More

    ವಿವಾದದ ಬಿರುಗಾಳಿ ಎಬ್ಬಿಸಿದ್ದ ರಫೇಲ್

    ಭಾರತೀಯ ವಾಯುಪಡೆಯ ಶಕ್ತಿ ಹೆಚ್ಚಿಸುವ ರಫೇಲ್ ಯುದ್ಧ ವಿಮಾನಗಳ ಖರೀದಿ ಭಾರಿ ವಿವಾದಕ್ಕೂ ಕಾರಣವಾಗಿತ್ತು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಹೊಸ ಒಡಂಬಡಿಕೆ ಮಾಡಿಕೊಂಡಿದ್ದು, ಕಾಂಗ್ರೆಸ್ ನಾಯಕರ ವಿರೋಧಕ್ಕೆ ಗುರಿಯಾಯಿತು. ಹೊಸ ಒಪ್ಪಂದದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಫೇಲ್ ವಿಚಾರವನ್ನು ಪ್ರಮುಖವಾಗಿಟ್ಟುಕೊಂಡು ಪ್ರಚಾರ ನಡೆಸಿತು. ಸುಪ್ರೀಂಕೋರ್ಟ್​ಗೂ ಮೊರೆ ಹೋಯಿತು. ಆದರೆ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಈ ಕುರಿತ ಸಂಕ್ಷಿಪ್ತ ವಿವರಣೆ ಇಲ್ಲಿದೆ.

    ಕಾಂಗ್ರೆಸ್ ಆರೋಪ ಏನಿತ್ತು? : 54 ಸಾವಿರ ಕೋಟಿ  ರೂ.ಗೆ 126 ವಿಮಾನಗಳನ್ನು ಖರೀದಿಸುವ ಕುರಿತು ಯುಪಿಎ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಎನ್​ಡಿಎ ಸರ್ಕಾರ 36 ಯುದ್ಧವಿಮಾನಗಳಿಗೆ 58 ಸಾವಿರ ಕೋಟಿ ರೂ. ಪಾವತಿಸಲು ಮುಂದಾಗಿದೆ. ಪ್ರತಿ ವಿಮಾನವನ್ನು  428 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಯುಪಿಎ ನಿರ್ಧರಿಸಿತ್ತು. ಎನ್​ಡಿಎ ಸರ್ಕಾರ ಅದೇ ವಿಮಾನಕ್ಕೆ  1,555 ಕೋಟಿ  ರೂ. ಪಾವತಿಸಲು ಮುಂದಾಗಿದೆ. ಉದ್ಯಮಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಕಂಪನಿಗೆ ಲಾಭ ಮಾಡಿಕೊಡುವ ಸಲುವಾಗಿ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಬದಲಾವಣೆ ಮಾಡಲಾಗಿದೆ. ಎಚ್​ಎಎಲ್ ಜತೆಗಿನ ಆಫ್​ಸೆಟ್ ಬದಲಿಸಿ ರಿಲಯನ್ಸ್​ಗೆ ನೀಡುವಲ್ಲಿ ಪ್ರಧಾನಿ ಪಾತ್ರ ದೊಡ್ಡದಿದೆ. ಇದು 30 ಸಾವಿರ ಕೋಟಿ ರೂ. ಗಳ ಹಗರಣ ಎಂದು ಕಾಂಗ್ರೆಸ್ ಆರೋಪಿಸಿತ್ತು.

    ಫ್ರಾನ್ಸ್ ಪ್ರತಿಕ್ರಿಯೆ : ರಫೆಲ್ ಸಂಬಂಧಿಸಿ ಭಾರತ- ಫ್ರಾನ್ಸ್ ನಡುವೆ 2008ರಲ್ಲಿ ನಡೆದಿದ್ದ ಒಪ್ಪಂದದ ವಿವರವನ್ನು ಬಹಿರಂಗ ಮಾಡುವಂತಿಲ್ಲ ಎಂಬ ನಿಯಮ ವಿಧಿಸಲಾಗಿತ್ತು. ರಕ್ಷಣೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ಬಹಿರಂಗಗೊಳ್ಳದಂತೆ ನೋಡಿಕೊಳ್ಳುವುದು ಎರಡೂ ದೇಶಗಳ ಜವಾಬ್ದಾರಿ ಎಂದು ಫ್ರಾನ್ಸ್ ಪ್ರತಿಕ್ರಿಯೆ ನೀಡಿತ್ತು.

    26,979 ಕೋಟಿ ರೂ. ಉಳಿತಾಯ!

    ಮೋದಿ ಸರ್ಕಾರದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಿಂದ  26,979 ಕೋಟಿ ರೂ. ಉಳಿತಾಯವಾಗಿದೆ ಎಂದು ಮಹಾಲೇಖಪಾಲರ(ಸಿಎಜಿ) ವರದಿಯಲ್ಲಿ ಹೇಳಲಾಗಿತ್ತು. ಯುಪಿಎ ಸರ್ಕಾರದಲ್ಲಿ ಅಂತಿಮ ರೂಪ ಪಡೆದಿದ್ದ ಖರೀದಿ ಪ್ರಕ್ರಿಯೆ ಹಾಗೂ ಎನ್​ಡಿಎ ಸರ್ಕಾರ ಒಪ್ಪಂದ ಮಾಡಿಕೊಂಡಿರುವ ಮೊತ್ತದಲ್ಲಿ  26,941 ಕೋಟಿ ರೂ. ವ್ಯತ್ಯಾಸವಿದೆ ಎಂದು ಉಲ್ಲೇಖಿಸಲಾಗಿತ್ತು. ರಫೇಲ್ ಒಪ್ಪಂದದಲ್ಲಿ ಭಾರಿ ಅಕ್ರಮ ನಡೆದಿದೆ, ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್​ಗೆ ಇದರಿಂದ ಮುಖಭಂಗವಾಗಿತ್ತು. ಯುಪಿಎ ಅವಧಿಯಲ್ಲಿ 126 ಯುದ್ಧ ವಿಮಾನಗಳನ್ನು ಖರೀದಿಸಲು ಟೆಂಡರ್ ಅಂತಿಮಗೊಳಿಸಲಾಗಿತ್ತು. ಅದರಲ್ಲಿ 18 ವಿಮಾನಗಳು ಮಾತ್ರ ಫ್ಲೈ-ಅವೇ ಸ್ಥಿತಿಯಲ್ಲಿದ್ದವು. ಈಗ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಒಟ್ಟು 36 ಫ್ಲೇ-ಅವೇ ಸ್ಥಿತಿಯ ಯುದ್ಧ ವಿಮಾನ ಖರೀದಿಸಲಾಗುತ್ತಿದೆ. ಒಂದೊಮ್ಮೆ ಯುಪಿಎ ಅವಧಿಯಲ್ಲಿ 36 ವಿಮಾನ ಖರೀದಿಸಿದ್ದರೆ ಅದರ ಮೊತ್ತ 75,780 ಕೋಟಿ ರೂ. ಆಗುತ್ತಿತ್ತು. ಎನ್​ಡಿಎ ಅವಧಿಯಲ್ಲಿ 62,900 ಕೋಟಿ ರೂ.ಗಳಿಗೆ 36 ವಿಮಾನ ದೊರೆಯುತ್ತಿದೆ. ಈ ಲೆಕ್ಕಾಚಾರದಲ್ಲಿ ಭಾರತಕ್ಕೆ 12,700 ಕೋಟಿ ರೂ.ಗಳಿಗೂ ಅಧಿಕ ಉಳಿತಾಯವಾಗುತ್ತದೆ. ಯುಪಿಎ ಸರ್ಕಾರದ ಪ್ರಕಾರ ವಿಮಾನ ಹಸ್ತಾಂತರದ ಅವಧಿಯಲ್ಲೇ ಹಣ ಪಾವತಿ ಮಾಡಬೇಕಿತ್ತು. ಅಂದಿನ ರೂಪಾಯಿ ಮೌಲ್ಯದಲ್ಲಿ ಒಟ್ಟು ಮೊತ್ತ   94,466 ಕೋಟಿ ರೂ. ತಲುಪುತ್ತಿತ್ತು. ಈಗ ಎನ್​ಡಿಎ ಸರ್ಕಾರ   67,487 ಕೋಟಿಗಳಿಗೆ ವಿಮಾನ ಪಡೆಯುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ -ಠಿ; 26,979 ಕೋಟಿ ಉಳಿತಾಯವಾಗುತ್ತಿದೆ. ಇದನ್ನೂ ಓದಿ: ಶತ್ರುಗಳ ಎದೆಯಲ್ಲಿ ಶುರುವಾಯ್ತು ನಡುಕ; ಫ್ರಾನ್ಸ್​ನಿಂದ ಟೇಕ್​ಆಫ್​ ಆಯ್ತು ರಫೇಲ್​…!

    ಏನಿದು ರಫೇಲ್ ಡೀಲ್?

    2007ರಲ್ಲಿ ಯುಪಿಎ ಸರ್ಕಾರ ವಾಯುಪಡೆಗಾಗಿ 126 ವಿಮಾನಗಳ ಖರೀದಿಗೆ ಅನುಮತಿ ನೀಡಿತ್ತು. ಬಿಡ್ಡಿಂಗ್ ಪ್ರಕ್ರಿಯೆಯೂ ಆರಂಭವಾಗಿತ್ತು. ಫ್ರಾನ್ಸ್​ನ ಡಸಲ್ಟ್ ಏವಿಯೇಷನ್ ಕಂಪನಿ ಕಡಿಮೆ ಮೊತ್ತ ಬಿಡ್ ಮಾಡುವ ಮೂಲಕ ಒಪ್ಪಂದ ತನ್ನದಾಗಿಸಿಕೊಂಡಿತ್ತು. ಬಳಿಕ ರಫೆಲ್ ಯುದ್ಧವಿಮಾನದ ತಾಂತ್ರಿಕ ಪರೀಕ್ಷೆ, ಪರಿಶೀಲನೆಯನ್ನು ಭಾರತಿಯ ವಾಯುಪಡೆ ಕೈಗೊಂಡಿತ್ತು. 2011ರವರೆಗೂ ಈ ಪ್ರಕ್ರಿಯೆ ನಡೆಯಿತು. ರಫೆಲ್ ವಿಮಾನ ಭಾರತೀಯ ವಾಯು ಪಡೆ ಸೇರಲು ಅರ್ಹ ಎಂದು 2012ರಲ್ಲಿ ಘೋಷಿಸಲಾಯಿತು. ಬಳಿಕ ವಿಮಾನ ಕಂಪನಿ ಜತೆ ಕೇಂದ್ರ ಸರ್ಕಾರ ಮಾತುಕತೆ ಆರಂಭಿಸಿತು. ಹಲವು ತಾಂತ್ರಿಕ ಕಾರಣಗಳಿಂದಾಗಿ 2014ರವರೆಗೂ ಮಾತುಕತೆ ಮುಂದುವರಿಯಿತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 2015ರಲ್ಲಿ ಫ್ರಾನ್ಸ್ ಗೆ ಭೇಟಿ ನೀಡಿ, ರಫೆಲ್ ಯುದ್ಧವಿಮಾನ ಕುರಿತು ಹೊಸ ಒಪ್ಪಂದ ಮಾಡಿಕೊಂಡರು. ಹಾರಾಟಕ್ಕೆ ಸಿದ್ಧವಾಗಿರುವ 36 ವಿಮಾನಗಳನ್ನು ಭಾರತಕ್ಕೆ ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಯಿತು.

    ಅಕ್ರಮ ನಡೆದಿಲ್ಲ ಎಂದ ಸುಪ್ರೀಂ

    ರಫೇಲ್ ಖರೀದಿ ಆರೋಪಗಳಿಗೆ ತೆರೆ ಎಳೆದ ಸುಪ್ರೀಂಕೋರ್ಟ್, ಈ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿತು. ಮೋದಿ ಸರ್ಕಾರಕ್ಕೆ ಪರೋಕ್ಷವಾಗಿ ಕ್ಲೀನ್​ಚಿಟ್ ನೀಡಿತು. ರಫೇಲ್ ಒಪ್ಪಂದದ ದೇಶೀಯ ಪಾಲುದಾರ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಸರ್ಕಾರದ ನಿರ್ಧಾರವನ್ನು ಅನುಮಾನಿಸುವ ಪ್ರಮೇಯವೇ ಇಲ್ಲ. ಖಾಸಗಿ ವ್ಯಕ್ತಿಗಳಿಗೆ ಲಾಭವಾಗುವಂತೆ ಪಕ್ಷಪಾತ ಮಾಡಿರುವ ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ. ಒಪ್ಪಂದ ಸಂಬಂಧ ಬೆಲೆಯ ಪರಾಮರ್ಶೆ ನಡೆಸುವುದು ಕೋರ್ಟ್ ಕೆಲಸವಲ್ಲ. ಬೆಲೆ ಪರಾಮರ್ಶೆ, ಖರೀದಿ ಹಾಗೂ ದೇಶೀಯ ಪಾಲುದಾರನ ಆಯ್ಕೆ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಾದ ಅಗತ್ಯ ಕಾಣುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಹೇಳಿತ್ತು. ಇದನ್ನೂ ಓದಿ: ರಫೇಲ್ ಮಾದರಿಯಲ್ಲಿ ತೇಜಸ್ ಯುದ್ಧವಿಮಾನ ಅಭಿವೃದ್ಧಿ: ಏರೋನಾಟಿಕಲ್ ಡಿಸೈನ್ ಏಜೆನ್ಸಿಯಿಂದ ಅಧ್ಯಯನ  

    ಜೆಪಿಸಿ ರಚನೆಯೂ ಇಲ್ಲ: ಯುದ್ಧ ವಿಮಾನ ಖರೀದಿ ಕುರಿತ ತನಿಖೆಗೆ ಜಂಟಿ ಸದನ ಸಮಿತಿ ರಚಿಸಬೇಕೆಂದು ಪ್ರತಿಪಕ್ಷಗಳು ಸಂಸತ್​ನಲ್ಲಿ ಪ್ರತಿಭಟನೆ ನಡೆಸಿದ್ದವು. ಆದರೆ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಸಮಿತಿ ರಚನೆ ಆಗ್ರಹವನ್ನು ತಿರಸ್ಕರಿಸಿದೆ.

    ಲಡಾಖ್​ ಗಡಿ ರಕ್ಷಣೆಗೆ ನಿಯೋಜನೆಯಾಗಲಿದೆ ರಫೇಲ್​ ಯುದ್ಧ ವಿಮಾನ? ಚೀನಾ ಎದುರಿಸಲು ಭಾರತ ಸನ್ನದ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts