More

    ‘ವಾಯು’ವಿಗೆ ‘ನಿಸರ್ಗ’ ಸಾಥ್, ಮುಂಗಾರು-ಸೈಕ್ಲೋನ್ ಜತೆಗೇ ಪ್ರವೇಶ

    – ಭರತ್ ಶೆಟ್ಟಿಗಾರ್

    ಮಂಗಳೂರು: ಕಳೆದ ವರ್ಷ ‘ವಾಯು’, ಈ ಬಾರಿ ‘ನಿಸರ್ಗ’. ಈ ಬಾರಿ ಸತತ ಎರಡನೇ ಬಾರಿ ಚಂಡಮಾರುತ-ಮುಂಗಾರು ಒಟ್ಟೊಟ್ಟಿಗೆ ಕಾಣಿಸಿಕೊಂಡಿದೆ.
    2019ರಲ್ಲಿ ಮುಂಗಾರು ತಡವಾಗಿ, ಜೂನ್ 8ರಂದು ಕೇರಳ ಪ್ರವೇಶಿಸಿತ್ತು. ಅದೇ ದಿನ ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿತ್ತು. ಲಕ್ಷದ್ವೀಪದ ಕರವತ್ತಿ ಪ್ರದೇಶಲ್ಲಿ ಇದು ಕೇಂದ್ರೀಕೃತವಾಗಿ, ಬಳಿಕ ಬಲ ವರ್ಧಿಸುತ್ತಾ ‘ವಾಯು’ ಚಂಡಮಾರುತವಾಗಿ ಬದಲಾಗಿ ಜೂ.12ರ ವೇಳೆಗೆ ಗುಜರಾತ್ ಕರಾವಳಿಗೆ ಅಪ್ಪಳಿಸಿತ್ತು. ಇದೇ ಸಂದರ್ಭ ಜೂ.10ರಂದು ಮುಂಗಾರು ಕರಾವಳಿಗೆ ಪ್ರವೇಶಿಸಿ, ಮೂರು ದಿನ ಉತ್ತಮವಾಗಿ ಸುರಿದು ಬಳಿಕ ಬಿಸಿಲು ಕಾಣಿಸಿಕೊಂಡಿತ್ತು. ಮತ್ತೆ ಮಳೆ ಬಿರುಸು ಪಡೆಯಲು ಕೆಲವು ದಿನ ಬೇಕಾಯಿತು.

    ಈ ಬಾರಿಯೂ ಮುಂಗಾರಿನ ಜತೆಗೆ ಸಮುದ್ರದಲ್ಲಿ ಕಡಿಮೆ ಒತ್ತಡ ಪ್ರದೇಶ, ವಾಯುಭಾರ ಕುಸಿತ, ಚಂಡಮಾರುತ ಕಾಣಿಸಿಕೊಂಡಿದೆ. ಮುಂಗಾರು-2020 ನಿರೀಕ್ಷೆಗಿಂತ ಮುಂಚಿತವಾಗಿಯೇ ಅಂದರೆ ಜೂ.1ರಂದು ಮುಂಗಾರು ಕೇರಳಕ್ಕೆ ಕಾಲಿಟ್ಟಿದೆ. ಇದೇ ವೇಳೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವುಂಟಾಗಿ ‘ನಿಸರ್ಗ’ ಚಂಡಮಾರುತವಾಗಿ ಬದಲಾಗಿ, ಈಗಾಗಲೇ ಮಹಾರಾಷ್ಟ್ರ ಕರಾವಳಿಗೆ ಅಪ್ಪಳಿಸಿ ಸಾಕಷ್ಟು ಹಾನಿ ಮಾಡಿದೆ. ಮುಂಗಾರಿನ ಜತೆಗೇ ಚಂಡಮಾರುತವೂ ಕಾಣಿಸಿಕೊಳ್ಳುವುದು ಅತಿ ವಿರಳ, ಅದರಲ್ಲೂ ಸತತ ಎರಡು ವರ್ಷ ಕಾಣಿಸಿಕೊಂಡಿರುವುದು ವಿಶೇಷ.

    ದುರ್ಬಲಗೊಳ್ಳುತ್ತಾ ಮುಂಗಾರು?: ಮುಂಗಾರಿನೊಂದಿಗೆ ಚಂಡಮಾರುತ ಆಗಮನ ಮಳೆಯನ್ನು ಸ್ವಲ್ಪದಿನ ತಡೆಯುತ್ತದೆ ಎನ್ನುತ್ತಾರೆ ಹವಾಮಾನ ತಜ್ಞರು. ಮುಂಗಾರು ದುರ್ಬಲವಾಗುವ ಮೂಲಕ ಕಳೆದ ವರ್ಷವೂ ಇದು ರುಜುವಾತಾಗಿತ್ತು. ಈ ಬಾರಿಯೂ ಮುಂಗಾರು-ಚಂಡಮಾರುತ ಜತೆಯಾಗಿ ಆಗಮಿಸಿತ್ತು. ಆದ್ದರಿಂದ ಮಳೆ ವಿಳಂಬ ಸಾಧ್ಯತೆಯಿದೆ. ಗುರುವಾರ ಮುಂಗಾರು ಕರಾವಳಿಗೆ ಪ್ರವೇಶಮಾಡಿದ್ದು, ಆದರೆ ಬಿರುಸು ಪಡೆದು ಅಬ್ಬರಿಸಲು ಕೆಲವು ದಿನ ಬೇಕಾಗಹುದು ಎನ್ನುವುದು ತಜ್ಞರ ಅಭಿಪ್ರಾಯ.

    ಎರಡು ದಿನ ಉತ್ತಮ ಮಳೆ: ಜೂ.1ರಿಂದ 3ರ ಬೆಳಗ್ಗೆ 8.30ರವರೆಗೆ ದ.ಕ ಜಿಲ್ಲೆಯಲ್ಲಿ 62 ಮಿ.ಮೀ.ಮಳೆಯಾಗಿದ್ದು, ಉಡುಪಿಯಲ್ಲಿ 127 ಮಿ.ಮೀ ಮಳೆ ಸುರಿದಿದೆ. ಮಾರ್ಚ್ 1ರಿಂದ ಮೇ 31ರವರೆಗೆ ದ.ಕ.ಜಿಲ್ಲೆಯಲ್ಲಿ 224 ಮಿ.ಮೀ.ಮಳೆಯಾಗಿದ್ದು, ವಾಡಿಕೆಗಿಂತ ಶೇ.2ರಷ್ಟು ಕಡಿಮೆ ಸುರಿದಿದೆ. ಉಡುಪಿಯಲ್ಲಿ 169 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.16 ಕಡಿಮೆಯಾಗಿದೆ.

    ಕಳೆದ ವರ್ಷವೂ ಮುಂಗಾರು ಆರಂಭವಾಗುತ್ತಿದ್ದಂತೆ ಚಂಡಮಾರುತ ಅಪ್ಪಳಿಸಿತ್ತು. ಈ ಬಾರಿಯೂ ಆದೇ ರೀತಿಯ ವಾತಾವರಣ ಮರುಕಳಿಸಿದೆ. ಸದ್ಯ ಮಳೆಯೆಲ್ಲ ನಿಸರ್ಗ ಚಂಡಮಾರುತದೊಂದಿಗೆ ಹೋಗಿದೆ. ಈಗಾಗಲೇ ಒಂದು ದಿನ ತಡವಾಗಿ ಮುಂಗಾರು ಪ್ರವೇಶಿಸಿದ್ದು, ಎರಡು ಮೂರು ದಿನದಲ್ಲಿ ಬಿರುಸು ಪಡೆಯಲಿದೆ.
    – ಸುನೀಲ್ ಗಾವಸ್ಕರ್, ಕೆಎಸ್‌ಎನ್‌ಡಿಎಂಸಿ ಹವಾಮಾನ ತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts