More

    ಚುನಾವಣೆಗಾಗಿ ಮಹಾರಾಣಿ ಕಾಲೇಜು ವಶ: ವಿದ್ಯಾರ್ಥಿನಿಯರ ಕಲಿಕೆ ಡೋಲಾಯಮಾನ

    ಮಂಜುನಾಥ ತಿಮ್ಮಯ್ಯ ಮೈಸೂರು

    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕಾಗಿ ಚುನಾವಣಾ ಆಯೋಗ ನಗರದ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜನ್ನು ತನ್ನ ಸುಪರ್ದಿಗೆ ಪಡೆದಿದೆ. ಇದು ಅಲ್ಲಿನ 3,900 ವಿದ್ಯಾರ್ಥಿನಿಯರ ಶೈಕ್ಷಣಿಕ ಚಟುವಟಿಕೆಗೆ ತೊಡಕಾಗಿದೆ.

    ಚುನಾವಣಾ ಆಯೋಗದಿಂದ ಕಾಲೇಜು ಕಟ್ಟಡವನ್ನು ಏ.25ರಿಂದಲೇ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಮತ ಎಣಿಕೆ ಕೇಂದ್ರವಾಗಿ ಪರಿವರ್ತನೆ ಮಾಡಲಾಗಿದೆ. ಇಲ್ಲೇ ಭದ್ರತಾ ಕೊಠಡಿ(ಸ್ಟ್ರಾಂಗ್ ರೂಂ)ಯನ್ನೂ ನಿರ್ಮಿಸಲಾಗಿದೆ. ಏ.26ರಂದು ಮತದಾನ ನಡೆದ ಕ್ಷೇತ್ರದ ಮತಯಂತ್ರಗಳು ಈಗಾಗಲೇ ಭದ್ರತಾ ಕೊಠಡಿಗಳನ್ನು ಸೇರಿವೆ. ಮತ ಎಣಿಕೆ ಜೂ.4ಕ್ಕೆ ಮುಗಿಯಲಿದ್ದು, ಅಲ್ಲಿಯುವರೆಗೂ ವಿದ್ಯಾರ್ಥಿನಿಯರು ಕಾಲೇಜು ಆವರಣ ಪ್ರವೇಶಿಸುವಂತಿಲ್ಲ. ಬರೋಬ್ಬರಿ 45 ದಿನಗಳ ಕಾಲ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

    ಕೋವಿಡ್ ನಂತರ ಪದವಿ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿ ಏರುಪೇರಾಗಿ ರಜೆಯ ಅವಧಿ ಆಗಸ್ಟ್, ಸೆಪ್ಟೆಂಬರ್‌ಗೆ ಹೋಗಿದೆ. ಎರಡು, ನಾಲ್ಕು ಹಾಗೂ ಆರನೇ ಸೆಮಿಸ್ಟರ್ ತರಗತಿಗಳು ಏ.2ನೇ ವಾರದಿಂದ ಆರಂಭವಾಗಿದ್ದವು. ತರಗತಿಗಳು ಆರಂಭವಾದ ಕೆಲ ದಿನಗಳಲ್ಲೇ ಈ ಕಾಲೇಜು ಕಟ್ಟಡವನ್ನು ಚುನಾವಣಾ ಆಯೋಗವು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಇದು ವಿದ್ಯಾರ್ಥಿನಿಯರ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿದೆ.


    ಪಾಠ-ಪ್ರವಚನಕ್ಕೆ ಅಡ್ಡಿ:


    ಎಣಿಕೆ ಕೇಂದ್ರಕ್ಕೆ ಕಾಲೇಜು ಕಟ್ಟಡ ಬಿಟ್ಟುಕೊಟ್ಟಿರುವುದರಿಂದ ಪಾಠ-ಪ್ರವಚನಕ್ಕೆ ಅಡ್ಡಿಯಾಗಿದೆ. ವಿದ್ಯಾರ್ಥಿಗಳು ಒಂದೆಡೆ ಸೇರಲು ಆಗುತ್ತಿಲ್ಲ. ಅದಕ್ಕಾಗಿ ಭೌತಿಕ ತರಗತಿ ಸ್ಥಗಿತಗೊಳಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ಆಡಳಿತ ಮಂಡಳಿ, ಪರ್ಯಾಯ ಉಪಕ್ರಮ ತೆಗೆದುಕೊಂಡು ಸರಿಪಡಿಸಿಕೊಳ್ಳಲು ಪ್ರಯತ್ನಿಸಿದೆ. ಅದಕ್ಕಾಗಿ ಇ-ಕ್ಲಾಸ್‌ನ ಮೊರೆ ಹೋಗಿದೆ. ಇದು ಇಲ್ಲಿಯ ವಿದ್ಯಾರ್ಥಿನಿಯರ ಪಾಲಿಗೆ ಕರೊನಾ ಕಾಲದ ಆನ್‌ಲೈನ್ ಕ್ಲಾಸ್ ಸಂಕಷ್ಟವನ್ನು ಮತ್ತೆ ನೆನಪಿಸುತ್ತಿದೆ.

    ಚುನಾವಣೆಗಾಗಿ ಮಹಾರಾಣಿ ಕಾಲೇಜು ವಶ: ವಿದ್ಯಾರ್ಥಿನಿಯರ ಕಲಿಕೆ ಡೋಲಾಯಮಾನ


    ಆನ್‌ಲೈನ್ ಕ್ಲಾಸ್ ಮೊರೆ:


    ಕಾಲೇಜು ಕಟ್ಟಡವನ್ನು ವಶಪಡಿಸಿಕೊಳ್ಳುವ ಮುನ್ಸೂಚನೆ ಅರಿತು ಮೊದಲೇ ಶನಿವಾರ, ಭಾನುವಾರ ಸಹ ತರಗತಿ ಮಾಡಲಾಗಿದೆ. ಪಠ್ಯಕ್ರಮ ಪೂರ್ಣಗೊಳಿಸಲು ಕಸರತ್ತು ನಡೆಸಲಾಗಿದೆ. ಕಾಲೇಜಿನ ಪಕ್ಕದಲ್ಲೇ ಇರುವ ಹಾಸ್ಟೆಲ್ ಕಟ್ಟಡವನ್ನು ತಾತ್ಕಾಲಿಕ ಆಡಳಿತ ಕಚೇರಿಯಾಗಿ ಪರಿವರ್ತಿಸಲಾಗಿದೆ. ಆನ್‌ಲೈನ್ ಕ್ಲಾಸ್‌ಗಳನ್ನು ಇಲ್ಲಿಂದಲೇ ಬೋಧಕರು ನಿರ್ವಹಣೆ ಮಾಡುತ್ತಿದ್ದಾರೆ. ಪ್ರವೇಶಾತಿ ಪ್ರಕ್ರಿಯೆಯನ್ನೂ ಇಲ್ಲಿಂದಲೇ ನಿರ್ವಹಿಸಲಾಗುತ್ತಿದೆ.

    ಇ-ಕ್ಲಾಸ್ ತಲೆಗೆ ಹೋಗುತ್ತಿಲ್ಲ:


    ಆನ್‌ಲೈನ್ ಕ್ಲಾಸ್‌ಗಳು ಆಫ್‌ಲೈನ್ ತರಗತಿಯಷ್ಟು ಪರಿಣಾಮಕಾರಿಯಲ್ಲ. ಕೊಠಡಿಯಲ್ಲಿ ಕುಳಿತು ನೇರವಾಗಿ ಉಪನ್ಯಾಸಕರ ಬೋಧನೆ ಕೇಳಿದಾಗ ವಿಷಯ ಸುಲಭವಾಗಿ ಅರ್ಥವಾಗುತ್ತದೆ. ಆದರೆ ಆನ್‌ಲೈನ್ ಕ್ಲಾಸ್‌ನಲ್ಲಿ ಇದು ಆಗಲ್ಲ. ವಿಷಯವೂ ತಲೆಯೊಳಗೆ ಹೋಗುತ್ತಿಲ್ಲ ಎಂಬುದು ವಿದ್ಯಾರ್ಥಿನಿಯರ ಅಳಲು.


    ಹತ್ತಾರು ಸಮಸ್ಯೆ:


    ಈ ಕಾಲೇಜಿನಲ್ಲಿ ಅಭ್ಯಾಸ ಮಾಡುವವರ ಪೈಕಿ ಗ್ರಾಮಾಂತರ ಪ್ರದೇಶದವರೇ ಹೆಚ್ಚು. ಅವರೆಲ್ಲ ಆನ್‌ಲೈನ್ ಕ್ಲಾಸ್‌ಗೆ ಒಗ್ಗಿಕೊಳ್ಳುತ್ತಿಲ್ಲ. ಹಳ್ಳಿಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಹೆಚ್ಚಿದೆ. ಇ-ಕ್ಲಾಸ್‌ಗಳಿಗೂ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಜತೆಗೆ ಕೆಲ ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳೂ ಇವರನ್ನು ಬಾಧಿಸುತ್ತಿವೆ. ಸಣ್ಣ ಮನೆಯಲ್ಲಿ ಹತ್ತಾರು ಜನರ ಮುಂದೆ ತರಗತಿ ಆಲಿಸಲು ಆಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿನಿಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರಾಧ್ಯಾಪಕರೊಬ್ಬರು ವಿಜಯವಾಣಿಗೆ ತಿಳಿಸಿದರು.


    ಕಲಿಕೆ ಮೇಲೆ ದುಷ್ಪರಿಣಾಮ:


    ಒಂದು ಸೆಮಿಸ್ಟರ್ ಅವಧಿ ನಾಲ್ಕು ತಿಂಗಳು. ಅದರಲ್ಲಿ ಪಾಠ ನಡೆಯುವುದು 3 ತಿಂಗಳು ಮಾತ್ರ. 2 ತಿಂಗಳು ಆನ್‌ಲೈನ್ ಪಾಠ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ನೆಟ್‌ವರ್ಕ್ ಇಲ್ಲ. ಇದು ಉನ್ನತ ಶಿಕ್ಷಣ ಕಲಿಕೆಯ ಮೇಲೆ ದುಷ್ಪರಿಣಾಮ ಬೀರಿದೆ ಎಂದು ವಿದ್ಯಾರ್ಥಿನಿ ಪುಷ್ಪಲತಾ ಸಮಸ್ಯೆ ವಿವರಿಸಿದರು.
    ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಲೇಜು ಕಟ್ಟಡ ವಶ ಪಡಿಸಿಕೊಳ್ಳುವ ಕುರಿತು ಮೊದಲೇ ಮುನ್ಸೂಚನೆ ಅರಿತು ಶನಿವಾರ, ಭಾನುವಾರ ತರಗತಿ ನಡೆಸಲಾಗಿತ್ತು. ಸದ್ಯ ಆನ್‌ಲೈನ್ ಕ್ಲಾಸ್ ಮಾಡಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಕಾಲೇಜಿನ ಪ್ರಾಂಶುಪಾಲ ಸೋಮಣ್ಣ ಮಾಹಿತಿ ನೀಡಿದ್ದಾರೆ.

    ಕೋವಿಡ್ ನಂತರ ಶೈಕ್ಷಣಿಕ ವೇಳಾಪಟ್ಟಿಯಲ್ಲಿನ ಏರುಪೇರಿನಿಂದ ಸಂಕಷ್ಟ ಅನುಭವಿಸುತ್ತಾ ಬಂದಿದ್ದ ಪದವಿ ವಿದ್ಯಾರ್ಥಿಗಳು ಚುನಾವಣಾ ಕಾರಣಕ್ಕೆ ಸಮರ್ಪಕವಾಗಿ ತರಗತಿಗಳು ನಡೆಯದೆ ಈಗ ಪರಿತಪಿಸುವಂತಾಗಿದೆ.

    ಪರೀಕ್ಷೆಯ ಸಂಕಷ್ಟ


    ಇದೇ ಹೊತ್ತಿನಲ್ಲಿ ಮೇ 1 ರಿಂದ ಪರೀಕ್ಷೆ ನಿಗದಿಯಾಗಿದೆ. ಇದು ಇನ್ನಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು ಸಮಸ್ಯೆ ವಿವರಿಸಲಾಗಿದೆ. ಕಾಲೇಜು ಕಟ್ಟಡವನ್ನು ವಶಪಡಿಸಿಕೊಂಡಿರುವುದರಿಂದ ಬೇರೆಡೆ ಪರೀಕ್ಷೆ ನಡೆಸುವುದು ಕಷ್ಟಕರವಾಗಲಿದೆ. ಆದ್ದರಿಂದ ಜೂ.10ರ ಬಳಿಕ ಪರೀಕ್ಷೆ ನಡೆಸಲು ಕೋರಲಾಗಿದೆ.

    ಮತ ಎಣಿಕೆ ಬಳಿಕ ಅವ್ಯವಸ್ಥೆ ತಾಂಡವ


    ಪಡುವಾರಹಳ್ಳಿಯಲ್ಲಿ ಮಹಾರಾಣಿ ವಾಣಿಜ್ಯ ಕಾಲೇಜಿನ ಕಟ್ಟಡ ನಿರ್ಮಾಣವಾದ ಬಳಿಕ ಅನೇಕ ಚುನಾವಣೆಗಳಿಗೆ ಇದುವೇ ಮತ ಎಣಿಕೆ ಕೇಂದ್ರವಾಗಿದೆ. ಕಳೆದ ಲೋಕಸಭಾ, ವಿಧಾನಸಭೆ, ವಿಧಾನಪರಿಷತ್ ಚುನಾವಣೆಗಳ ಮತ ಎಣಿಕೆ ಸಹ ಇಲ್ಲೇ ನಡೆದಿವೆ. ಈ ಪ್ರಕ್ರಿಯೆ ಬಳಿಕ ಇಡೀ ವ್ಯವಸ್ಥೆ ಹದಗೆಡಿಸಲಾಗುತ್ತಿದೆ. ಶೌಚಗೃಹ, ಗೋಡೆ, ಕಟ್ಟಡಕ್ಕೆ ಹಾನಿ, ಅನೈರ್ಮಲ್ಯ…. ಹೀಗೆ ವಿವಿಧ ವ್ಯವಸ್ಥೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ.

    ದಾಖಲಾತಿ ಶುರು:


    ಸ್ನಾತಕ, ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿ ಶುರುವಾಗಿದೆ. ಕಾಲೇಜಿನ ಕಟ್ಟಡದ ಪಕ್ಕದಲ್ಲಿರುವ ಹಾಸ್ಟೆಲ್‌ನಲ್ಲೇ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಇದು ಬಹಳಷ್ಟು ವಿದ್ಯಾರ್ಥಿನಿಯರ ಅರಿವಿಗೆ ಬರುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts