More

    ದ.ಕ ಜಿಲ್ಲೆಗೆ ಕರೊನಾ ವಿನಾಯಿತಿ ಕಷ್ಟ?

    ವೇಣುವಿನೋದ್ ಕೆ.ಎಸ್.ಮಂಗಳೂರು
    ಕರೊನಾ ಲಾಕ್‌ಡೌನ್ ವಿಸ್ತರಣೆಯನ್ನು ಅಧಿಕೃತವಾಗಿ ಘೋಷಿಸಿದ ಪ್ರಧಾನಿ ಮೋದಿ, ಅದರ ಜೊತೆಯಲ್ಲೇ ಕರೊನಾ ನಿಯಂತ್ರಣ ಸಾಧಿಸಿದ ಜಿಲ್ಲೆಗಳಿಗೆ ಕೆಲವು ವಿನಾಯಿತಿಯನ್ನೂ ಪ್ರಕಟಿಸಿದ್ದಾರೆ. ಅದು ದ.ಕ ಜಿಲ್ಲೆಗೆ ಲಾಗೂ ಆಗಲಿದೆಯೇ ಇಲ್ಲವೇ? ಇದು ಸದ್ಯ ಜಿಲ್ಲೆಯ ಜನತೆಯನ್ನು ಕಾಡುವ ಪ್ರಶ್ನೆ.

    ಒಂದು ಹಂತದಲ್ಲಿ ಕರೊನಾ ಮಟ್ಟಿಗೆ ಹಾಟ್‌ಸ್ಪಾಟ್ ಆಗಿದ್ದ ಜಿಲ್ಲೆ ದ.ಕ. 12 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. 6000ದಷ್ಟು ಮಂದಿ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು. ತಬ್ಲಿಘಿ ಜಮಾತಿಗೆ ಹೋಗಿ ಬಂದ 45 ಸದಸ್ಯರಿದ್ದರು. ಆದರೆ, ಸದ್ಯ ಎಲ್ಲ ಕರೊನಾ ಕಂಟಕಗಳೂ ಜಿಲ್ಲೆಯ ಮಟ್ಟಿಗೆ ದೂರವಾಗಿವೆ. ತಬ್ಲಿಘಿ ಸದಸ್ಯರಲ್ಲಿ ಇಬ್ಬರು ಪಾಸಿಟಿವ್ ಆಗಿದ್ದು ಬಿಟ್ಟರೆ ಉಳಿದವರೆಲ್ಲರೂ ಪರೀಕ್ಷೆಯಲ್ಲಿ ನೆಗೆಟಿವ್ ಆಗಿದ್ದಾರೆ. 12 ಪಾಸಿಟಿವ್‌ನಲ್ಲಿ 9 ಮಂದಿ ಈಗಾಗಲೇ ಮನೆಗೆ ತೆರಳಿದ್ದಾಗಿದೆ. ಅದರಲ್ಲಿ 10 ತಿಂಗಳ ಮಗು ಹಾಗೂ 70ರ ವೃದ್ಧೆಯೂ ಸೇರಿದ್ದಾರೆ.
    ಇನ್ನೂ ಐದು ದಿನಗಳ ಕಾಲ ಯಾವುದೇ ಕರೊನಾ ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ಬಾರದಿರಲಿ ಎಂದು ಜನತೆ ಪ್ರಾರ್ಥಿಸಬೇಕಿದೆ. ಹಾಗಿದ್ದರೆ ಮಾತ್ರವೇ ಪ್ರಧಾನಿಯವರು ಘೋಷಿಸಿರುವ ರಿಯಾಯಿತಿಗಳು ಅನ್ವಯವಾಗಲಿವೆ. ಏ.20ರ ಮೊದಲು ಜಿಲ್ಲೆಯಲ್ಲಿ ಒಂದು ಪಾಸಿಟಿವ್ ಪ್ರಕರಣ ವರದಿಯಾದರೂ ಇದುವರೆಗಿನ ಪ್ರಯತ್ನದ ಫಲ ಸಿಗದೆ, ರಿಯಾಯಿತಿಯ ಪ್ರಯೋಜನ ಸಿಗದು. ಈಗ ಯಾವ ರೀತಿ ಲಾಕ್‌ಡೌನ್ ಇದೆಯೋ ಅದೇ ಸ್ಥಿತಿ ಮೇ.3ರ ವರೆಗೂ ಇರುತ್ತದೆ. ಏ.20ರ ವೇಳೆಗೆ ಜಿಲ್ಲೆ ಕಟ್ಟುನಿಟ್ಟಾಗಿ ಕರೊನಾ ನಿಯಮಾವಳಿ ಪಾಲಿಸಿದರೆ ಮಾತ್ರವೇ ಕೆಲವೊಂದು ಚಟುವಟಿಕೆಗಳಿಗೆ ವಿನಾಯಿತಿ ಪ್ರಕಟಿಸಲಾಗಿದೆ.

    ಸದ್ಯ ದ.ಕ ಹಾಟ್‌ಸ್ಪಾಟ್ ಕ್ಲಸ್ಟರ್
    ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿರುವ ಸುತ್ತೋಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕ್ಲಸ್ಟರ್ ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ. ಅಂದರೆ, ಕೆಲವು ಕಡೆಗಳಲ್ಲಿ ಮಾತ್ರವೇ ಕರೊನಾ ಹಬ್ಬುವ ಸಾಧ್ಯತೆ ಇದೆ ಎನ್ನುವುದು ಇದರ ಅರ್ಥ. ಕಳೆದ 11 ದಿನಗಳಿಂದ ದ.ಕ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. 14 ದಿನ ಯಾವುದೇ ಪಾಸಿಟಿವ್ ಪ್ರಕರಣ ಬಾರದಿದ್ದಲ್ಲಿ ನಮ್ಮ ಜಿಲ್ಲೆ ಈಗಿರುವ ರೆಡ್‌ರೆನ್‌ನಿಂದ ಆರೆಂಜ್ ರೆನ್‌ಗೆ ಹೋಗಲಿದೆ. ಮತ್ತೆ 14 ದಿನವೂ ಇದೇ ಬೆಳವಣಿಗೆಯಾಗಿದ್ದರೆ ಆಗ ಹಸಿರು ರೆನ್‌ಗೆ ಹೋಗಲಿದ್ದು ಸುರಕ್ಷಿತ ಜಿಲ್ಲೆ ಎನ್ನಿಸಿಕೊಳ್ಳಲಿದೆ. ಸುತ್ತೋಲೆಯಲ್ಲಿ ರೋಗ ಸ್ಫೋಟಗೊಳ್ಳಬಲ್ಲ ಹಾಟ್‌ಸ್ಪಾಟ್ ಜಿಲ್ಲೆಗಳನ್ನೂ ಪಟ್ಟಿ ಮಾಡಿದ್ದು, ಅದರಲ್ಲಿ ದಕ್ಷಿಣ ಕನ್ನಡವಿಲ್ಲ.

    ಸುಧಾರಿಸಲಿದೆ ಸ್ಥಿತಿ
    ನಮ್ಮ ಜಿಲ್ಲೆಯಲ್ಲಿ ಹಿಂದೆ ವರದಿಯಾಗಿದ್ದ 12 ಪ್ರಕರಣಗಳಿಂದಾಗಿ ನಾವು ಹಾಟ್‌ಸ್ಪಾಟ್‌ನಲ್ಲಿದ್ದೇವೆ. ಆದರೆ ನಮ್ಮ ಪರಿಸ್ಥಿತಿ ಸುಧಾರಣೆಗೊಂಡಿದೆ, ಇನ್ನೂ ಕೆಲವು ದಿನಗಳಲ್ಲಿ ಯಾವುದೇ ಪ್ರಕರಣ ವರದಿಯಾಗದಿದ್ದರೆ ಈ ಕುರಿತು ಆರೋಗ್ಯ ಸಚಿವಾಲಯ ನಮ್ಮನ್ನು ಸುರಕ್ಷಿತ ಪಟ್ಟಿಗೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

    ಈಗಾಗಲೇ ನಮ್ಮ ಜಿಲ್ಲೆ ರೆಡ್‌ರೆನ್‌ನಲ್ಲಿದೆ, ಪಾಸಿಟಿವ್ ಇರುವ ಎಲ್ಲರೂ ಡಿಸ್‌ಚಾರ್ಜ್ ಆಗಿ ಕ್ವಾರಂಟೈನ್‌ನಲ್ಲಿರುವವರೂ ಅದರಿಂದ ಹೊರಗೆಬರಬೇಕು, ಆದರೂ ಏ.20ರ ನಂತರದ ರಿಯಾಯಿತಿ ಸಿಗುವುದು ಕಷ್ಟಸಾಧ್ಯ.
    -ನಳಿನ್ ಕುಮಾರ್ ಕಟೀಲ್,
    ಸಂಸದರು

    ಈ ಬಗ್ಗೆ ಇನ್ನೂ ಸರಿಯಾದ ಸ್ಪಷ್ಟತೆ ಸಿಕ್ಕಿಲ್ಲ, ಒಂದೆರಡು ದಿನಗಳಲ್ಲಿ ಸರಿಯಾದ ಮಾಹಿತಿ ಸಿಗಬಹುದು.
    -ವಿ.ಪೊನ್ನುರಾಜ್,
    ಕೊವಿಡ್ ವಿಶೇಷ ಅಧಿಕಾರಿ

    11ನೇ ದಿನವೂ ನೆಗೆಟಿವ್
    ಮಂಗಳೂರು: ಸತತ 11ನೇ ದಿನವೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ.
    ಬುಧವಾರ ಒಟ್ಟು 74 ಮಂದಿಯ ತಪಾಸಣೆ ನಡೆಸಲಾಗಿದ್ದು 1,225 ಮಂದಿ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. 4,848 ಮಂದಿ 28 ದಿನಗಳ ಮನೆ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.
    25 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ಬುಧವಾರದ ಎಲ್ಲ 42 ಟೆಸ್ಟ್ ವರದಿಗಳೂ ನೆಗೆಟಿವ್ ಆಗಿವೆ. 22 ಸ್ಯಾಂಪಲ್‌ಗಳನ್ನು ಟೆಸ್ಟ್‌ಗೆ ಕಳುಹಿಸಲಾಗಿದೆ. 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ನಿಗಾ ಇರಿಸಲಾಗುತ್ತಿದೆ. ಬುಧವಾರ ಜಿಲ್ಲೆಯ ಫಿವರ್ ಕ್ಲಿನಿಕ್‌ಗಳಲ್ಲಿ ಒಟ್ಟು 75 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ.

    ಉಡುಪಿಯಲ್ಲಿ 106 ಮಾದರಿ ಸಂಗ್ರಹ
    ಉಡುಪಿ: ಐಸೋಲೇಷನ್ ವಾರ್ಡ್‌ಗೆ ಬುಧವಾರ 8 ಕರೊನಾ ಶಂಕಿತ ರೋಗಿಗಳು ದಾಖಲಾಗಿದ್ದು, ಒಟ್ಟು 44 ಮಂದಿಯ ಮೇಲೆ ನಿಗಾ ಇರಿಸಲಾಗಿದೆ. 2ನೇ ಹಂತದ ಸಂಪರ್ಕಹೊಂದಿದವರ ಮಾದರಿ ಪರೀಕ್ಷೆ ಹಿನ್ನೆಲೆಯಲ್ಲಿ ಒಟ್ಟು 106 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದರೆ ಯಾವುದೇ ಮಾದರಿಗಳ ವರದಿ ವೈದ್ಯರ ಕೈ ಸೇರಿಲ್ಲ. ಈವರೆಗೆ ಕಳುಹಿಸಿದ ಒಟ್ಟು 231 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ 16 ಮಂದಿ, ಶಂಕಿತ ಕರೊನಾ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ 83 ಮಂದಿ, ಅಸೌಖ್ಯದಿಂದ ಬಳಲುತ್ತಿರುವ ಇಬ್ಬರು, ತಬ್ಲಿಕ್ ಜಮಾತ್ ಹಾಟ್‌ಸ್ಪಾಟ್‌ಗೆ ಭೇಟಿ ನೀಡಿದ 5 ಮಂದಿಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 149 ಮಂದಿ 28 ದಿನಗಳ ನಿಗಾವಣೆ ಪೂರೈಸಿದ್ದು, 42 ಮಂದಿ 14 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 21 ಮಂದಿ ಹಾಸ್ಪಟಲ್ ಕ್ವಾರೆಂಟೈನ್‌ನಲ್ಲಿದ್ದಾರೆ.

    ಕಾಸರಗೋಡಿನ ನಾಲ್ವರು ಮನೆಗೆ
    ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ ಕೊವಿಡ್-19 ಪ್ರಕರಣ ದಾಖಲಾಗಿಲ್ಲ.
    ವೈರಸ್‌ಬಾಧಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಲ್ಲಿ ನಾಲ್ವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 9064ಮಂದಿ ಮನೆಗಳಲ್ಲಿ ಹಾಗೂ 137ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಬುಧವಾರ ಐದು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸಕ್ತ ಜಿಲ್ಲೆಯಲ್ಲಿ 83ಮಂದಿ ಕೋವಿಡ್-19 ಬಾಧಿಸಿ ಚಿಕಿತ್ಸೆಯಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts