More

    ಟೀಕೆ ಒಪ್ಪಿಕೊಳ್ಳದವರು ಬೆಳೆಯಲ್ಲ- ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಅಭಿಮತ

    ರಾಯಚೂರು: ಟೀಕೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮನೋಭಾವ ಸಮಾಜ ಮತ್ತು ವ್ಯಕ್ತಿಗಳಿಗೆ ಇರಬೇಕಿದ್ದು, ಟೀಕೆಗಳನ್ನು ಒಪ್ಪಿಕೊಳ್ಳದವರು ಬೆಳೆಯಲು ಸಾಧ್ಯವಿಲ್ಲ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಹೇಳಿದರು.

    ಪತ್ರಿಕಾ ಭವನದಲ್ಲಿ ರಾಯಚೂರು ರಿಪೋರ್ಟರ್ಸ್‌ ಗಿಲ್ಡ್ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಟೀಕೆಗಳು ವ್ಯಕ್ತಿಗತವಾಗಿ ಇರಬಾರದು. ಹಿಂದೆ ಸತ್ಯವಾದ ಮತ್ತು ಸಮಾಜದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸುದ್ದಿಗಳಿರುತ್ತಿದ್ದವು. ಆದರೆ, ಇಂದು ವ್ಯಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸುದ್ದಿಗಳು ಬರುತ್ತಿವೆ. ತಾಂತ್ರಿಕತೆ ಬೆಳೆದಂತೆಲ್ಲ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದರು.

    ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯ ಜಾಗಟಗಲ್ ಮಾತನಾಡಿ, ಸದಾ ಸುದ್ದಿಯ ಗಡಿಬಿಡಿಯಲ್ಲಿರುವ ಮಾಧ್ಯಮ ಪ್ರತಿನಿಧಿಗಳು ಇನ್ನಿತರ ಚಟುವಟಿಕೆಗಳಲ್ಲಿ ತೊಡಗಬೇಕು ಎನ್ನುವ ದೃಷ್ಟಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಮಾತ್ರ ಸಿಮೀತಗೊಳಿಸದೆ ಸಪ್ತಾಹ ರೀತಿಯಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ತಂತ್ರಜ್ಞಾನ ಬೆಳೆದಂತೆ ಮಾಧ್ಯಮ ಕ್ಷೇತ್ರಕ್ಕೆ ಅನುಕೂಲವಾಗಿರುವುದರ ಜತೆಗೆ ಪತ್ರಕರ್ತರು ಸಂಕಷ್ಟಕ್ಕೆ ಒಳಗಾಗುತ್ತಿರುವುದು ನಡೆಯುತ್ತಿದೆ. ಮಾಧ್ಯಮ ಕ್ಷೇತ್ರದಲ್ಲಿಯೂ ಈಗ ದ್ವಿಮುಖ ಸಂವಹನ ನಡೆಯುತ್ತಿದೆ. ಪತ್ರಿಕಾ ಸ್ವಾತಂತ್ರೃ ಬಲವರ್ಧನೆಗೆ ಸರ್ಕಾರ 3ನೇ ಆಯೋಗ ರಚನೆಗೆ ಮುಂದಾಗಬೇಕು ಎಂದರು.

    ಈ ಸಂದರ್ಭದಲ್ಲಿ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತ ಬಸವರಾಜ ನಾಗಡದಿನ್ನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts