More

    ಕೃಷಿಕರಿಗೆ ಸಮಸ್ಯೆ ಆಗದಿರಲಿ, ಕರ್ತವ್ಯದಲ್ಲಿ ಇರಲಿ ಬದ್ಧತೆ : ಚನ್ನಗಿರಿ ಶಾಸಕ ಮಾಡಾಳು ಕಟ್ಟಪ್ಪಣೆ

    ಚನ್ನಗಿರಿ: ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಹೆಚ್ಚು ಹಾನಿ ಸಂಭವಿಸಿದ್ದು, ಕೃಷಿಕರ ನೆರವಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸಬೇಕು. ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಸೂಚಿಸಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪರಿಹಾರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಬಾರಿ 122 ಮಿ.ಮೀ ಮಳೆ ಜಾಸ್ತಿಯಾಗಿ 3100 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಸಂಪೂರ್ಣ ಹಾಳಾಗಿದೆ ಎಂದರು.

    ಜೀವನೋಪಾಯಕ್ಕಾಗಿ ಜಮೀನು ನಂಬಿದವರ ಗತಿ ಏನಾಗಬೇಕು. ಸಾಲ ಮಾಡಿ ಬೀಜ, ಗೊಬ್ಬರ ತಂದು ಬೆಳೆದ ಬೆಳೆ ಕೈಗೆ ಸಿಗದೆ ಹೋದರೆ ಕುಟುಂಬದ ಕಷ್ಟವನ್ನು ನೋಡುವವರು ಯಾರು? ಕ್ಷೇತ್ರದಲ್ಲಿನ ರೈತರಿಗೆ ತೊಂದರೆ ಆಗಬಾರದು. ಹಾನಿ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿ ಪ್ರತಿ ಹೆಕ್ಟೇರ್​ಗೆ 13,600 ರೂ. ಪರಿಹಾರವನ್ನು ಸರ್ಕಾರದಿಂದ ನೀಡಬೇಕು ಎಂದರು.

    ಗೊಬ್ಬರದ ಅಂಗಡಿಗಳಲ್ಲಿ ಮಾಲೀಕರು ಬೀಜ ಗೊಬ್ಬರವನ್ನು ನಿಗದಿಪಡಿಸಿದ ದರಕ್ಕಿಂತ ಅಧಿಕವಾಗಿ ಮಾರಾಟ ಮಾಡುತ್ತಿದ್ದಾರೆ. ಕಲಬೆರಕೆ ಗೊಬ್ಬರ ಮಾರಾಟ ಮಾಡುವ ಬಗ್ಗೆ ಮಾಹಿತಿಯಿದ್ದು, ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ ದರ ಪಟ್ಟಿಯನ್ನು ಹಾಕಿಸಿ ಹೆಚ್ಚಿಗೆ ಹಣವನ್ನು ಪಡೆಯುವ ಅಂಗಡಿಗಳ ಪರವಾನಗಿ ರದ್ದು ಮಾಡಬೇಕು ಎಂದು ತಿಳಿಸಿದರು.

    ಮಳೆಗೆ 372 ವಿದ್ಯುತ್ ಕಂಬಗಳು 4ಟಿಸಿ ಬಿದ್ದಿದೆ. 3.5 ಕಿಮೀ ಉದ್ದದ ವಿದ್ಯುತ್ ತಂತಿಗಳು ಕಡಿದು ಬಿದ್ದಿವೆ. ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಸರಿಪಡಿಸಬೇಕು ಎಂದರು.

    ಮನೆ ಕಳೆದು ಕೊಂಡವರಿಗೆ ತಕ್ಷಣ ಮನೆ ಒದಗಿಸಬೇಕು. ನಷ್ಟವಾಗಿರುವ ವರದಿ ಆಧಾರದ ಮೇಲೆ ಪರಿಹಾರ ನೀಡಬೇಕು. 165 ಮನೆಗಳಿಗೆ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ನೀರು ನುಗ್ಗಿದ ಮನೆಗಳಿಗೆ ತಕ್ಷಣ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಹೇಳಿದರು.

    ಜಿಲ್ಲಾ ಉಪ ವಿಭಾಗಧಿಕಾರಿ ತಿಮ್ಮಣ್ಣ ಹುಲ್ಲುಮನಿ. ಕೃಷಿ ಜಿಲ್ಲಾ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ತಹಸೀಲ್ದಾರ್ ಡಾ.ಪಟ್ಟರಾಜಗೌಡ ಇದ್ದರು.

    ಅಧಿಕ ಮಳೆ ಸುರಿದ ಪರಿಣಾಮ ಸಾಕಷ್ಟು ಅನಾಹುತವಾಗಿದೆ. ಗ್ರಾಮದಲ್ಲಿನ ಜನರನ್ನು ಪ್ರಕೃತಿ ವಿಕೋಪದಿಂದ ರಕ್ಷಿಸಲು ಪ್ರತಿ ಗ್ರಾಮದಲ್ಲಿ ಅಧಿಕಾರಿಗಳ ಟಾಸ್ಕ್​ಪೋರ್ಸ್ ರಚಿಸಬೇಕು. ಇನ್ನು ಮಳೆ ಬರುವ ಸಾಧ್ಯತೆ ಇದೆ. ತಕ್ಷಣ ಸಮಸ್ಯೆಗೆ ಜನ ಸಿಲುಕದಂತೆ ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಳ್ಳಬೇಕು.

    ಶಿವಾನಂದ ಕಾಪಶಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts