More

    ಕೇಜ್ರಿವಾಲ್ ಮಾತಿಂದ ಸಿಂಗಾಪೂರ್ ಗರಂ : ‘ಭಾರತದ ಪರವಾಗಿ ಮಾತನಾಡುತ್ತಿಲ್ಲ’ ಎಂದು ಸಮಾಧಾನ ಮಾಡಿದ ವಿದೇಶಾಂಗ ಸಚಿವರು

    ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ನಿನ್ನೆ ‘ಸಿಂಗಾಪೂರ್​ನಲ್ಲಿ​ ಮಕ್ಕಳ ಮೇಲೆ ಪರಿಣಾಮ ಉಂಟುಮಾಡುವ ಹೊಸ ಕರೊನಾ ವೈರಸ್​ ರೂಪಾಂತರಿ ಹುಟ್ಟಿದೆ. ಅದಕ್ಕಾಗಿ ಭಾರತ-ಸಿಂಗೂಪೂರ್​ಗಳ ನಡುವೆ ವಿಮಾನ ಸಂಚಾರ ರದ್ದು ಮಾಡಬೇಕು’ ಎಂದು ಹೇಳಿದ ಟ್ವೀಟ್​ನ ಬಗ್ಗೆ ಸಿಂಗಾಪೂರ್​ ಭಾರೀ ಅಸಮಾಧಾನ ವ್ಯಕ್ತಪಡಿಸಿದೆ. ಇಂದು ಸಿಂಗಾಪೂರ್​ನಲ್ಲಿರುವ ಭಾರತದ ಹೈಕಮಿಷನರ್​ಅನ್ನು ಕರೆಸಿ ಈ ಬಗ್ಗೆ ತೀವ್ರ ಆಕ್ಷೇಪ ಸೂಚಿಸಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ತಿಳಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಬಾಗ್ಚಿ, ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತದ ಹೈಕಮಿಷನರ್​, ಕೇಜ್ರಿವಾಲ್​ ಅವರಿಗೆ ಕರೊನಾ ರೂಪಾಂತರಿಗಳ ಬಗ್ಗೆ ಅಥವಾ ನಾಗರಿಕ ವಿಮಾನ ಸಂಚಾರದ ಬಗ್ಗೆ ಮಾತನಾಡಲು ಅರ್ಹತೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿರುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ, ವಿದೇಶಾಂಗ ಸಚಿವ ಎಸ್​ ಜೈಶಂಕರ್​ ಅವರು ಕೂಡ “ದೆಹಲಿ ಸಿಎಂ ಕೇಜ್ರಿವಾಲ್ ಅವರು ಭಾರತದ ಪರವಾಗಿ ಮಾತನಾಡುತ್ತಿಲ್ಲ” ಎಂದು ಟ್ವೀಟ್​ ಮಾಡಿ ಉಭಯ ರಾಷ್ಟ್ರಗಳ ನಡುವಣ ಸಂಬಂಧಗಳಿಗೆ ಧಕ್ಕೆಯಾಗದಂತೆ ನೋಡಿಕೊಂಡಿದ್ದಾರೆ.

    ಸಚಿವ ಜೈಶಂಕರ್​ ಅವರು, “ಸಿಂಗಾಪೂರ್ ಮತ್ತು ಭಾರತ ಕರೊನಾ ವಿರುದ್ಧದ ಹೋರಾಟದಲ್ಲಿ ಜೋಡಿದಾರರು. ಭಾರತಕ್ಕೆ ಲಾಜಿಸ್ಟಿಕ್ಸ್​ ಹಬ್​ ಆಗಿ ಮತ್ತು ಆಕ್ಸಿಜನ್ ಪೂರೈಕೆದಾರನಾಗಿ ಸಿಂಗಾಪೂರ್ ವಹಿಸಿರುವ ಪಾತ್ರವನ್ನು ನಾವು ಪ್ರಶಂಸಿಸುತ್ತೇವೆ. ಮಿಲಿಟರಿ ಏರ್​ಕ್ರಾಫ್ಟ್​ಅನ್ನು ನಮ್ಮ ಸಹಾಯಕ್ಕಾಗಿ ಬಳಸುತ್ತಿರುವ ಸಿಂಗಾಪೂರ್​ನ ಹೆಜ್ಜೆಯು ನಮ್ಮ ವಿಶಿಷ್ಟವಾದ ಸಂಬಂಧದ ಬಗ್ಗೆ ಹೇಳುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಕೈ ಕತ್ತರಿಸಿ ಟ್ಯಾಬ್ಲೆಟ್, ಹಣ ಕಸಿದುಹೋದ ದುಷ್ಕರ್ಮಿಗಳು

    ಜೊತೆಗೆ, “ಆದಾಗ್ಯೂ ಈ ಬಗ್ಗೆ ಸರಿಯಾಗಿ ತಿಳಿದಿರಬೇಕಾದವರಿಂದ ಬರುವ ಬೇಜವಾಬ್ದಾರಿಯುತ ಹೇಳಿಕೆಗಳು ನಮ್ಮ ದೀರ್ಘಕಾಲೀನ ಸಂಬಂಧವನ್ನು ಹಾಳು ಮಾಡಬಲ್ಲದು. ಅದಕ್ಕಾಗಿ, ದೆಹಲಿ ಸಿಎಂ ಭಾರತದ ಪರವಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಲಿಚ್ಛಿಸುತ್ತೇನೆ” ಎಂದೂ ಬರೆದಿದ್ದಾರೆ.

    ಇದಕ್ಕೆ ಸಿಂಗಾಪೂರ್ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಅವರು “ಥ್ಯಾಂಕ್ಸ್​” ಹೇಳಿದ್ದು, “ನಮ್ಮ ನಮ್ಮ ದೇಶಗಳಲ್ಲಿರುವ ಸನ್ನಿವೇಶಗಳನ್ನು ಪರಿಹರಿಸಿಕೊಂಡು ಒಬ್ಬರಿಗೊಬ್ಬರು ಸಹಾಯ ಮಾಡುವತ್ತ ಗಮನ ಹರಿಸೋಣ. ಪ್ರತಿಯೊಬ್ಬರೂ ಸುರಕ್ಷಿತವಾಗುವವರೆಗೆ ಯಾರೂ ಸುರಕ್ಷಿತರಲ್ಲ” ಎಂದು ಟ್ವೀಟ್​ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್)

    VIDEO | ಸಂಗೀತ ನುಡಿಸುವ ಘೇಂಡಾಮೃಗ ನೋಡಿದ್ದೀರಾ ? ಇದೋ ಇಲ್ಲಿದೆ…

    ಭಾರತ ಮೂಲದ ವಿಜ್ಞಾನಿಗೆ ಮಿಲೇನಿಯಮ್ ಟೆಕ್ನಾಲಜಿ ಬಹುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts