More

    ಕೋಟ್ಯಂತರ ರೂಪಾಯಿ ದುರುಪಯೋಗ: ಅನುಸೂಚಿತ ಜಾತಿ-ಪಂಗಡಗಳ ಅಭಿವೃದ್ಧಿ ಹಣ ಅನ್ಯಕಾರ್ಯಕ್ಕೆ ಬಳಕೆ

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ನೀರಾವರಿ ನಿಗಮಗಳಲ್ಲಿ ಬೋಗಸ್ ಬಿಲ್ ಸೃಷ್ಟಿಮಾಡಿ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಪ್ರಕರಣ ಒಂದೊಂದಾಗಿ ಬಯಲಾಗುತ್ತಿರುವಂತೆಯೇ ಇನ್ನೊಂದು ರೀತಿಯ ನಿಯಮ ಉಲ್ಲಂಘನೆ ಬೆಳಕಿಗೆ ಬಂದಿದೆ.

    ಅನುಸೂಚಿತ ಜಾತಿ, ಅನಸೂಚಿತ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ನೂರಾರು ಕೋಟಿ ರೂಪಾಯಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ. ಇದೇ ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಾಗೂ ನೀರಾವರಿ ನಿಗಮಗಳ ಮುಖ್ಯ ಅಧಿಕಾರಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

    ಅನುಸೂಚಿತ ಜಾತಿ, ಅನಸೂಚಿತ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದು ವಿಧಾನಸಭೆ ಅಧಿವೇಶನದಲ್ಲೂ ಸಾಕಷ್ಟು ಚರ್ಚೆಯಾಗಿತ್ತು. ಆ ರೀತಿ ಆಗಿಲ್ಲ ಎಂದು ಸರ್ಕಾರ ವಾದಿಸಿತ್ತು. ಇದೀಗ ದಾಖಲೆ ಸಹಿತವಾಗಿ ಪತ್ತೆಯಾಗಿದ್ದು, ಸೂಕ್ತ ವೇದಿಕೆಗಳಲ್ಲಿ ಉತ್ತರಿಸಬೇಕಾಗಿ ಬಂದಿದೆ.

    ಕೃಷ್ಣ ಭಾಗ್ಯ ಜಲನಿಗಮ ನಿಯಮಿತದಲ್ಲಿ ಭೂ ಸ್ವಾಧೀನ ಮತ್ತು ಪುನರ್ ವಸತಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅನುದಾನ ಖರ್ಚು ಮಾಡದೇ ಆ ಅನುದಾನವನ್ನು ಬೇರೆ ಕಾಮಗಾರಿಗಳ ಗುತ್ತಿಗೆದಾರರಿಗೆ ಪಾವತಿಸಲು ಅಡ್ಡ ದಾರಿ ಹಿಡಿದಿರುವ ಉದಾಹರಣೆಗಳು ಕಂಡುಬಂದಿದೆ. ಕಾಯ್ದೆಯ ಪ್ರಕಾರ ಈ ರೀತಿ ವರ್ಗಾವಣೆಗೆ ಅವಕಾಶವಿಲ್ಲ.

    ಕರ್ನಾಟಕ ಪಾರದರ್ಶಕತೆ ಅಧ್ಯಾದೇಶ ಅಧ್ಯಾಯ-02 ಕ್ರ.ಸಂ.13ರ ಅಡಿಯಲ್ಲಿ ವಿನಾಯಿತಿ ನೀಡುವ ಅವಕಾಶ ಬಳಸಿಕೊಂಡು ದುರುಪಯೋಗ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ. ಮೇಲ್ನೋಟಕ್ಕೆ ಸರ್ಕಾರ ಈ ವರ್ಗಕ್ಕೆ ಹಣ ತೆಗೆದಿಡುವುದು, ಜನರ ಗಮನಕ್ಕೆ ತರುವುದು ಬಳಿಕ ಬೇರೆ ಉದ್ದೇಶಕ್ಕೆ ಬಳಸುವುದು ಎಂಬಂತಾಗಿದೆ.

    ಅನುಸೂಚಿತ ಜಾತಿ, ಅನಸೂಚಿತ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ನೂರಾರು ಕೋಟಿ ಹಣ ವರ್ಗಾಯಿಸಲಾಗಿರುವ ವಿಚಾರದಲ್ಲಿ ಕೂಡಲೇ ವಿಚಾರಣೆ ನಡೆಸಿ ಕ್ರಮಕೈಗೊಂಡು ವರದಿ ನೀಡುವಂತೆ ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿಯವರು ಕೆಲ ವಾರಗಳ ಹಿಂದೆಯಷ್ಟೇ ಭಾರಿ ನೀರಾವರಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗೆ ಟಿಪ್ಪಣಿ ಮಾಡಿದ್ದಾರೆ. ಇದು ಈ ಬೆಳವಣಿಗೆಗಳಿಗೆ ಪುಷ್ಟಿ ನೀಡುವಂತಿದೆ.

    ಇನ್ನೊಂದೆಡೆ, ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಆಯೋಗವು ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿಯವರಿಗೆ ಸಮನ್ಸ್ ನೀಡಿದೆ. 300 ಕೋಟಿ ರೂಪಾಯಿಯಷ್ಟು ಹಣವನ್ನು ಸಂಬಂಧಪಡದ ಕಾಮಗಾರಿಗೆ ಬಳಸಿಕೊಂಡಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಈ ರೀತಿ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿದ್ದರ ಹಿನ್ನೆಲೆಯಲ್ಲಿ ಜವಾಬ್ದಾರಿ ಹೊರಿಸಿ ನೋಟಿಸ್ ಜಾರಿ ಮಾಡಲಾಗಿದೆ.

    ಈ ನಡುವೆ ಇಲಾಖೆಯೊಳಗೆ ತನಿಖೆ ನಡೆಸದಂತೆ ಒತ್ತಡ ಹೇರಿ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತು ಕೇಳಿಬಂದಿದೆ. ಒಂದು ಪ್ರಕರಣ ಹೊರತೆಗೆದು ತಾತ್ವಿಕ ಅಂತ್ಯ ಕಾಣಿಸಿದರೆ ಮತ್ತೆ ಇನ್ನಷ್ಟು ಕೆದಕಬಹುದು, ಹಳೆಯದೆಲ್ಲ ಕೆದುಕುತ್ತಾ ಕೂರುವುದು ಸರಿಯಲ್ಲ, ಹೀಗಾಗಿ ಇಷ್ಟಕ್ಕೆ ಮುಗಿಸುವ ಆಲೋಚನೆ ಅಧಿಕಾರಿಗಳದ್ದಾಗಿದೆ.

    ಬದಲಾವಣೆ ಉದ್ದೇಶ ನಿಗೂಢ

    ಅನುಸೂಚಿತ ಜಾತಿ, ಅನಸೂಚಿತ ಪಂಗಡಗಳ ಅಭಿವೃದ್ಧಿಗೆಂದು ಮೀಸಲಾದ ಹಣವನ್ನು ಆ ವರ್ಗಕ್ಕೆ ಬಳಸಲು ಯೋಜನೆ ಕೈಗೆತ್ತಿಕೊಂಡರೆ 10-15 ಲಕ್ಷ ರೂ. ರಸ್ತೆ ಕಾಮಗಾರಿ ನಡೆಸಬೇಕು, ಅದು ವೈಯಕ್ತಿಕವಾಗಿ ಲಾಭಕರವಲ್ಲ. ಅದರ ಬದಲು ಈ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿ 50-100 ಕೋಟಿ ರೂ.ಕಾಮಗಾರಿ ನಡೆಸಿದರೆ ಹೆಚ್ಚಿನ ಲಾಭವಾಗಲಿದೆ. ಜತೆಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಜನರು ಇರುವೆಡೆ ರಸ್ತೆ ಮಾಡಿದರೆ ಮಾತ್ರ ಹಣ ಬಿಡುಗಡೆ ಮಾಡಬಹುದು, ಇಲ್ಲವಾದರೆ ಬಿಲ್ ಮಾಡಿಕೊಳ್ಳುವುದು ಅಷ್ಟು ಸಲೀಸಲ್ಲ. ಆದರೆ ಕಾಲುವೆ ನಿರ್ಮಾಣ, ಕಾಲುವೆ ಅಭಿವೃದ್ಧಿ, ಹೂಳೆತ್ತುವ ನೆಪದಲ್ಲಿ ಬೇರೆ ಕಡೆ ವರ್ಗಾಯಿಸಿದರೆ ಯಾರ ಗಮನಕ್ಕೂ ಬಾರದು ಎಂಬ ಸಾಮಾನ್ಯ ವಾದ ಜಲಸಂಪನ್ಮೂಲ ಇಲಾಖೆಯಲ್ಲೇ ಇದೆ.

    ಕಾನೂನಲ್ಲಿ ಸ್ಪಷ್ಟತೆ ಇಲ್ಲ

    ಅನುಸೂಚಿತ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಹಣ ಮೀಸಲಿಡುವುದು ಸರಿ, ಆದರೆ ಅದರ ಬಳಕೆ ವಿಚಾರದಲ್ಲಿ ಸರಿಯಾದ ಮಾರ್ಗದರ್ಶನವಿಲ್ಲ ಎಂದು ಅಧಿಕಾರಿಗಳೇ ಹೇಳುತ್ತಾರೆ. ಈ ವರ್ಗದವರು ಹೆಚ್ಚಿರುವ ಪ್ರದೇಶದಲ್ಲಿ ಸಾಮಾನ್ಯ ಅಭಿವೃದ್ಧಿ ಕೆಲಸಕ್ಕೆ ಬಳಸಲು ಅವಕಾಶವಿದೆ. ಒಂದು ವೇಳೆ ಕಡಿಮೆ ಪ್ರಮಾಣದಲ್ಲಿ ಇವರ ಸಂಖ್ಯೆ ಇದ್ದರೆ ಅಲ್ಲಿ ಬಳಸಲು ಅವಕಾಶವಿಲ್ಲ. ಇಂತಹ ಸೂಚನೆಗಳು ಸರಿಯಾದ ರೀತಿಯಲ್ಲಿ ಕೆಲಸ ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ವಿಚಾರ ಸಾಕಷ್ಟು ಚರ್ಚೆಯಾಗಿ ಸ್ಪಷ್ಟತೆ ಬೇಕಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಇಂಜಿನಿಯರ್ ಒಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

    ಹಿಜಾಬ್​-ಕೇಸರಿ ಸಂಘರ್ಷದ ನಡುವೆ ಇದೇನಿದು ಮತ್ತೊಂದು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts