More

    ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸಿ

    ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಔಷಧಗಳಿಗೆ ಜಿಎಸ್‌ಟಿ ವಿಧಿಸುತ್ತಿರುವುದು ಸೇರಿದಂತೆ ಕೇಂದ್ರ ಸರ್ಕಾರವು ಜನವಿರೋಧಿ ನೀತಿ ಕೈಬಿಡುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಅಂಬೇಡ್ಕರ್ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ಅಂಗನವಾಡಿ ಮತ್ತು ಆಶಾ ಹಾಗೂ ಬಿಸಿಯೂಟ ನೌಕರರು, ಕೆಎಸ್‌ಆರ್‌ಟಿಸಿ ಮತ್ತು ಬಿಎಸ್‌ಎನ್‌ಎಲ್ ಸಿಬ್ಬಂದಿ, ಅಂಚೆ ಇಲಾಖೆ ನೌಕರರು, ಮೆಡಿಕಲ್ ಅಸೋಸಿಯೇಷನ್ ಸದಸ್ಯರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಬಡವರ್ಗದ ಜನರಿಗೆ ಶಿಕ್ಷಣದಿಂದ ವಂಚಿತರಾಗುವ ಆತಂಕದಲ್ಲಿದ್ದು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆ, ವಿದ್ಯುತ್ ಶಕ್ತಿ ಕಾಯ್ದೆ ಸೇರಿದಂತೆ ಅನೇಕ ಜನವಿರೋಧಿ ನೀತಿಗಳಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತೆ ನಿಗಾ ವಹಿಸಬೇಕು. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಮುಂದಾಗಬೇಕು. ಅಂಗನವಾಡಿ ನೌಕರರಿಗೆ ಕೆಲಸದ ಭದ್ರತೆ ಒದಗಿಸಬೇಕು. ಶಿಕ್ಷಣ, ಆರೋಗ್ಯ, ರೈಲು, ಸೇರಿದಂತೆ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುವ ನಿರ್ಧಾರ ವಾಪಸ್ ಪಡೆದುಕೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ನಾಗೇಶ ಸಾತೇರಿ, ಸಿ.ಎಸ್. ಬಿದ್ನಾಳ, ಜಿ.ವಿ. ಕುಲಕರ್ಣಿ, ಮಂದಾ ನೇವಗಿ, ಧರ್ಮೇಂದ್ರ ಜಾಯಿ, ರಾಜೀವ ಗಣಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts