More

    ಡಾ. ಸರ್ಜಿ ರಾಜಕೀಯದಲ್ಲಿ ಎಲ್‌ಕೆಜಿ

    ಶಿವಮೊಗ್ಗ: ನನ್ನ ವಿರುದ್ಧ ಟೀಕೆ ಮಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ. ಧನಂಜಯ ಸರ್ಜಿ ರಾಜಕೀಯಲ್ಲಿ ಇನ್ನೂ ಎಲ್‌ಕೆಜಿ. ಅವರು ಮಾಡುವ ಆಪರೇಷನ್ ಬೇರೆ, ರಾಜಕೀಯದ ಆಪರೇಷನ್ ಬೇರೆ. ಅವರಿನ್ನೂ ರಾಜಕೀಯದಲ್ಲಿ ಬಹಳ ರಾಗಿ ಬೀಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕಾಲೆಳೆದರು.

    ನಾನು ಬಿಜೆಪಿಯ ದೊಡ್ಡ ಫಲಾನುಭವಿ ಎಂದಿದ್ದಾರೆ. ಫಲಾನುಭವಿಯಾಗಲು ನಾನು ಬಹಳ ಕಷ್ಟಪಟ್ಟಿದ್ದೇನೆ. ನಾನು ಬರಗಾಲದಲ್ಲಿ ಬಿತ್ತಿ ಬೆಳೆದವನು. ಸರ್ಜಿ ಈಗ ನೀರಾವರಿ ಜಾಗದಲ್ಲಿದ್ದಾರೆ. ನಾನು ದೇಹವೊಂದು ಕಡೆ, ಮನಸ್ಸು ಇನ್ನೊಂದೆಡೆ ಇಟ್ಟುಕೊಂಡು ಕೆಲಸ ಮಾಡಲ್ಲ. ನಾನು ಎಲ್ಲಿದ್ದರೂ ಅಲ್ಲಿ ಬಲವಾಗಿ ನೆಲೆಯೂರಿ ಬಡಿದಾಡುತ್ತೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಹಾಗೂ ಡಾ. ಧನಂಜಯ ಸರ್ಜಿ ನನ್ನ ವಿರುದ್ಧ ಟೀಕೆ ಮಾಡಿದ್ದಾರೆ. ಆದರೆ ಯಡಿಯೂರಪ್ಪ ವಿರುದ್ಧ ಕೀಳು ಪದ ಬಳಕೆ ಮಾಡಿದ ಈಶ್ವರಪ್ಪ ಬಗ್ಗೆ ಮಾತನಾಡದೇ ಇರುವುದು ಆಶ್ಚರ್ಯ ಮೂಡಿಸಿದೆ. ಯಡಿಯೂರಪ್ಪ ಅವರ ಪರವಾಗಿ ಮಾತನಾಡಿದ್ದು ನಾನೊಬ್ಬನೇ ಎಂದರು.
    ಕೆ.ಎಸ್.ಈಶ್ವರಪ್ಪ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ. ಈಶ್ವರಪ್ಪ ಬಿಜೆಪಿಯವರ ಬೆನ್ನು ಬಿದ್ದಿದ್ದಾರೆ. ಅವರಿಂದ ರಕ್ಷಿಸಿಕೊಳ್ಳಲು ಬಿಜೆಪಿಯವರು ಮತ್ತಷ್ಟು ಕ್ರಿಯಾಶೀಲರಾಗಬೇಕಿದೆ. ರಾಜ್ಯ ಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ಆಯನೂರು ಮಂಜುನಾಥ್ ವಿಶ್ಲೇಷಿಸಿದರು.
    ಎಸ್.ಪಿ.ದಿನೇಶ್ ಕಾಂಗ್ರೆಸ್‌ನ ನಿಷ್ಠಾವಂತರು. ಇದೇ ಪಕ್ಷದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರು ನೈಋತ್ಯ ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷ ನನಗೆ ಟಿಕೆಟ್ ಘೋಷಿಸಿರುವುದರಿಂದ ಸಹಜವಾಗಿಯೇ ಅವರಿಗೆ ಬೇಸರವಾಗಿದೆ. ಅವರೊಂದಿಗೆ ಮಾತನಾಡಿ ಮನವೊಲಿಸುತ್ತೇನೆ ಎಂದರು.
    ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಜಿ.ಪದ್ಮನಾಭ್, ಎಸ್.ಪಿ.ಪಾಟೀಲ್, ಕೃಷ್ಣ, ದಿವಾಕರ, ಆಯನೂರು ಸಂತೋಷ್, ರುದ್ರೇಶ್, ಜಗದೀಶ್ ಗೌಡ, ಆಯನೂರು ಸಂತೋಷ, ಹಿರಣ್ಣಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts