More

    ಚಂಡಮಾರುತ ಎಫೆಕ್ಟ್‌ನಿಂದ ಅಕಾಲಿಕ ಮಳೆ

    ಮಂಗಳೂರು: ಹವಾಮಾನ ಇಲಾಖೆ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹಲವೆಡೆ ಮಂಗಳವಾರ ಸಾಯಂಕಾಲ ಗುಡುಗು, ಭಾರಿ ಗಾಳಿ ಸಹಿತ ಉತ್ತಮ ಮಳೆಯಾಗಿದೆ.

    ಅರಬ್ಬಿ ಸಮುದ್ರದಲ್ಲಿ ಕಂಡು ಬಂದಿರುವ ಚಂಡಮಾರುತ ಪರಿಚಲನೆ ಆಗ್ನೇಯ ಅರಬ್ಬಿ ಸಮುದ್ರ ಮತ್ತು ಹಿಂದು ಮಹಾಸಾಗರ ಸಮಭಾಜಕ ವೃತ್ತದ ಬಳಿ ಸಮುದ್ರ ಮಟ್ಟಕ್ಕಿಂತ 3.1 ಕಿ.ಮೀ. ಎತ್ತರದಲ್ಲಿ ಕೇಂದ್ರೀಕೃತವಾಗಿದೆ. ಪರಿಣಾಮ ಗಾಳಿಯಿಂದಾಗಿ ಮೋಡಗಳ ಚಲನೆ ಹೆಚ್ಚಾಗಿದ್ದು, ಕರಾವಳಿ ಭಾಗದಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
    ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಕಡಬ, ಮೂಡುಬಿದಿರೆ, ಮಂಗಳೂರು, ಉಡುಪಿ, ಕಾರ್ಕಳ, ಹೆಬ್ರಿ, ಪಡುಬಿದ್ರಿ ಮತ್ತಿತರ ಕಡೆ ಮಳೆಯಾಗಿದೆ. ಕೆಎಸ್‌ಎನ್‌ಡಿಎಂಸಿ ಮಾಹಿತಿಯಂತೆ ಮೂಡುಬಿದಿರೆಯಲ್ಲಿ ಅತ್ಯಧಿಕ 69.5 ಮಿ.ಮೀ. ಮಳೆಯಾಗಿದೆ. ಹಗಲು ವೇಳೆಯಲ್ಲಿ ಉರಿಬಿಸಿಲ ವಾತಾವರಣ ಕಂಡು ಬಂದಿದ್ದು, ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಸಾಯಂಕಾಲವಾಗುತ್ತಿದ್ದಂತೆ ಸುಮಾರು ಅರ್ಧ ಗಂಟೆ ಮಳೆ ಸುರಿದಿದೆ. ಹಲವೆಡೆ ರಾತ್ರಿ ವರೆಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

    ಮಂಗಳವಾರ ದಿನದ ಗರಿಷ್ಠ ತಾಪಮಾನ 36.9 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಳೆ-ಮೋಡ ಕವಿದ ವಾತಾವರಣದ ಪರಿಣಾಮ ಕೆಲವು ದಿನಗಳಿಂದ ಚಳಿ ಕಡಿಮೆಯಾಗಿದ್ದು, ಮುಂಜಾನೆಯಿಂದಲೇ ಉರಿಸೆಕೆ ವಾತಾವರಣವಿದೆ.

    ಒದ್ದೆಯಾದ ಅಡಕೆ:ಸುಳ್ಯ: ಕೃಷಿಕರು ಅಂಗಳದಲ್ಲಿ ಒಣಗಲು ಹಾಕಿದ ಅಡಕೆ ಅಕಾಲಿಕ ಮಳೆಯಿಂದಾಗಿ ಒದ್ದೆಯಾಗಿದೆ. ಕೊಯ್ಲಿನ ಅವಧಿಯಾಗಿರುವುದರಿಂದ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಅಡಕೆಯನ್ನು ಅಂಗಳದಲ್ಲಿ ಒಣಗಲು ಹಾಕಿರುತ್ತಾರೆ. ದಿಢೀರ್ ಮಳೆ ಬಂದಾಗ ರಕ್ಷಿಸುವುದು ಕಷ್ಟದ ಕೆಲಸ. ಮಳೆಯಿಂದ ಒದ್ದೆಯಾದರೆ ಅಡಕೆ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts