More

    ಎಇಪಿಎಸ್ ಮೂಲಕ ಗ್ರಾಹಕರ ಖಾತೆಗೆ ಕನ್ನ!

    ಕಿರುವಾರ ಎಸ್.ಸುದರ್ಶನ್ ಕೋಲಾರ
    ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಳವಡಿಸಿರುವ ಕಾವೇರಿ ತಂತ್ರಾಂಶದಲ್ಲಿ ಥಂಬ್ ನೀಡಿದವರ ಖಾತೆಯಿಂದ ಹಣ ಎಗರಿಸುತ್ತಿರುವ ಆರೋಪ ಕೇಳಿ ಬಂದಿದೆ. ಇದರಿಂದಾಗಿ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ.

    ನಗರದ ಉಪ ನೋಂದಣಿಧಿಕಾರಿ ಕಚೇರಿಯಲ್ಲಿ ಜಮೀನು, ನಿವೇಶನ ಸೇರಿದಂತೆ ಆಸ್ತಿಯನ್ನು ಬೇರೆಯವರಿಗೆ ನೋಂದಣಿ ಮಾಡುವುದು, ಖರೀದಿ ಮಾಡಲು ಕಾವೇರಿ-2 ತಂತ್ರಾಶದಲ್ಲಿ ಮಾರುವವರು ಮತ್ತು ಕೊಂಡುಕೊಳ್ಳುವವರು ಥಂಬ್ ನೀಡಬೇಕು. ಇದಾದ ನಂತರ ಗ್ರಾಹಕರ ಖಾತೆಯಿಂದ ಹಣ ಡ್ರಾ ಆಗಿದೆ. ಸಂಬಂಧಿಸಿದ ಬ್ಯಾಂಕ್‌ಗೆ ಹೋಗಿ ಅಧಿಕಾರಿಗಳನ್ನು ಕೇಳಿದಾಗ ಇದು ಎಇಪಿಎಸ್ ಮೂಲಕ ಡ್ರಾ ಆಗಿದೆ ಎಂದು ತಿಳಿಸುತ್ತಾರೆ. ಆನಂತರ ಸಬ್‌ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳನ್ನು ಕೇಳಿದರೆ ಸೈಬರ್ ವಂಚನೆ ಎಂದು ಹೇಳುತ್ತಾರೆ. ಇದರಿಂದಾಗಿ ಹೋಗಿರುವ ಹಣ ವಾಪಸ್ ಪಡೆದುಕೊಳ್ಳಲು ಆಗದೆ ಗ್ರಾಹಕರು ವಂಚನೆಗೊಳಗಾಗಬೇಕಾಗುತ್ತಿದೆ.
    ಆಸ್ತಿ ಖರೀದಿ, ಮಾರಾಟ, ವಿಭಾಗ ಪತ್ರ ನೋಂದಣಿಗಾಗಿ ಕಾವೇರಿ ತಂತ್ರಾಂಶದಲ್ಲಿ ಆಧಾರ್ ನಂಬರ್ ಲಿಂಕ್, ಥಂಬ್ ನೀಡಬೇಕು. ನೋಂದಣಿಗೆ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗುತ್ತದೆ. ಜತೆಗೆ ಥಂಬ್ ದಾಖಲೆಗಳಲ್ಲಿ ಮುದ್ರಣವಾಗಿರುತ್ತದೆ.

    ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಥಂಬ್ ಕೊಟ್ಟ ಮೇಲೆ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿ ವಂಚಿಸುತ್ತಿರುವ ಪ್ರಕರಣಗಳು ಜರುಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ರೀತಿ ಹಣ ಡ್ರಾ ಮಾಡಿ ವಂಚಿಸಿರುವ ಪ್ರಕರಣಗಳು ಜಿಲ್ಲೆಯಲ್ಲಿ 2 ದಾಖಲಾಗಿವೆ. ವಿವಿಧ ರೀತಿಯ ಸೈಬರ್ ವಂಚನೆ ಪ್ರಕರಣಗಳು ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 50  ದಾಖಲಾಗಿವೆ.

    ಓಟಿಪಿ, ಹಣ ದ್ವಿಗುಣ ಮಾಡಿಸಲಾಗುವುದು, ಉದ್ಯೋಗ ಕೊಡಿಸುವುದು, ೇಸ್‌ಬುಕ್, ಆನ್‌ಲೈನ್ ಬಿಸಿನೆಸ್, ಇನ್ಸ್‌ಟಾಗ್ರಾಂ, ಟೆಲಿಗ್ರಾಂ, ವಾಟ್ಸ್ ಆ್ಯಪ್‌ಗಳಿಗೆ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಡುವುದು, ಎಟಿಎಂ, ಮಕ್ಕಳ ಆಶ್ಲೀಲ ಚಿತ್ರಗಳ ಪ್ರದರ್ಶನ, ಕಸ್ಟಮರ್ ಕೇರ್ ಪ್ರಕರಣಗಳು ಹೀಗೆ ಹತ್ತು ಹಲವು ಪ್ರಕರಣಗಳು ನಿರಂತರವಾಗಿ ಸಂಭವಿಸುತ್ತಲೆ ಇವೆ. ಗ್ರಾಹಕರ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ, ಡೆಬಿಟ್ ಕಾರ್ಡ್‌ಗಳ ಡೇಟಾಗಳನ್ನು ಕದ್ದು ದುರ್ಬಳಕೆ ಮಾಡಿಕೊಂಡು, ನಕಲಿ ಬೆರಳಚ್ಚು ಸೃಷ್ಟಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕಲಾಗುತ್ತಿದೆ.

    ಮೊಬೈಲ್‌ನಲ್ಲಿ ಕೆಲವು ಆ್ಯಪ್‌ಗಳಿಗೆ ವ್ಯಕ್ತಿಯ ಸಂಪೂರ್ಣ ಮಾಹಿತಿ, ಯುಪಿಐ ಆ್ಯಪ್‌ಗಳಿಗೆ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಸಮೇತ ವೈಯಕ್ತಿಕ ವಿವರಗಳನ್ನು ತುಂಬಿಸಲಾಗಿರುತ್ತದೆ. ವಂಚಕರು ಇದರ ಮಾಹಿತಿ ಮೂಲಕ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿ ವಂಚಿಸುತ್ತಿದ್ದಾರೆ.


    * ಮಾಹಿತಿ ಹಂಚಿಕೆ ಮಾಡಿಕೊಳ್ಳಬೇಡಿ
    ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಂದಿ ಬ್ಯಾಂಕ್ ಖಾತೆ ಹೊಂದಿದರೂ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಹೊಂದಿರುವುದಿಲ್ಲ. ಒಂದು ವೇಳೆ ಎಟಿಎಂ ಕಾರ್ಡ್ ಹೊಂದಿದ್ದರೂ ಸಮೀಪದಲ್ಲಿ ಎಟಿಎಂ ಕೇಂದ್ರ ಇರುವುದಿಲ್ಲ. ಇಂತಹವರು ಹಣ ಡ್ರಾ ಮಾಡಲು ಹರಸಾಹಸಪಡುತ್ತಿರುತ್ತಾರೆ. ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಆಧಾರ್ ನಂಬರ್ ಅಥವಾ ಬಯೋಮೆಟ್ರಿಕ್ ಬಳಸಿ ಹಣ ವರ್ಗಾವಣೆ ಅಥವಾ ವಿತ್ ಡ್ರಾ ವಾಡುವ ವ್ಯವಸ್ಥೆಗಾಗಿ ಎಇಪಿಎಸ್ ಅಳವಡಿಸಲಾಗುತ್ತಿದೆ. ಇದರಿಂದಾಗಿ ಅಂಚೆ ಇಲಾಖೆ, ಬ್ಯಾಂಕ್‌ಗಳಿಂದ ಖಾಸಗಿ ಏಜೆನ್ಸಿಯವರು ಅನುಮತಿ ಪಡೆದು ಎಇಪಿಎಸ್ ಪದ್ಧತಿ ಮೂಲಕ ಹಣ ಡ್ರಾ ಮಾಡಿಕೊಡಲು ಹಳ್ಳಿಗಳಿಗೆ ಹೋಗುತ್ತಿದ್ದು, ಇದು ಬಹಳಷ್ಟು ಕಡೆ ದುರ್ಬಳಕೆಯಾಗುತ್ತ್ತಿದೆ. ಖಾತೆದಾರರು ಆಧಾರ್ ನಂಬರ್ ಜತೆಗೆ ಬಯೋಮೆಟ್ರಿಕ್ ಥಂಬ್ ಕೊಟ್ಟಾಗ ಖಾತೆಯಿಂದ ಏಜೆನ್ಸಿಗೆ ಹಣ ವರ್ಗಾವಣೆಯಾಗುತ್ತದೆ. ಆನಂತರ ಖಾತೆದಾರರಿಗೆ ಏಜೆನ್ಸಿಯವರು ಸ್ಥಳದಲ್ಲೇ ಹಣ ನೀಡುತ್ತಾರೆ. ಥಂಬ್ ನೀಡಿರುವುದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಲೆ ಇದೆ.

    * ವಾಹಿತಿ ಸೋರಿಕೆ ಎಲ್ಲಿಂದ ?
    ಬೆರಳಚ್ಚು ನೀಡುವ ಸ್ಥಳಗಳಲ್ಲಿ ಜನರ ಬೆರಳಿನ ಗುರುತನ್ನು ನಕಲಿಯಾಗಿ ಸೃಷ್ಟಿಸಲಾಗುತ್ತಿದೆ. ಆಧಾರ್ ಸಂಖ್ಯೆ ಹಾಗೂ ನಕಲಿ ಬೆರಳಿನ ಗುರುತು ಬಳಸಿ ಹಣ ಪಡೆಯುವುದು ನಡೆಯುತ್ತಿದೆ. ಇದರಿಂದಾಗಿ ಗ್ರಾಹಕರು ಯಾವುದೇ ಸಂದರ್ಭದಲ್ಲಿ ಆಧಾರ್ ನಂಬರ್, ಮೊಬೈಲ್ ನಂಬರ್, ಬಯೋಮೆಟ್ರಿಕ್ ಕೊಡುವ ಮೊದಲು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಸೂಕ್ತ.

    * ಹಣ ವಾಪಸ್ ಕೊಡಿಸಲು ಒತ್ತಾಯ
    ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಥಂಬ್ ನೀಡಿದ್ದಾದ ನಂತರ ಮರುದಿನ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುತ್ತದೆ. ಇದನ್ನು ಗ್ರಾಹಕರು ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಇದಕ್ಕೂ ಬ್ಯಾಂಕಿಗೂ ಯಾವುದೇ ಸಂಬಂಧವಿಲ್ಲ ಎಂದು ಉತ್ತರ ನೀಡುತ್ತಾರೆ ಎಂದು ನೊಂದ ವ್ಯಕ್ತಿ ಪುಟ್ಟರಾಜು ಅಳಲು ತೋಡಿಕೊಂಡರು. ತಾಯಿ ಸರೋಜಮ್ಮ ಖಾತೆಯಿಂದ 8,300 ರೂ., ಮಾವ ಶ್ರೀರಾಮರೆಡ್ಡಿ ಖಾತೆಯಿಂದ 10,000 ರೂ. ಡ್ರಾ ಆಗಿದೆ. ಸರೋಜಮ್ಮ ಬ್ಯಾಂಕ್ ಖಾತೆಯಿದ್ದರೂ ಎಟಿಎಂ, ಆನ್ ಲೈನ್ ಬ್ಯಾಂಕಿಂಗ್ ಬಳಸುತ್ತಿಲ್ಲ. ಆದರೂ ಹಣ ಡ್ರಾ ಆಗಿದೆ. ಇಂತಹ ವಂಚನೆ ಪ್ರಕರಣಗಳು ನಿರಂತರವಾಗಿ ಸಂಭವಿಸುತ್ತಿವೆ. ಹಣ ಕಳೆದುಕೊಂಡಿರುವವರಿಗೆ ವಾಪಸ್ ಕೊಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಕೋಟ್:
    ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಥಂಬ್ ನೀಡುವುದರಿಂದ ಹಣ ವಂಚಿಸುವ ಪ್ರಕರಣಗಳು ಆಗಿಲ್ಲ. ಮೊಬೈಲ್ ಆ್ಯಪ್‌ಗಳಿಂದ ಹೆಚ್ಚಾಗಿ ಆಗುತ್ತಿದ್ದು, ಈ ಕೃತ್ಯಕ್ಕೂ ಕಾವೇರಿ ತಂತ್ರಾಂಶಕ್ಕೂ ಸಂಬಂಧವಿಲ್ಲ. ಆಧಾರ್ ನಂಬರ್ ಲಿಂಕ್ ಮಾಡುತ್ತಿರುವುದರಿಂದ ಎಇಪಿಎಸ್ ಮೂಲಕ ಹಣ ಡ್ರಾ ಮಾಡಿ ಕೆಲವರು ಸೈಬರ್ ಮೂಲಕ ವಂಚನೆ ಮಾಡುತ್ತಿದ್ದಾರೆ. ಬಯೋಮೆಟ್ರಿಕ್ ದುರ್ಬಳಕೆಯಾಗುತ್ತಿದ್ದು, ವಂಚನೆಯನ್ನು ತಡೆಗಟ್ಟಲು ದಾಖಲೆಗಳಲ್ಲಿ ಆಧಾರ್‌ನ ಕೊನೆಯ 4 ಅಂಕಿಗಳನ್ನು ನಮೂದು ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಆಧಾರ್‌ನ ಬಯೋಮೆಟ್ರಿಕ್ ಲಾಕ್ ಮಾಡಿಸಿಕೊಳ್ಳಬೇಕು.
     ಎಂ.ಪ್ರಸಾದ್ ಕುಮಾರ್, ಸಬ್‌ರಿಜಿಸ್ಟ್ರಾರ್

    ಕೋಟ್:
    ಸಾರ್ವಜನಿಕರು ವೈಯಕ್ತಿಕ ವಿಚಾರಗಳನ್ನು ಅನವಶ್ಯಕವಾಗಿ ಎಲ್ಲೂ ಹಂಚಿಕೆಕೊಳ್ಳಬಾರದು. ದೂರವಾಣಿ ಕರೆ, ಸಂದೇಶದ ಮೂಲಕ ಲಿಂಕ್ ಕಳುಹಿಸಿಕೊಟ್ಟು ದಿಕ್ಕು ತಪ್ಪಿಸುವ ಕೆಲಸ ಆನ್‌ಲೈನ್  ವಂಚನೆಗಳು ಮಾಡುತ್ತಾರೆ. ಇದರಿಂದಾಗಿ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು.  ಸಮೀಪದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಲಾಕ್ ಮಾಡಿಸಿ  ವಂಚನೆಯಿಂದ ದೂರವಾಗಿ.
     ಎಸ್.ಆರ್. ಜಗದೀಶ್, ಇನ್‌ಸ್ಪೆಕ್ಟರ್, ಸಿಎನ್‌ಎನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts