More

    ಚಂಡಮಾರುತ ಐದಕ್ಕೆ ಸೀಮಿತ

    ಭರತ್ ಶೆಟ್ಟಿಗಾರ್, ಮಂಗಳೂರು

    ಕಳೆದ ಅವಧಿ(2019)ಯಲ್ಲಿ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಒಂದರ ಹಿಂದೆ ಒಂದರಂತೆ ಒಟ್ಟು ಎಂಟು ಚಂಡಮಾರುತಗಳು ಎದ್ದು, ಹೊಸ ದಾಖಲೆ ನಿರ್ಮಾಣವಾಗಿತ್ತು. ಈ ವರ್ಷವೂ ಅಷ್ಟೇ ಪ್ರಮಾಣದಲ್ಲಿ ಚಂಡಮಾರುತ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿತ್ತಾದರೂ, ವರ್ಷಾಂತ್ಯದ ವೇಳೆಗೆ 5 ಚಂಡಮಾರುತಗಳು ಮಾತ್ರ ಕಾಣಿಸಿದ್ದರಿಂದ ಜನರು ನಿಟ್ಟುಸಿರುಬಿಟ್ಟಿದ್ದಾರೆ.

    ಬಂಗಾಳಕೊಲ್ಲಿಯಲ್ಲಿ ಮೇ 16ರಿಂದ 21ರ ನಡುವಿನ ‘ಅಂಫಾನ್’ ಚಂಡಮಾರುತದೊಂದಿದೆ ಆರಂಭವಾಗಿ ನ.30-ಡಿ.5ರ ‘ಬುರೇವಿ’ಯೊಂದಿಗೆ ಕೊನೆಗೊಂಡಿದೆ. ಬಂಗಾಳಕೊಲ್ಲಿಯಲ್ಲಿ 3 ಮತ್ತು ಅರಬ್ಬಿ ಸಮುದ್ರದಲ್ಲಿ 2 ಚಂಡಮಾರುತಗಳು ಕಾಣಿಸಿಕೊಂಡಿತ್ತು. ಮೇ 16ರಿಂದ ಡಿ.5ರವರೆಗಿನ ಅವಧಿಯಲ್ಲಿ ಒಟ್ಟು 9 ಬಾರಿ ಚಂಡಮಾರುತಕ್ಕೆ ಪೂರಕ ವಾತಾವರಣ ಪೂರ್ವ ಹಾಗೂ ಪಶ್ಚಿಮ ಕರಾವಳಿಯ ಸಮುದ್ರದಲ್ಲಿ ನಿರ್ಮಾಣವಾಗಿತ್ತು. ಇದರಲ್ಲಿ 3 ವಾಯುಭಾರ ಕುಸಿತ, 1 ತೀವ್ರ ವಾಯುಭಾರ ಕುಸಿತವಾಗಿದೆ. ಉಳಿದಂತೆ ಅರಬ್ಬಿ ಸಮುದ್ರಲ್ಲಿ ‘ನಿಸರ್ಗ’ ಮತ್ತು ‘ಗಟಿ’, ಬಂಗಾಳಕೊಲ್ಲಿಯಲ್ಲಿ ‘ಅಂಫಾನ್’, ‘ನಿವಾರ್’ ಮತ್ತು ‘ಬುರೇವಿ’ ಚಂಡಮಾರುತಗಳು ಭೀತಿ ಸೃಷ್ಟಿಸಿತ್ತು.

    ಅಂಫಾನ್‌ನಿಂದ ಹೆಚ್ಚಿನ ಹಾನಿ
    ಈ ಬಾರಿಯ ಚಂಡಮಾರುತಗಳ ಪೈಕಿ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ಅಂಫಾನ್ ಗರಿಷ್ಠ ಪ್ರಮಾಣದಲ್ಲಿ ಹಾನಿ ಮಾಡಿದೆ. ಗಂಟೆಗೆ 240-260 ಕಿ.ಮೀ.ವೇಗದಲ್ಲಿ ತೀರಕ್ಕೆ ಅಪ್ಪಳಿಸಿದ್ದು, ಪಶ್ಚಿಮ ಬಂಗಾಳ, ಒಡಿಶಾ, ಅಂಡಮಾನ್ ದ್ವೀಪಗಳು, ಬಾಂಗ್ಲಾದೇಶ, ಭೂತಾನ್ ಅಂಪಾನ್ ಹೊಡೆತಕ್ಕೆ ಸಿಲುಕಿತ್ತು. ಇದು 1999ರ ಒರಿಸ್ಸಾ ಚಂಡಮಾರುತ ಬಳಿಕ ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾದ ಸೂಪರ್ ಸೈಕ್ಲೋನ್. ‘ನಿವಾರ್’ ಚಂಡಮಾರುತವೂ ಶ್ರೀಲಂಕಾ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹಾನಿ ಮಾಡಿದೆ. ಆದರೆ ಅಂಪಾನ್‌ನಷ್ಟು ಪ್ರಬಲವಾಗಿರಲಿಲ್ಲ.

    ನಿಸರ್ಗದಿಂದ ಮುಂಗಾರು ವಿಳಂಬ
    ಅರಬ್ಬಿ ಸಮುದ್ರದಲ್ಲಿ ಜೂನ್ 1ರಿಂದ 4ರ ಅವಧಿಯಲ್ಲಿ ಉಂಟಾದ ನಿಸರ್ಗ ಚಂಡಮಾರುತ ಕರ್ನಾಟಕ ಕರಾವಳಿಗೆ ಮುಂಗಾರು ಪ್ರವೇಶಿಸುವುದನ್ನೇ ಕೆಲವು ದಿನ ವಿಳಂಬ ಮಾಡಿತ್ತು. ಬಳಿಕ ಮುಂಗಾರು ಪ್ರವೇಶವಾದರೂ, ನಿರೀಕ್ಷಿತ ಮಳೆ ಸುರಿದಿಲ್ಲ. ಗಂಟೆಗೆ 110 ಕಿ.ಮೀ.ವೇಗದಲ್ಲಿ ಬೀಸಿದ ಗಾಳಿಯಿಂದಾಗಿ ಮಹಾರಾಷ್ಟ್ರ ಮತ್ತು ಗೋವಾ ತೀರದಲ್ಲಿ ವ್ಯಾಪಕ ಹಾನಿಯಾಗಿತ್ತು. ಇನ್ನೊಂದು ಚಂಡಮಾರುತ ‘ಗಟಿ’ ಪಶ್ಚಿಮ ಅರಬ್ಬಿ ಸಮುದ್ರ ಭಾಗದ ಸೊಮಾಲಿಯ, ಯೆಮೆನ್ ತೀರಕ್ಕೆ ಅಪ್ಪಳಿಸಿತ್ತು.

    ಕಳೆದ ಬಾರಿಯ ಚಂಡಮಾರುತ
    ಅರಬ್ಬಿ ಸಮುದ್ರದಲ್ಲಿ ಕಳೆದ ವರ್ಷ ಮುಂಗಾರು ಅವಧಿಯಲ್ಲಿ ‘ವಾಯು’ ಮತ್ತು ‘ಹಿಕಾ’ ಹಾಗೂ ಮುಂಗಾರಿನ ಬಳಿಕ ‘ಕ್ಯಾರ್’ ಮತ್ತು ‘ಮಹಾ’, ‘ಪವನ್’ ಚಂಡಮಾರುತ ಕಾಣಿಸಿಕೊಂಡಿತ್ತು. ಈ ಪೈಕಿ ‘ಹಿಕಾ’ ಮಾತ್ರ ತೀವ್ರ ಚಂಡಮಾರುತವಾಗಿ ಒಮಾನ್ ತೀರಕ್ಕೆ ಅಪ್ಪಳಿಸಿದೆ. ಗುಜರಾತ್ ತೀರದಲ್ಲಿ ವಾಯು ಬಲ ಕುಗ್ಗಿಸಿಕೊಂಡರೆ, ‘ಕ್ಯಾರ್’ ಸೊಮಾಲಿಯ ತೀರದಲ್ಲಿ, ‘ಮಹಾ’ ಗುಜರಾತ್‌ನಲ್ಲಿ ದುರ್ಬಲವಾಗಿತ್ತು. ಡಿಸೆಂಬರ್‌ನಲ್ಲಿ ‘ಪವನ್’ ಸೊಮಾಲಿಯಾ ತೀರಕ್ಕೆ ಅಪ್ಪಳಿಸಿತ್ತು. ಬಂಗಾಳ ಕೊಲ್ಲಿಯಲ್ಲಿ ವರ್ಷಾರಂಭದಲ್ಲಿ ‘ಪಾಬುಕ್’, ಮುಂಗಾರು ಪೂರ್ವದಲ್ಲಿ ‘ಫನಿ’ ಹಾಗೂ ಹಿಂಗಾರಿನಲ್ಲಿ‘ಬುಲ್‌ಬುಲ್’ ಚಂಡಮಾರುತ ಎದ್ದಿವೆ. ಥಾಯ್ಲೆಂಡ್‌ನಿಂದ ಬಂಗಾಳ ಕೊಲ್ಲಿ ಪ್ರವೇಶಿಸಿದ ‘ಪಾಬುಕ್’ ಅಂಡಮಾನ್ ಸಮುದ್ರದ ಬಳಿ ಬಲ ಕಳೆದುಕೊಂಡಿತು.‘ ಫನಿ’ ಒಡಿಶಾ ಕರಾವಳಿಗೆ ಅಪ್ಪಳಿಸಿ ವ್ಯಾಪಕ ಹಾನಿ ಮಾಡಿತ್ತು. ಬುಲ್‌ಬುಲ್ ಪಶ್ಚಿಮ ಬಂಗಾಳದಲ್ಲಿ ಕರಾವಳಿ ಪ್ರವೇಶಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts