More

    ತವರಿನ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಬೆಂಗಳೂರು ಬುಲ್ಸ್: ಪುಣೇರಿ ಪಲ್ಟಾನ್‌ಗೆ ಎರಡನೇ ಗೆಲುವು

    ಬೆಂಗಳೂರು: ಭರತ್ (12 ಅಂಕ) ನಡೆಸಿದ 9 ಯಶಸ್ವಿ ರೈಡಿಂಗ್‌ಗಳ ಹೊರತಾಗಿಯೂ ಆತಿಥೇಯ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತಿಯ ತನ್ನ 3ನೇ ಲೀಗ್ ಪಂದ್ಯದಲ್ಲಿ 31-38 ಅಂತರದಿಂದ ದಬಾಂಗ್ ದೆಹಲಿ ಎದುರು ಮುಗ್ಗರಿಸಿದೆ. ಇದರೊಂದಿಗೆ ಸೌರಭ್ ನಂದಲ್ ಬಳಗ ತವರಿನಲ್ಲಿ ಸೋಲಿನ ಆರಂಭ ಕಂಡಿದೆ. ದಂಬಾಗ್ ದೆಹಲಿ ಸತತ 2ನೇ ಗೆಲುವು ತನ್ನದಾಗಿಸಿಕೊಂಡಿದೆ.

    ಉದ್ಯಾನನಗರಿಯ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಟೂರ್ನಿಯ ಎರಡನೇ ಚರಣದಲ್ಲಿ ಬೆಂಗಳೂರು ಬುಲ್ಸ್ ತಂಡ ಮೊದಲಾರ್ಧದಲ್ಲಿ 12-17 ಅಂಕಗಳ ಹಿನ್ನಡೆ ಅನುಭವಿಸಿತು. ದೆಹಲಿ ಪರ ನಾಯಕ, ರೈಡರ್ ನವೀನ್ ಕುಮಾರ್ (13), ಆಶು ಮಲಿಕ್ (9) ಭರ್ಜರಿ ನಿರ್ವಹಣೆ ತೋರಿದರು. ಪಂದ್ಯದ 12ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಬಲೆಗೆ ಕೆಡವಿದ ದೆಹಲಿ ಮೇಲುಗೈ ದಾಖಲಿಸಿತು.

    ಮೊದಲಾರ್ಧದ ಹಿನ್ನಡೆಯ ಬಳಿಕ ತಿರುಗೇಟು ನೀಡಿದ ಬುಲ್ಸ್ 23ನೇ ನಿಮಿಷದಲ್ಲಿ ದಬಾಂಗ್ ದೆಹಲಿಯನ್ನು ಆಲೌಟ್ ಬಲೆಗೆ ಕೆಡವಿತು. ಬಳಿಕ ಸಂಘಟಿತ ನಿರ್ವಹಣೆ ತೋರಿದ ಬೆಂಗಳೂರು ಬುಲ್ಸ್ ಪರ ಭರತ್, ಪಂದ್ಯದ 34ನೇ ನಿಮಿಷದಲ್ಲಿ ಸೂಪರ್ ರೈಡ್ ಮಾಡಿ 30-30 ಅಂಕಗಳ ಸಮಬಲ ತಂದರು. ಕೊನೇ ಐದು ನಿಮಿಷದಲ್ಲಿ ಎಚ್ಚರಿಕೆ ಆಟ ಪ್ರದರ್ಶಿಸಿದ ದಬಾಂಗ್ ದೆಹಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಗೆಲುವಿನ ಕೇಕೆ ಹಾಕಿತು. ರೈಡರ್ ಭರತ್ ಏಕಾಂಗಿ ಹೋರಾಟಕ್ಕೆ ಇತರ ಆಟಗಾರರ ಸೂಕ್ತ ಸಾಥ್ ದೊರೆಯದಿರುವುದು ಬೆಂಗಳೂರು ಬುಲ್ಸ್‌ಗೆ ಹಿನ್ನಡೆ ತಂದಿತು.

    ಪುಣೇರಿ ಪಲ್ಟಾನ್‌ಗೆ ಎರಡನೇ ಗೆಲುವು
    ಕೋಚ್, ಕನ್ನಡಿಗ ಬಿ.ಸಿ. ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ಕಣಕ್ಕಿಳಿದಿರುವ ಪುಣೇರಿ ಪಲ್ಟನ್ ತಂಡ ದಿನದ ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡವನ್ನು 43-32 ಅಂಕಗಳಿಂದ ಮಣಿಸಿದೆ. ಇದರೊಂದಿಗೆ ಪಲ್ಟನ್ ಟೂರ್ನಿಯಲ್ಲಿ ಸತತ 2ನೇ ಜಯ ಸಾಧಿಸಿದೆ.
    ಪುಣೇರಿ ಪಲ್ಟನ್ ಪರ ಮೋಹಿತ್ ಗೋಯಲ್ (12) ಆಲ್ರೌಂಡ್ ಪ್ರದರ್ಶನ ಮೂಲಕ ಭರ್ಜರಿ ನಿರ್ವಹಣೆ ತೋರಿದರು. ಆರಂಭದಿಂದಲೂ ಮೇಲುಗೈ ಸಾಧಿಸಿದ ಪುಣೇರಿ ಮೊದಲಾರ್ಧದಲ್ಲಿ ಯು ಮುಂಬಾವನ್ನು ಆಲೌಟ್ ಮಾಡಿ ಮುನ್ನಡೆಯನ್ನು ಕಾಯ್ದುಕೊಂಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts