More

    ದಲಿತರ ಪರ ಎಂದುಕೊಳ್ಳುವ ನೈತಿಕತೆ ಕಾಂಗ್ರೆಸ್‌ಗಿಲ್ಲ: ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ

    ಆನೇಕಲ್: ಆನೇಕಲ್ ಪಟ್ಟಣದ ಗಾಂಧಿ ವೃತ್ತದಲ್ಲಿ ಸೋಮವಾರ ಸಂಜೆ ಆಯೋಜಿಸಲಾಗಿದ್ದ ಪೌರತ್ವ ಕಾಯ್ದೆ ಜನಜಾಗೃತಿ ಸಭೆ ಹಾಗೂ ಪಂಜಿನ ಮೆರವಣಿಗೆಗೆ ಸಾವಿರಾರು ಜನ ಸಾಕ್ಷಿಯಾದರು.

    ದೇಶಕ್ಕೆ ಒಳ್ಳೆಯದಾಗುವುದಾದರೆ ನಾವು ಬೆಂಬಲ ಕೊಡುತ್ತೇವೆ ಎನ್ನುವ ಮನೋಭಾವ ಬೇಕು. ವಿಷಯ ತಿಳಿದುಕೊಂಡು ಅದನ್ನು ಪಕ್ಕದವರಿಗೆ ತಿಳಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

    ಇಂದಿರಾಗಾಂಧಿ ಭಾರತಕ್ಕೆ ಸ್ವಾತಂತ್ರ್ಯ ತಂದಿದ್ದಾರೆ ಎಂದರೆ ಹೌದು ಹುಲಿಯಾ ಎನ್ನುವ ವ್ಯಕ್ತಿಗಳು ನಾವಲ್ಲ. ಸ್ವಾತಂತ್ರ್ಯ ಬಂದ ಸಮಯದಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆಯಿತು. ಅಂಬೇಡ್ಕರ್ ಅವರು ವಿಭಜನೆಗೆ ಮುನ್ನವೇ ಈ ಬಗ್ಗೆ ಪುಸ್ತಕ ಬರೆದಿದ್ದಾರೆ. ಅಂಬೇಡ್ಕರ್ ಅವರು ಬದುಕಿದ್ದರೆ ಇಂದೂ ಕಾಂಗ್ರೆಸ್‌ನವರು ವಿರೋಧಿಸುತ್ತಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಕಾಂಗ್ರೆಸ್‌ನವರು ಜಾತ್ಯತೀತರು ಎಂದು ಕರೆದುಕೊಳ್ಳಲು ಅರ್ಹರಲ್ಲ ಎಂದರು.

    ಪಾಕಿಸ್ತಾನದಲ್ಲಿ ಸಾವಿರಾರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಾಗ ನಿಮ್ಮ ಜಾತ್ಯತೀತತೆ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.

    ನಾವು ದಲಿತರ ಪರ ಎಂದು ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸ್‌ನವರಿಗೆ ಇಲ್ಲ. ಮಹಾತ್ಮಗಾಂಧಿ, ಅಂಬೇಡ್ಕರ್, ಶ್ಯಾಮ್ ಪ್ರಕಾಶ್ ಮುಖರ್ಜಿ, ಮನಮೋಹನ್ ಸಿಂಗ್ ಕಾಯ್ದೆಗೆ ಬೆಂಬಲ ನೀಡಿದ್ದರು. ಆದರೆ ಕಾಂಗ್ರೆಸ್‌ನವರು ಇದನ್ನು ವಿರೋಧಿಸುತ್ತಿದ್ದಾರೆ. ಬಿಜೆಪಿಯವರು ಮಾಡಿದರೆ ಅನಾಚಾರ, ಕಾಂಗ್ರೆಸ್‌ನವರು ಮಾಡಿದರೆ ಜಾತ್ಯಾತೀತತೆ, ಇದು ಯಾವ ನ್ಯಾಯ ಸ್ವಾಮಿ ಎಂದು ಪ್ರಶ್ನಿಸಿದರು.

    ಇದು ಹಳೇ ಭಾರತ ಅಲ್ಲ, ಇದು ಹೊಸ ಭಾರತ. ಬಂಡಲ್ ರಾಜಕಾರಣ ಮಾಡಿದರೆ ಕಣ್ಣುಮುಚ್ಚಿ ಕುಳಿತುಕೊಳ್ಳುವವರು ಯಾರೂ ಇಲ್ಲ. ನಕಲಿ ರಾಜಕಾರಣ ಮಾಡಿ, ಸುಳ್ಳು ಹೇಳಿ ಮುಸ್ಲಿಮರನ್ನು ದಾರಿತಪ್ಪಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆನೇಕಲ್ ಮಂಡಲ ಅಧ್ಯಕ್ಷ ಕೆ.ವಿ.ಶಿವಪ್ಪ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಯಂಗಾರೆಡ್ಡಿ, ಟೌನ್ ಅಧ್ಯಕ್ಷ ಜಗನ್ನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ.ರಾಮಚಂದ್ರ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಬಳ್ಳೂರು ವಸಂತ, ಪುರಸಭಾ ಸದಸ್ಯರಾದ ಸುರೇಶ್, ಶ್ರೀಕಾಂತ್, ಯುವ ಮುಖಂಡರಾದ ಕುಮಾರ್, ಭರತ್, ಪುನೀತ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts