More

    ಪೊಲೀಸರು ನಡೆಸುವ ದಲಿತರ ಸಭೆ ಕೇವಲ ವರದಿಗಾಗಿ

    ಆಲ್ದೂರು: ದಲಿತರ ಮೇಲೆ ದೌರ್ಜನ್ಯ ನಡೆದರೆ ಡಿಸಿ, ಎಸ್ಪಿ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಆದೇಶಿಸಿದ್ದಾರೆ. ಆದರೆ ದಲಿತರ ಮೇಲಿನ ದೌರ್ಜನ್ಯ ನಿಲ್ಲುತ್ತಿಲ್ಲ ಎಂದು ಅಂಬೇಡ್ಕರ್ ಹೋರಾಟ ವೇದಿಕೆ ಗೌರವ ಅಧ್ಯಕ್ಷ ಯಲಗುಡಿಗೆ ಹೊನ್ನಪ್ಪ ದೂರಿದರು.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕ ರಾಜಶೇಖರ್ ದಲಿತ ಮುಖಂಡರ ಸಭೆ ನಡೆಸಿ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿ, ಸರ್ಕಾರಕ್ಕೆ ವರದಿ ನೀಡುವುದಕ್ಕಾಗಿ ಸಭೆ ನಡೆಸುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ನಿಷೇಧಿತ ಸ್ಥಳದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದರ ಮಾಹಿತಿಯನ್ನು ಠಾಣೆಗೆ ಹಾಗೂ ಗ್ರಾಪಂಗೆ ನೀಡಿದರೆ ಒಬ್ಬರ ಕಡೆ ಒಬ್ಬರು ಬೊಟ್ಟು ಮಾಡುತ್ತಾರೆ. ಇದನ್ನು ಬಿಟ್ಟು ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ಗ್ರಾಪಂ ಮಾಜಿ ಸದಸ್ಯ ವಸಂತ್ ಮಾತನಾಡಿ, ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೈಟ್ ಬೀಟ್ ವ್ಯವಸ್ಥೆ ಸರಿಯಿಲ್ಲ. ಪಟ್ಟಣದಲ್ಲಿ ರಾತ್ರಿ ವೇಳೆ ಅಪರಾಧ ಕೃತ್ಯಗಳು ನಡೆಯುತ್ತಿದ್ದು, ನೈಟ್ ಬೀಟ್ ವ್ಯವಸ್ಥೆ ಬಿಗಿಗೊಳಿಸಬೇಕು ಎಂದು ಒತ್ತಾಯಿಸಿದರು.
    ಬಸಗೋಡು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿದ್ದು, ಠಾಣೆಗೆ ಮಾಹಿತಿ ನೀಡಿದರೆ ಇಲಾಖೆಯವರೇ ಮಾಹಿತಿ ಸೋರಿಕೆ ಮಾಡುತ್ತಾರೆ. ಇದರಿಂದಾಗಿ ಇಲಾಖೆ ಮೇಲೆ ವಿಶ್ವಾಸ ಕಡಿಮೆಯಾಗುತ್ತ್ತಿದೆ ಎಂದು ಗ್ರಾಮದ ಡಿಎಸ್‌ಎಸ್ ಮುಖಂಡ ರಮೇಶ್ ದೂರಿದರು.
    ಯಾವುದೇ ಜಾತಿ, ಧರ್ಮದ ಪರವಾಗಿ ಕೆಲಸ ಮಾಡಬೇಡಿ, ಕಾನೂನು ಎಲ್ಲರಿಗೂ ಒಂದೇ. ಎಲ್ಲ ಜಾತಿ, ಧರ್ಮದವರನ್ನು ವಿಶ್ವಾಸಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಜಿಲ್ಲಾ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಸದಸ್ಯ ಲಕ್ಷ್ಮಣ್ ಹೇಳಿದರು.
    ವೃತ್ತ ನಿರೀಕ್ಷಕ ರಾಜಶೇಖರ್ ಮಾತನಾಡಿ, ಠಾಣೆಗೆ ನಾನೇ ಸುಪ್ರೀಮ್ ಅಲ್ಲ. ಕಾನೂನು ಅಡಿಯಲ್ಲೇ ಕೆಲಸ ಮಾಡಬೇಕು. ಸಮರ್ಪಕವಾಗಿ ಕೆಲಸ ಮಾಡಲು ಎಲ್ಲರ ಸಹಕಾರವೂ ಮುಖ್ಯ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ನೀಡಿರುವುದರಿಂದ ಕುಂದು ಕೊರತೆ ಸಭೆಗಳನ್ನು ನಡೆಸುತ್ತಿದ್ದೇವೆ. ಪೊಲೀಸ್ ಇಲಾಖೆಯನ್ನು ದೂರುವುದನ್ನು ಬಿಟ್ಟು ಪರಸ್ಪರ ಕೆಲ ಮಾಡೋಟ ಎಂದರು.
    ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜ್, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಗಿರೀಶ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್, ತುಡಕೂರು ಯೋಗೇಶ್, ಸುಂದರ್, ಪುಟ್ಟರಾಜ್, ಸತ್ತಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ದೊಡ್ಡಮಾಗರವಳ್ಳಿ ಗ್ರಾಪಂ ಸದಸ್ಯರಾದ ನಾಗೇಶ್, ಲೋಕೇಶ್ ಸೇರಿದಂತೆ ದಲಿತ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts