More

    ಗೆಲುವಿನ ನಗೆ ಬೀರಿದ ಸಿಎಸ್‌ಕೆ; ಸನ್‌ರೈಸರ್ಸ್‌ ಎದುರು 20 ರನ್ ಜಯ

    ದುಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಐಪಿಎಲ್-13ರಲ್ಲಿ ಗೆಲುವಿನ ಹಳಿ ಏರಲು ಯಶಸ್ವಿಯಾಯಿತು. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು 20 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಎಂಎಸ್ ಧೋನಿ ಬಳಗ ಲೀಗ್‌ನಲ್ಲಿ 2ನೇ ಬಾರಿ ಹ್ಯಾಟ್ರಿಕ್ ಸೋಲಿನಿಂದ ಪಾರಾದರೆ, ಸನ್‌ರೈಸರ್ಸ್‌ ಸತತ 2ನೇ ಸೋಲು ಕಂಡಿತು.

    ಟಾಸ್ ಜಯಿಸಿ ಟೂರ್ನಿಯಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ, ಸನ್‌ರೈಸರ್ಸ್‌ ಬೌಲರ್‌ಗಳ ಕರಾರುವಾಕ್ ದಾಳಿ ನಡುವೆಯೂ 6 ವಿಕೆಟ್‌ಗೆ 167 ರನ್ ಕಲೆಹಾಕಿತು. ಪ್ರತಿಯಾಗಿ ಕೇನ್ ವಿಲಿಯಮ್ಸನ್ (57 ರನ್, 39 ಎಸೆತ, 7 ಬೌಂಡರಿ) ಹೋರಾಟದ ಹೊರತಾಗಿಯೂ ಸನ್‌ರೈಸರ್ಸ್‌ ತಂಡ 8 ವಿಕೆಟ್‌ಗೆ 147 ರನ್ ಗಳಿಸಲಷ್ಟೇ ಶಕ್ತವಾಯಿತು.

    ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಸನ್‌ರೈಸರ್ಸ್‌ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭದಲ್ಲೇ ಡೇವಿಡ್ ವಾರ್ನರ್ (9) ಸ್ಯಾಮ್ ಕರ‌್ರನ್ ಎಸೆತದಲ್ಲಿ ಅವರಿಗೇ ಕ್ಯಾಚ್ ನೀಡಿದರೆ, ಬಳಿಕ ಬಂದ ಮನೀಷ್ ಪಾಂಡೆ (4) ನಿರಾಸೆ ಅನುಭವಿಸಿದರು. ಬಳಿಕ ಜತೆಯಾದ ಜಾನಿ ಬೇರ್‌ಸ್ಟೋ (23) ಹಾಗೂ ಕೇನ್ ವಿಲಿಯಮ್ಸನ್ ಜೋಡಿ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿತು. ಬೇರ್‌ಸ್ಟೋ ಅವರನ್ನು ಬೌಲ್ಡ್ ಮಾಡುವ ಮೂಲಕ ಜಡೇಜಾ ಈ ಜೋಡಿಗೆ ಬ್ರೇಕ್ ಹಾಕಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ, ವಿಲಿಯಮ್ಸನ್ ಏಕಾಂಗಿ ನಿರ್ವಹಣೆ ಮುಂದುವರಿಸಿದರು. ಪ್ರಿಯಂ ಗಾರ್ಗ್ (16) ಜತೆಗೂಡಿ 4ನೇ ವಿಕೆಟ್‌ಗೆ 40 ರನ್ ಪೇರಿಸಿದರು. ಕೆಲಹೊತ್ತು ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಗೆಲುವಿಗೆ ಹೋರಾಡಿದ ವಿಲಿಯಮ್ಸನ್, ಕರ್ಣ್ ಶರ್ಮ ಎಸೆತದಲ್ಲಿ ಶಾರ್ದೂಲ್‌ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಸನ್‌ರೈಸರ್ಸ್‌ ಸೋಲು ಕೂಡ ಖಚಿತಗೊಂಡಿತು. ಬಳಿಕ ಡೆತ್ ಓವರ್‌ಗಳಲ್ಲಿ ಸಿಎಸ್‌ಕೆ ಬೌಲರ್‌ಗಳು ಕಡಿವಾಣ ಹೇರಿದರು.

    ರಾಯುಡು-ವ್ಯಾಟ್ಸನ್ ಆಸರೆ: ಸಂದೀಪ್ ಶರ್ಮ ಮೊನಚಾದ ದಾಳಿಯಿಂದ ತತ್ತರಿಸಿದ್ದ ಸಿಎಸ್‌ಕೆ ತಂಡಕ್ಕೆ ಶೇನ್ ವ್ಯಾಟ್ಸನ್ (42ರನ್, 38 ಎಸೆತ, 1 ಬೌಂಡರಿ, 3 ಸಿಕ್ಸರ್) ಹಾಗೂ ಅಂಬಟಿ ರಾಯುಡು (41ರನ್, 34 ಎಸೆತ, 3 ಬೌಂಡರಿ, 2 ಸಿಕ್ಸರ್) ಜೋಡಿ ಕೆಲಕಾಲ ವಿಕೆಟ್ ಕಾಯ್ದುಕೊಳ್ಳುವ ಮೂಲಕ ಆಸರೆಯಾಯಿತು. ಈ ಜೋಡಿ 3ನೇ ವಿಕೆಟ್‌ಗೆ 81 ರನ್ ಕಲೆಹಾಕಿ ಇನಿಂಗ್ಸ್‌ಗೆ ಚೇತರಿಕೆ ನೀಡಿತು. ಸನ್‌ರೈಸರ್ಸ್‌ ತಂಡಕ್ಕೆ ಸವಾಲಾಗಿದ್ದ ಈ ಜೋಡಿಗೆ ಖಲೀಲ್ ಅಹ್ಮದ್ ಬ್ರೇಕ್ ಹಾಕಿದರು. ದೊಡ್ಡ ಹೊಡೆತಕ್ಕೆ ಮುಂದಾದ ರಾಯುಡು, ವಾರ್ನರ್‌ಗೆ ಕ್ಯಾಚ್ ನೀಡಿದರು. ಮರು ಓವರ್‌ನಲ್ಲೇ ವ್ಯಾಟ್ಸನ್ ಕೂಡ ನಟರಾಜನ್‌ಗೆ ವಿಕೆಟ್ ನೀಡಿದರು. ಡೆತ್ ಓವರ್‌ಗಳಲ್ಲಿ ಎಂಎಸ್ ಧೋನಿ (21 ರನ್, 13 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ರವೀಂದ್ರ ಜಡೇಜಾ (25*ರನ್, 10ಎಸೆತ, 3 ಬೌಂಡರಿ, 1 ಸಿಕ್ಸರ್) ಜೋಡಿ ಕೆಲಕಾಲ ಸ್ಫೋಟಿಸಿ ಬೇರ್ಪಟ್ಟಿತು. ಖಲೀಲ್ ಅಹ್ಮದ್ ಎಸೆದ ಅಂತಿಮ ಓವರ್‌ನಲ್ಲಿ ಜಡೇಜಾ, ತಲಾ ಒಂದು ಬೌಂಡರಿ, ಸಿಕ್ಸರ್ ಸಹಿತ 15 ಕಸಿದು ತಂಡದ ಮೊತ್ತವನ್ನು 165ರ ಗಡಿ ದಾಟಿಸಿದರು. ಸನ್‌ರೈಸರ್ಸ್‌ ಪರ ಸಂದೀಪ್ ಶರ್ಮ, ಖಲೀಲ್ ಅಹ್ಮದ್ ಹಾಗೂ ಟಿ.ನಟರಾಜನ್ ತಲಾ 2 ವಿಕೆಟ್ ಕಬಳಿಸಿದರು.

    ಚೆನ್ನೈ ಸೂಪರ್ ಕಿಂಗ್ಸ್: 6 ವಿಕೆಟ್‌ಗೆ 167 (ಸ್ಯಾಮ್ ಕರ‌್ರನ್ 31, ಶೇನ್ ವ್ಯಾಟ್ಸನ್ 42, ಅಂಬಟಿ ರಾಯುಡು 31, ಎಂಎಸ್ ಧೋನಿ 21, ರವೀಂದ್ರ ಜಡೇಜಾ 25, ಖಲೀಲ್ ಅಹಮದ್ 45ಕ್ಕೆ 2, ಸಂದೀಪ್ ಶರ್ಮ 19ಕ್ಕೆ 2, ನಟರಾಜನ್ 41ಕ್ಕೆ 2), ಸನ್‌ರೈಸರ್ಸ್‌: 8 ವಿಕೆಟ್‌ಗೆ 147 (ಬೇರ್‌ಸ್ಟೋ 23, ವಿಲಿಯಮ್ಸನ್ 57, ರಶೀದ್ ಖಾನ್ 14, ಸ್ಯಾಮ್ ಕರ‌್ರನ್ 18ಕ್ಕೆ 1, ಕರ್ಣ್ ಶರ್ಮ 37ಕ್ಕೆ 2, ಬ್ರಾವೊ 25ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts