More

    ಕನಕಪುರ ಕ್ಷೇತ್ರದಲ್ಲಿ ಡಿಕೆಶಿಯದ್ದೇ ಪಾರುಪತ್ಯ!; ಮುಖ್ಯಮಂತ್ರಿ ಗಾದಿ ಮೇಲೂ ಕೆಪಿಸಿಸಿ ಅಧ್ಯಕ್ಷರ ಕಣ್ಣು, ಪ್ರತಿಪಕ್ಷಗಳಲ್ಲಿ ನೀರಸ ಚಟುವಟಿಕೆ

    | ಗಂಗಾಧರ ಬೈರಾಪಟ್ಟಣ ರಾಮನಗರ

    ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿನಿಧಿಸುತ್ತಿರುವ ಕನಕಪುರ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಇಲ್ಲಿನ ಫಲಿತಾಂಶದ ಮೇಲೆ ರಾಜ್ಯ ಮಾತ್ರವಲ್ಲದೆ, ದೇಶದ ರಾಜಕೀಯದ ಕಣ್ಣು ನೆಟ್ಟಿದೆ. ಆದರೆ, ಪ್ರತಿ ಬಾರಿಯೂ ಪ್ರಬಲ ಎದುರಾಳಿಯೇ ಇಲ್ಲದೆ ನಿರಾಯಾಸ ಗೆಲುವಿನೊಂದಿಗೆ ಬೀಗುತ್ತಿರುವ ಡಿಕೆಶಿ ಅವರನ್ನು ಕಟ್ಟಿ ಹಾಕುವ ಪ್ರಯತ್ನಕ್ಕೆ ಪ್ರತಿಪಕ್ಷಗಳು ಮುಂದಾಗಿಲ್ಲ.

    ಕ್ಷೇತ್ರ ಮರುವಿಂಗಡಣೆ ಆದ ನಂತರ ಸಾತನೂರಿನಿಂದ ಕನಕಪುರಕ್ಕೆ ವಲಸೆ ಬಂದ ಡಿ.ಕೆ. ಶಿವಕುಮಾರ್ 2008, 2013 ಮತ್ತು 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಈ ಬಾರಿಯದ್ದು ನಾಲ್ಕನೇ ಸ್ಪರ್ಧೆ. ಸಾಕಷ್ಟು ಅಭಿವೃದ್ಧಿ ಕೈಗೊಂಡಿರುವ ಅವರು ಈಗಾಗಲೆ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಇದರ ಹೊರತಾಗಿಯೂ ಮತದಾರರನ್ನು ಗಟ್ಟಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಬಾರಿಯೂ ಕನಕೋತ್ಸವ ಆಚರಣೆ ಚಾಲ್ತಿಯಲ್ಲಿದೆ.

    ಜೆಡಿಎಸ್ ಸಮರಾಭ್ಯಾಸ: ಒಂದು ಕಾಲದಲ್ಲಿ ಜನತಾ ಪರಿವಾರದ ಪಾಲಿನ ಭದ್ರಕೋಟೆ ಆಗಿದ್ದ ಕನಕಪುರ ಕ್ಷೇತ್ರ 2008ರ ನಂತರ ಸಂಪೂರ್ಣವಾಗಿ ಜೆಡಿಎಸ್ ಕೈತಪ್ಪಿತು. ಈಗ ಪಕ್ಷದಿಂದ ದೂರವಿರುವ ದೂಂತೂರು ವಿಶ್ವನಾಥ್ 2008ರಲ್ಲಿ ಗೆಲುವಿನ ಸಮೀಪ ಬಂದು ಸೋಲು ಕಂಡರೆ, ಕನಕಪುರದ ಕಿಂಗ್ ಆಗಿದ್ದ ಪಿಜಿಆರ್ ಸಿಂಧ್ಯಾ 2013ರಲ್ಲಿ ಸವಾಲೊಡ್ಡದೆ ಸೋಲೊಪ್ಪಿಕೊಂಡರು. ಕಳೆದ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿ ನಾರಾಯಣಗೌಡ ಕಣಕ್ಕಿಳಿದರೂ ಡಿಕೆಶಿ ಆರ್ಭಟಕ್ಕೆ ಸರಿಸಾಟಿಯಾಗಲಿಲ್ಲ. ವಿರ್ಪಯಾಸವೆಂದರೆ ಜೆಡಿಎಸ್​ಗೆ ಸಮರ್ಥ ಅಭ್ಯರ್ಥಿ ಸಿಕ್ಕರೆ ಇಲ್ಲಿ ನಿರಾಯಾಸವಾಗಿ ಕನಿಷ್ಠ 50 ಸಾವಿರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದು. ಆದರೆ ಇದಕ್ಕೆ ಇದುವರೆಗೂ ದೇವೇಗೌಡರ ಕುಟುಂಬ ಮನಸ್ಸು ಮಾಡುತ್ತಿಲ್ಲ ಎನ್ನುವ ಬೇಸರ ಕಾರ್ಯಕರ್ತರದ್ದಾಗಿದ್ದರೆ, ಮತ್ತೊಂದು ಕಡೆ ಕಾರ್ಯಕರ್ತರಿಗೆ ನೋವು ಕೊಟ್ಟಿದ್ದೇವೆ ಎನ್ನುವ ನೋವು ದೇವೇಗೌಡರ ಕುಟುಂಬದ್ದಾಗಿದೆ.

    ಡಿಕೆಶಿ ಕಟ್ಟಿಹಾಕಲು ವಿಟಮಿನ್ ‘ಎಂ’ ಸಮೃದ್ಧವಾಗಿರುವ ಹಾಗೂ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿ ಈ ಬಾರಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಸ್ಥಳೀಯವಾಗಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು, ಗ್ರಾನೈಟ್ ಉದ್ಯಮಿಯೂ ಆದ ಮತ್ತೊಬ್ಬ ಮುಖಂಡ ಬಾಲನರಸಿಂಹೇಗೌಡ ಹೆಸರು ಕೇಳಿ ಬರುತ್ತಿದೆ. ಸೋಮವಾರ ಪಂಚರತ್ನ ರಥಯಾತ್ರೆ ನಡೆಸುವ ಮೂಲಕ ದಳಪತಿಗಳು ಕ್ಷೇತ್ರದಲ್ಲೂ ಜೆಡಿಎಸ್ ಗಟ್ಟಿಯಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ.

    ಬಿಜೆಪಿಗೆ ಶಕ್ತಿಯೇ ಇಲ್ಲ: ಬಿಜೆಪಿ ಪಾಲಿಗೆ ಕನಕಪುರ ಶಕ್ತಿ ಇಲ್ಲದ ಕ್ಷೇತ್ರ ಎಂದರೆ ತಪ್ಪಾಗಲಾದರು. ಕೆಪಿಸಿಸಿ ಅಧ್ಯಕ್ಷರ ತವರಿನಲ್ಲಿ ಬಿಜೆಪಿ ಸಾಧನೆ ಕಳಪೆಯಲ್ಲಿ ಕಳಪೆ. ಈ ಬಾರಿ ಬಿಜೆಪಿಯೂ ಪೈಪೋಟಿ ನೀಡುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ ಎಂದು ಹೇಳುತ್ತಿದೆ. ಆದರೆ, ಇದುವರೆಗೂ ಇಲ್ಲಿ ಅಭ್ಯರ್ಥಿ ಆಗಬೇಕು ಎಂದು ಮುಂದೆ ಬಂದವರೇ ಕಾಣುತ್ತಿಲ್ಲ. ಸ್ಥಳೀಯ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್ ಹೆಸರು ಚಾಲ್ತಿಯಲ್ಲಿದೆ. ಇನ್ನು ಉಳಿದ ಪಕ್ಷಗಳು ಹೆಸರಿಗೆ ಇವೆಯಾದರೂ ಇವರ ಪಾತ್ರ ಲೆಕ್ಕಕ್ಕೆ ಬರುವುದಿಲ್ಲ.

    ಸಿಎಂ ಆಗಲೆಂಬ ಅಭಿಲಾಷೆ: ಡಿ.ಕೆ.ಶಿವಕುಮಾರ್ ಹಲವಾರು ಸವಾಲುಗಳನ್ನು ಮೆಟ್ಟಿನಿಂತು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನದ ರೇಸ್​ನಲ್ಲಿಯೂ ಇದ್ದು, ಕನಕಪುರ ಕ್ಷೇತ್ರದ ಜನತೆಯ ಮನಸ್ಸಿನಲ್ಲಿಯೂ ಇದಕ್ಕೆ ಸಹಮತವಿದೆ. ನಮ್ಮ ಕ್ಷೇತ್ರದವರೂ ಸಿಎಂ ಆದರೆ ಹೆಮ್ಮೆ ಎನ್ನುವ ಜನರೇ ಹೆಚ್ಚು. ಇದರ ಹೊರತಾಗಿಯೂ ಸಂಸದ ಡಿ.ಕೆ.ಸುರೇಶ್ ಕನಕಪುರದಿಂದ ಕಣಕ್ಕೆ ಇಳಿದರೆ ನಮ್ಮದೇನು ತಕರಾರಿಲ್ಲ ಎನ್ನುವವರ ಸಂಖ್ಯೆಗೇನೂ ಕಡಿಮೆ ಇಲ್ಲ.

    ರಾಮನಗರ ಕ್ಷೇತ್ರಕ್ಕೆ ವಲಸೆ ಅನುಮಾನ: ರಾಮನಗರದಿಂದ ಗೆಲುವು ಸಾಧಿಸಿದರೆ ಸಿಎಂ ಆಗುತ್ತಾರೆ ಎನ್ನುವ ನಂಬಿಕೆ ಕಾರಣಕ್ಕೆ ಡಿಕೆಶಿ ಕ್ಷೇತ್ರ ಬದಲಿಸುತ್ತಾರೆ ಎನ್ನುವ ಚರ್ಚೆ ನಡೆದಿದ್ದವು. ರಾಮನಗರ ಕಾರ್ಯಕರ್ತರೂ ಆಹ್ವಾನ ನೀಡಿದ್ದರು. ಆದರೆ, ಯಾವುದೇ ಕಾರಣಕ್ಕೂ ಕನಕಪುರ ಬಿಡುವುದಿಲ್ಲ ಎನ್ನುವ ಸ್ಪಷ್ಟನೆ ಡಿಕೆಶಿ ಅವರಿಂದ ಬಂದಿದೆಯಾದರೂ, ಅಂತಿಮ ಕ್ಷಣದಲ್ಲಿ ಬದಲಾವಣೆ ನಡೆದರೆ ಅಚ್ಚರಿಪಡಬೇಕಿಲ್ಲ.

    ಕ್ಷೇತ್ರದ ಹಿರಿಮೆ: ರಾಮನಗರ ಮಾತ್ರವಲ್ಲ ಕನಕಪುರ ಕ್ಷೇತ್ರವೂ ಈ ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ್ದ ಕ್ಷೇತ್ರ. ಮುಖ್ಯಮಂತ್ರಿ ಆಗಿದ್ದ ರಾಮಕೃಷ್ಣ ಹೆಗಡೆ ಅವರು ಕನಕಪುರ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿ ಅಧಿಕಾರ ಉಳಿಸಿಕೊಂಡಿದ್ದರು. ಇವರಿಗಾಗಿ 1983ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿದ್ದ ಪಿಜಿಆರ್ ಸಿಂಧ್ಯಾ ಸ್ಥಾನ ತ್ಯಾಗ ಮಾಡಿದ್ದರು.

    ಕನಕಪುರ ಕ್ಷೇತ್ರದಲ್ಲಿ ಡಿಕೆಶಿಯದ್ದೇ ಪಾರುಪತ್ಯ!; ಮುಖ್ಯಮಂತ್ರಿ ಗಾದಿ ಮೇಲೂ ಕೆಪಿಸಿಸಿ ಅಧ್ಯಕ್ಷರ ಕಣ್ಣು, ಪ್ರತಿಪಕ್ಷಗಳಲ್ಲಿ ನೀರಸ ಚಟುವಟಿಕೆ

    ಕನಕಪುರ ಕ್ಷೇತ್ರದಲ್ಲಿ ಡಿಕೆಶಿಯದ್ದೇ ಪಾರುಪತ್ಯ!; ಮುಖ್ಯಮಂತ್ರಿ ಗಾದಿ ಮೇಲೂ ಕೆಪಿಸಿಸಿ ಅಧ್ಯಕ್ಷರ ಕಣ್ಣು, ಪ್ರತಿಪಕ್ಷಗಳಲ್ಲಿ ನೀರಸ ಚಟುವಟಿಕೆ ಕನಕಪುರ ಕ್ಷೇತ್ರದಲ್ಲಿ ಡಿಕೆಶಿಯದ್ದೇ ಪಾರುಪತ್ಯ!; ಮುಖ್ಯಮಂತ್ರಿ ಗಾದಿ ಮೇಲೂ ಕೆಪಿಸಿಸಿ ಅಧ್ಯಕ್ಷರ ಕಣ್ಣು, ಪ್ರತಿಪಕ್ಷಗಳಲ್ಲಿ ನೀರಸ ಚಟುವಟಿಕೆ

    400 ರೂ. ದುಡಿಯುವ ದಿನಗೂಲಿಯ ಮನೆಗೆ ಐಟಿ ನೋಟಿಸ್; 14 ಕೋಟಿ ರೂ. ಬಾಕಿ ಇದೆ ಎಂದ ಆದಾಯ ತೆರಿಗೆ ಅಧಿಕಾರಿಗಳು!

    ಮೂವರು ವಿವಾಹಿತ ಶಿಕ್ಷಕರ ನಡುವಿನ ಪ್ರೀತಿಗೆ ವಿದ್ಯಾರ್ಥಿ ಬಲಿ; ಇಬ್ಬಿಬ್ಬರೊಂದಿಗಿದ್ದ ಅಮ್ಮನ ಸಲುಗೆ ಮಗನಿಗೇ ಮುಳುವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts