೆ ಸ್ಮರಿಸಲು ಪ್ರತಿವರ್ಷ ಸರ್ಕಾರದ ವತಿಯಿಂದ ಏ. 24ರಂದು ಡಾ. ರಾಜಕುಮಾರ ಜಯಂತಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅನಂತ ಪಪ್ಪು, ಎಂ.ಎಲ್. ಜಮಾದಾರ ಹಾಗೂ ವಾರ್ತಾ ಇಲಾಖೆ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts