More

    ವಿಸ್ತರಣೆ ಭೀತಿ, ಖರೀದಿ ಜೋರು

    ಮಂಗಳೂರು/ಉಡುಪಿ: ಶನಿವಾರದಂತೆಯೇ ಭಾನುವಾರವೂ ವಾರಾಂತ್ಯದ ಕರ್ಫ್ಯೂಗೆ ದ.ಕ ಮತ್ತು ಉಡುಪಿ ಜಿಲ್ಲೆಗಳು ಸ್ತಬ್ಧವಾಗಿವೆ.
    ಅತ್ಯಗತ್ಯ ಸೇವೆಗಳಿಗೆ ಸಂಬಂಧಿಸಿದವರಷ್ಟೇ ರಸ್ತೆಯಲ್ಲಿ ಕಂಡುಬಂದರು. ಮಂಗಳೂರು ನಗರದಲ್ಲೂ ಮೆಡಿಕಲ್ ಸ್ಟೋರ್‌ಗಳು, ಎಟಿಎಂಗಳು ಮಾತ್ರ ತೆರೆದಿದ್ದು ಫುಡ್ ಡೆಲಿವರಿ ನೌಕರರು ಹೆಚ್ಚಾಗಿ ಓಡಾಡುವುದು ಕಂಡುಬಂತು.

    ಜಿಲ್ಲೆಯ ಕೆಲವೆಡೆ ವಾರಪೂರ್ತಿ ಕರ್ಫ್ಯೂ ವಿಸ್ತರಣೆ ಹೆದರಿಕೆಯಿಂದಾಗಿ ಗ್ರಾಹಕರು ಅಂಗಡಿಗಳತ್ತ ಧಾವಿಸಿದ್ದರು. ಬೆಳಗ್ಗಿನ ಹೊತ್ತು ದಿನಸಿ, ತರಕಾರಿ, ಹಣ್ಣು, ಹಾಲು, ಮೀನು ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳು, ಮಾರುಕಟ್ಟೆಗಳು ಮಾತ್ರ ತೆರೆದಿದ್ದವು. ಕೆಲವೇ ಕೆಲವು ಹೋಟೆಲ್‌ಗಳು ತೆರೆದು, ಪಾರ್ಸೆಲ್‌ಗಳ ಸರಬರಾಜಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂಗಳೂರಿನ ಮೀನು ಮಾರುಕಟ್ಟೆ, ಸೆಂಟ್ರಲ್ ಮಾರುಕಟ್ಟೆ, ಕಂಕನಾಡಿ ಮಾರುಕಟ್ಟೆಗಳು ತೆರೆದಿದ್ದರೂ ಅಷ್ಟಾಗಿ ಗ್ರಾಹಕರು ಇರಲಿಲ್ಲ. ಜನರು ಖರೀದಿ ವೇಳೆ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಯ್ದುಕೊಂಡಿರುವುದು ಕಂಡುಬಂತು.

    ಭಾನುವಾರ ಮಂಗಳೂರು ಮಾರುಕಟ್ಟೆಯಲ್ಲಿ ಹಣ್ಣು ಬೆಳಗ್ಗೆಯೇ ಖಾಲಿಯಾಗಿದೆ. ಕರ್ಫ್ಯೂ ಸಡಿಲ ಅವಧಿ ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಇದ್ದರೂ 8 ಗಂಟೆ ವೇಳೆಗೆ ಎಲ್ಲ ಬಗೆಯ ಹಣ್ಣುಗಳು ಖಾಲಿಯಾಗಿದ್ದವು. ಸೆಂಟ್ರಲ್ ಮಾರ್ಕೆಟ್‌ನಲ್ಲಿ ಮಾವು ಮಾತ್ರ ಕಂಡುಬಂದಿತ್ತು. ರಂಜಾನ್ ಉಪವಾಸ ಕಾರಣವಾದರೆ, ಇನ್ನೊಂದು ಈ ವಾರಪೂರ್ತಿ ಕರ್ಫ್ಯೂ ಮುಂದುವರಿಯುವ ಭಯದಿಂದ ಜನ ಹೆಚ್ಚು ಖರೀದಿ ಮಾಡಿರುವುದಾಗಿ ತಿಳಿದುಬಂದಿದೆ.

    ರಸ್ತೆಗೆ ಇಳಿಯದ ಬಸ್ಸುಗಳು: ಕರ್ಫ್ಯೂ ಜಾರಿ ಹಿನ್ನೆಲೆ ಸರ್ಕಾರಿ ಅಥವಾ ಖಾಸಗಿ ಬಸ್‌ಗಳು ಎರಡನೇ ದಿನವೂ ರಸ್ತೆಗೆ ಇಳಿಯಲಿಲ್ಲ. ಅಗತ್ಯ ವಾಹನಗಳಷ್ಟೇ ಸಂಚರಿಸುತ್ತಿದ್ದವು. ಶನಿವಾರ ಕೆಲವು ಬಸ್‌ಗಳು ಸಂಚಾರ ನಡೆಸಿದ್ದರೆ, ಭಾನುವಾರ ಒಂದೆರಡು ಬಸ್‌ಗಳು ಮಾತ್ರವೇ ಸಂಚರಿಸಿವೆ. ಶನಿವಾರ ರಾತ್ರಿ ದೂರದೂರುಗಳಿಗೆ ಬಸ್‌ಗಳು ಸಂಚರಿಸಿಲ್ಲ. ಏ.26ರಂದು ಎಂದಿನಂತೆ ಬಸ್ ಸಂಚಾರ ಇರುವುದಾಗಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಮಾಲೀಕರು ಹೇಳಿದ್ದಾರೆ. ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ 45 ಚೆಕ್‌ಪೋಸ್ಟ್ ಹಾಕಲಾಗಿದ್ದು ಪ್ರತೀ ಚೆಕ್‌ಪೋಸ್ಟ್‌ನಲ್ಲೂ ಐದಾರು ಪೊಲೀಸರು ತಪಾಸಣೆ ನಿರತರಾಗಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts