More

    ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ ಬಲ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಪಂ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಮೇಲುಗೈ ಸಾಧಿಸಿದೆ.
    ಸುಳ್ಯ, ಬೆಳ್ತಂಗಡಿ, ಮೂಡುಬಿದಿರೆ, ಮಂಗಳೂರು ಉತ್ತರ, ಸುಳ್ಯ, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಂಟ್ವಾಳ, ಮಂಗಳೂರು ಕ್ಷೇತ್ರದ ಕೆಲವು ಪಂಚಾಯಿತಿಗಳು ಕಾಂಗ್ರೆಸ್ ಪಾಲಾಗಿದೆ. ಎಸ್‌ಡಿಪಿಐ 150ಕ್ಕೂ ಅಧಿಕ ಸ್ಥಾನ ಗೆಲ್ಲುವ ಮೂಲಕ ಗಮನ ಸೆಳೆದಿದೆ.
    ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಗಳ ಗೆಲುವಿನ ಬಳಿಕ ಈಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ಸರಣಿ ಮುಂದುವರಿದಿದೆ. ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಹೊಂದಿದ್ದ ಕಾಂಗ್ರೆಸ್‌ಗೆ ಮತ್ತೆ ಸೋಲಿನ ಆಘಾತ ಎದುರಾಗಿದೆ.

    ಕಮಲ ಜಯಭೇರಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ 9 ಗ್ರಾಪಂ ಫಲಿತಾಂಶ ಲಭ್ಯವಾಗಿದ್ದು, ಎಲ್ಲವೂ ಬಿಜೆಪಿ ಪಾಲಾಗಿದೆ. ಈ ಪೈಕಿ ಸುಲ್ಕೇರಿ, ಪಡಂಗಡಿ, ಮಚ್ಚಿನ, ಶಿಶಿಲ, ಶಿಬಾಜೆ, ಅರಸಿನಮಕ್ಕಿ ಗ್ರಾಪಂನಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಮೂಡುಬಿದಿರೆ ಕ್ಷೇತ್ರದ 19 ಗ್ರಾಪಂ ಫಲಿತಾಂಶ ಲಭ್ಯವಾಗಿದ್ದು, 11 ಬಿಜೆಪಿ ಬೆಂಬಲಿತರ ಪಾಲಾಗಿದೆ. ಹಳೆಯಂಗಡಿ ಗ್ರಾಪಂನಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲವಿದ್ದರೆ, 4 ಗ್ರಾಪಂನಲ್ಲಿ ಅತಂತ್ರ ಸ್ಥಿತಿ ಇದೆ.
    *ಕಾಂಗ್ರೆಸ್ ಚೇತರಿಕೆ: ಬಂಟ್ವಾಳದಲ್ಲಿ ಕಾಂಗ್ರೆಸ್ ಸುಪರ್ದಿಯಲ್ಲಿದ್ದ ಕೆಲವು ಪಂಚಾಯಿತಿಗಳು ಬಿಜೆಪಿ ಪಾಲಾಗಿವೆ. 17 ಗ್ರಾಪಂ ಫಲಿತಾಂಶ ಲಭ್ಯವಾಗಿದ್ದು 9 ಗ್ರಾಪಂ ಬಿಜೆಪಿ ಪಾಲಾಗಿದೆ. ಕಾಂಗ್ರೆಸ್-5, ಸಮಬಲ-2 ಹಾಗೂ ಒಂದು ಪಂಚಾಯಿತಿಯಲ್ಲಿ ಅತಂತ್ರ ಸ್ಥಿತಿ ಇದೆ. ಮಂಗಳೂರು ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ಮಂದ ಗತಿಯಲ್ಲಿ ಸಾಗಿದ್ದು, ಫಲಿತಾಂಶ ಲಭ್ಯವಾದ 5 ಗ್ರಾಪಂಗಳ ಪೈಕಿ 4ರಲ್ಲಿ ಬಿಜೆಪಿ ಬಹುಮತ ಸಾಧಿಸಿದೆ. ಒಂದು ಪಂಚಾಯಿತಿಯಲ್ಲಿ ಅತಂತ್ರ ಸ್ಥಿತಿ ಇದೆ. ಸಜಿಪಪಡು ಕ್ಷೇತ್ರದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ.

    ಮಂಗ್ಳೂರು ನಗರ, ಸುಳ್ಯ, ಪುತ್ತೂರು ಭರ್ಜರಿ
    ಮಂಗಳೂರು ನಗರ ಉತ್ತರ, ಸುಳ್ಯ ಮತ್ತು ಪುತ್ತೂರಿನಲ್ಲಿ ಬಿಜೆಪಿ ಭರ್ಜರಿ ಬೇಟೆಯಾಡಿದೆ. ಫಲಿತಾಂಶ ಲಭ್ಯವಾದ ಸುಳ್ಯದ 13 ಗ್ರಾಪಂಗಳ ಪೈಕಿ ಬಿಜೆಪಿ 12ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಂದು ಪಂಚಾಯಿತಿ ಮಾತ್ರ ಕಾಂಗ್ರೆಸ್ ಪಾಲಾಗಿದೆ. ಮುರುಳ್ಯ, ಆಲಂಕಾರು, ಕಳಂಜ ಪಂಚಾಯಿತಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಮಂಗಳೂರು ನಗರದ ಉತ್ತರದ 5 ಗ್ರಾಪಂ ಬಿಜೆಪಿ ಪಾಲಾಗಿದೆ. ಬಡಗ ಎಡಪದವು ಪಂಚಾಯಿತಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಪುತ್ತೂರಿನ 8 ಪಂಚಾಯಿತಿಗಳ ಫಲಿತಾಂಶ ಲಭ್ಯ ವಾಗಿದ್ದು, 7 ಬಿಜೆಪಿ ಹಾಗೂ ಒಂದು ಕಾಂಗ್ರೆಸ್ ಪಾಲಾಗಿದೆ.

    ಅಸಮಾಧಾನದಿಂದ ಕೊಂಚ ಹಿನ್ನಡೆ
    ರಾಜ್ಯದಲ್ಲಿ ಬಿಜೆಪಿ ಅಧಿಕಾರವಿದ್ದರೂ, ಸುಳ್ಯ ಕ್ಷೇತ್ರದ ಗ್ರಾಮಗಳ ಸಹಿತ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಪಕ್ಷದೊಳಗಿನ ಭಿನ್ನಮತ, ಗುಂಪುಗಾರಿಕೆಯಿಂದ ಬಿಜೆಪಿಗೆ ಕೊಂಚ ಹಿನ್ನಡೆಯಾಗಿದೆ. ಅಲ್ಪಸಂಖ್ಯಾತ ಬಾಹುಳ್ಯದ ವಾರ್ಡ್‌ಗಳಲ್ಲಿ ಎಸ್‌ಡಿಪಿಐ ಭರ್ಜರಿ ಗೆಲುವು ಸಾಧಿಸಿದ್ದು ಕಾಂಗ್ರೆಸ್‌ಗೆ ಇನ್ನಷ್ಟು ಮುಳುವಾಗಿದೆ. ಬುಧವಾರ ರಾತ್ರಿವರೆಗೆ ಜಿಲ್ಲೆಯ ಎಲ್ಲ ಪಂಚಾಯಿತಿಗಳ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ. ಲಭ್ಯ ಮಾಹಿತಿ ಪ್ರಕಾರ ಶೇ.60ಕ್ಕೂ ಹೆಚ್ಚು ಪಂಚಾಯಿತಿಗಳು ಬಿಜೆಪಿ ಪಾಲಾಗುವ ಸಾಧ್ಯತೆ ಹೆಚ್ಚಿದೆ.

    ಉಡುಪಿಯಲ್ಲೂ ಬಿಜೆಪಿ ಮುನ್ನಡೆ
    ಉಡುಪಿ: ಜಿಲ್ಲೆಯ 153 ಗ್ರಾಪಂಗಳ 2365 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಸದಸ್ಯರು ಪ್ರಬಲ ಪೈಪೋಟಿ ನೀಡಿದ್ದಾರೆ. ತಡರಾತ್ರಿವರೆಗೂ ಮತ ಎಣಿಕೆ ನಡೆದಿದ್ದು, ರಾತ್ರಿ 9 ಗಂಟೆವರೆಗೆ ಶೇ.70 ರಷ್ಟು ಎಣಿಕೆ ಮುಗಿದಿದೆ.

    ಇದುವರೆಗೆ ಬಿಜೆಪಿ ಬೆಂಬಲಿತ 1075 ಅಭ್ಯರ್ಥಿಗಳು, ಕಾಂಗ್ರೆಸ್ ಬೆಂಬಲಿತ 870 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಸೇರಿದಂತೆ ಇತರರು 205 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಜಿಲ್ಲೆಯ 153 ಗ್ರಾಪಂಗಳ ಪೈಕಿ 120 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗೆಲವು ಸಾಧಿಸಿದ್ದಾರೆ.
    ಕಾರ್ಕಳ 32, ಬೈಂದೂರು 26, ಕುಂದಾಪುರ 28, ಕಾಪು 16 ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಿನ ಸ್ಥಾನಗಳಿಸಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿಗಿಂತ ಈ ಸಲ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಗೆಲುವು ಸಾಧಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯ್ಲಡಿ ಸುರೇಶ್ ನಾಯಕ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    ಗ್ರಾಮಮಟ್ಟದಿಂದ ರಾಷ್ಟ್ರಮಟ್ಟದಿಂದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಜಿಲ್ಲೆಯ ಗ್ರಾಪಂ ಚುನಾವಣೆಯಲ್ಲಿ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಮೂಲಕ ಜನರು ಕಾಂಗ್ರೆಸ್ ಜತೆಗೆ ಇದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಶೇ.50ಕ್ಕೂ ಅಧಿಕ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ಮುಂದಿನ ತಾ.ಪಂ, ಜಿ.ಪಂ ಚುನಾವಣೆ ಕಾಂಗ್ರೆಸ್ ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts