More

    ಇಂದು ಸಿಎಸ್‌ಕೆ-ರಾಜಸ್ಥಾನ ಮುಖಾಮುಖಿ

    ಮುಂಬೈ: ಮೊದಲ ಪಂದ್ಯದಲ್ಲಿ ಎಡವಿದರೂ 2ನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿರುವ ತಂಡಗಳಾದ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್-14ರಲ್ಲಿ ಸೋಮವಾರ ಮುಖಾಮುಖಿ ಆಗಲಿವೆ. ಗೆಲುವಿನ ಲಯವನ್ನು ಕಾಯ್ದುಕೊಳ್ಳಲು ಉಭಯ ತಂಡಗಳು ಹೋರಾಡಲಿವೆ. ಎಂಎಸ್ ಧೋನಿ ಅವರ ಅನುಭವಿ ಸಾರಥ್ಯದ ತಂಡಕ್ಕೆ ಸಂಜು ಸ್ಯಾಮ್ಸನ್ ಅವರ ಯುವ ನಾಯಕತ್ವದ ತಂಡ ಯಾವ ರೀತಿ ಸವಾಲೊಡ್ಡಲಿದೆ ಎಂಬ ಕುತೂಹಲ ಮೂಡಿದೆ.
    ಸಿಎಸ್‌ಕೆ ತಂಡ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಾಗ, ಕಳೆದ ಆವೃತ್ತಿಯ ನೀರಸ ನಿರ್ವಹಣೆ ಪುನರಾವರ್ತನೆ ಆಗಲಿದೆಯೇ ಎಂಬ ಅನುಮಾನ ಮೂಡಿತ್ತು. ಆದರೆ 2ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸುಲಭ ಗೆಲುವು ದಾಖಲಿಸುವ ಮೂಲಕ ಧೋನಿ ಬಳಗ ಪುಟಿದೆದ್ದಿದೆ. ಅತ್ತ ರಾಜಸ್ಥಾನ ತಂಡವೂ ಪಂಜಾಬ್ ಕಿಂಗ್ಸ್ ವಿರುದ್ಧ ಕೊನೇ ಎಸೆತದವರೆಗೂ ಹೋರಾಡಿದರೂ, ಬೃಹತ್ ಮೊತ್ತವನ್ನು ಬೆನ್ನಟ್ಟುವ ಸನಿಹದಲ್ಲಿ ಮುಗ್ಗರಿಸಿತ್ತು. ಆದರೆ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಾಣುವ ಭೀತಿಯಿಂದ ದಿಟ್ಟ ಪ್ರತಿಹೋರಾಟ ನಡೆಸಿ ಗೆದ್ದಿರುವುದು ತಂಡದ ವಿಶ್ವಾಸವನ್ನು ಹಿಗ್ಗಿಸಿದೆ.
    ಧೋನಿ ಬಳಗಕ್ಕೆ ಮೊದಲ ಪಂದ್ಯದಲ್ಲಿ ಬೌಲಿಂಗ್ ವಿಭಾಗವೇ ಹಿನ್ನಡೆಯಾಗಿತ್ತು. ಆದರೆ 2ನೇ ಪಂದ್ಯದಲ್ಲಿ ಅದುವೇ ಬಲವಾಗಿ ಮಾರ್ಪಟ್ಟರುವುದು ಗಮನಾರ್ಹ. ದೀಪಕ್ ಚಹರ್ ಮಾರಕ ಬೌಲಿಂಗ್ ದಾಳಿಯಿಂದ ಪಂಜಾಬ್‌ನ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಕಟ್ಟಿಹಾಕಿರುವುದು ಅಮೋಘ ಸಾಧನೆಯಾಗಿದೆ. ಅನುಭವಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ವಾಪಸಾತಿಯ ಬಳಿಕ ಚೆನ್ನೈ ತಂಡದ ಬ್ಯಾಟಿಂಗ್ ವಿಭಾಗ ಕಳೆದ ಆವೃತ್ತಿಗಿಂತ ಸಾಕಷ್ಟು ಬದಲಾವಣೆ ಕಂಡಿದೆ. ಆದರೆ ನಾಯಕ ಎಂಎಸ್ ಧೋನಿ ಬ್ಯಾಟಿಂಗ್‌ನಲ್ಲೂ ಶೀಘ್ರ ಲಯ ಕಂಡುಕೊಳ್ಳುವ ಅಗತ್ಯವಿದೆ.

    *ವಿಶ್ವಾಸದಲ್ಲಿ ರಾಯಲ್ಸ್
    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಾಜಸ್ಥಾನ ತಂಡ ಆಡಿದ ಮೊದಲೆರಡೂ ಪಂದ್ಯಗಳಲ್ಲಿ ಗೆದ್ದು ಬೀಗಬೇಕಾಗಿತ್ತು. ಆದರೆ ಮೊದಲ ಪಂದ್ಯದಲ್ಲಿ ನಾಯಕ ಸಂಜು ಸ್ಯಾಮ್ಸನ್ ಶತಕದ ಹೋರಾಟಕ್ಕೆ ಸ್ವಲ್ಪದರಲ್ಲಿ ಗೆಲುವು ತಪ್ಪಿತ್ತು. ಅಂತಿಮ ಓವರ್‌ನ 5ನೇ ಎಸೆತದಲ್ಲಿ ಸ್ಯಾಮ್ಸನ್ ಸ್ಟ್ರೈಕ್ ಬಿಟ್ಟುಕೊಡದಿರುವುದನ್ನು ಸಮರ್ಥಿಸುತ್ತ ಬಂದಿದ್ದರೂ, ಆಲ್ರೌಂಡರ್ ಕ್ರಿಸ್ ಮಾರಿಸ್ ತಮ್ಮ ತಾಕತ್ತು ಏನೆಂಬುದನ್ನು ಕಳೆದ ಪಂದ್ಯದಲ್ಲಿ ನಿರೂಪಿಸಿದ್ದಾರೆ. ಡೆಲ್ಲಿ ವಿರುದ್ಧ ಡೇವಿಡ್ ಮಿಲ್ಲರ್ ನಡೆಸಿದ ಹೋರಾಟದ ಮುಂದುವರಿದ ಭಾಗವಾಗಿ ಮಾರಿಸ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಸಲರಾಗಿದ್ದರು. ವಿದೇಶಿ ಅಟಗಾರರೇ ತಂಡ ಬಲ ಎಂಬುದು ಇದರಿಂದ ನಿರೂಪಿಸಲ್ಪಟ್ಟಿದೆ. ರಾಹುಲ್ ತೆವಾಟಿಯಾ ಕಳೆದ ಆವೃತ್ತಿಯ ಸಾಧನೆಯನ್ನು ಪುನರಾವರ್ತಿಸಿದರೆ ರಾಯಲ್ಸ್ ಮತ್ತಷ್ಟು ಬಲಿಷ್ಠವಾಗಲಿದೆ.

    *ಚೆನ್ನೈ ಸೂಪರ್‌ಕಿಂಗ್ಸ್: ಕಳೆದ ಪಂದ್ಯದಲ್ಲಿ ತಂಡದ ಬೌಲಿಂಗ್ ವಿಭಾಗದ ನಿರ್ವಹಣೆ ಅಮೋಘವಾಗಿತ್ತು. ಇದೀಗ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಕ್ವಾರಂಟೈನ್‌ನಿಂದ ಹೊರಬಂದಿರುವುದರಿಂದ ಆಡುವ ಬಳಗಕ್ಕೆ ಸೇರ್ಪಡೆಗೊಂಡರೆ ಬೌಲಿಂಗ್ ವಿಭಾಗ ಇನ್ನಷ್ಟು ಬಲಿಷ್ಠವಾಗಲಿದೆ. ಸತತ 2ನೇ ಪಂದ್ಯದಲ್ಲೂ ನಿರಾಸೆ ಮೂಡಿಸಿರುವ ಋತುರಾಜ್ ಗಾಯಕ್ವಾಡ್ ಸ್ಥಾನಕ್ಕೆ ಕನ್ನಡಿಗ ರಾಬಿನ್ ಉತ್ತಪ್ಪ ಬಂದರೆ ಅಚ್ಚರಿ ಇಲ್ಲ.
    ಕಳೆದ ಪಂದ್ಯ: ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್ ಜಯ.

    *ರಾಜಸ್ಥಾನ ರಾಯಲ್ಸ್: ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ಗೈರಿನ ನಡುವೆಯೂ ಕಳೆದ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿರುವ ತಂಡದಲ್ಲಿ ಬದಲಾವಣೆಯ ಸಾಧ್ಯತೆ ಕಡಿಮೆ ಇದೆ. ವೈಲ್ಯದ ನಡುವೆಯೂ ಮನನ್ ವೊಹ್ರಾ ಮತ್ತೊಂದು ಅವಕಾಶ ಪಡೆಯುವ ನಿರೀಕ್ಷೆ ಇದೆ.
    ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 3 ವಿಕೆಟ್ ಜಯ.

    ಮುಖಾಮುಖಿ: 23
    ಸಿಎಸ್‌ಕೆ: 14
    ರಾಜಸ್ಥಾನ: 9
    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts